Advertisement

ಬಿಜೆಪಿ ಅಭ್ಯರ್ಥಿ ವಿರುದ್ಧ ಕಾರ್ಯಕರ್ತರ ಆಕ್ರೋಶ

02:17 PM May 17, 2018 | |

ರಾಮನಗರ: ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷಕ್ಕೆ ನಿರೀಕ್ಷಿತ ಮತಗಳು ಬಂದಿಲ್ಲ. ಬಿಜೆಪಿ ಅಭ್ಯರ್ಥಿ ಲೀಲಾವತಿ ಪ್ರಚಾರ ಕೈಗೊಳ್ಳದಿರುವುದರಿಂದ ಪಕ್ಷಕ್ಕೆ ಇರುವ ಸಾಂಪ್ರದಾಯಿಕ ಮತಗಳು ಲಭಿಸಿಲ್ಲ ಎಂದು ಬಿಜೆಪಿ ಸ್ಲಂ ಮೋರ್ಚಾ ಅಧ್ಯಕ್ಷ ರಮೇಶ್‌ ಆರೋಪಿಸಿದ್ದಾರೆ. ಲೀಲಾವತಿ ಮತ್ತು ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು ಅವರನ್ನು ಪಕ್ಷದಿಂದ ವಜಾ ಮಾಡುವಂತೆ ಒತ್ತಾಯಿಸಿದ್ದಾರೆ.

Advertisement

ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಕ್ಷೇತ್ರದಲ್ಲಿ ಸುಮಾರು 20 ರಿಂದ 25 ಸಾವಿರ ಸಾಂಪ್ರದಾಯಿಕ ಮತಗಳಿವೆ. ಅಭ್ಯರ್ಥಿ ಲೀಲಾವತಿ ಅವರು ಕ್ಷೇತ್ರಾದ್ಯಂತ ಸಂಚರಿಸಿಲ್ಲ. ಹೀಗಾಗಿ ಪಕ್ಷಕ್ಕೆ ಕೇವಲ 4750 ಮತಗಳು ಮಾತ್ರ ಲಭಿಸಿವೆ. ಪಕ್ಷದ ಪರ ಪ್ರಚಾರಕ್ಕೆ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜ್‌ ಸಹ ಶ್ರಮಿಸಲಿಲ್ಲ ಎಂದರು.

ತಾವು ಕಸಬಾ ಹೋಬಳಿಯ ತಮ್ಮ ಗ್ರಾಮಗಳಿಗೆ ಬಂದು ಪ್ರಚಾರ ಮಾಡುವಂತೆ ಅಭ್ಯರ್ಥಿ ಲೀಲಾವತಿ ಅವರಿಗೆ ಮನವಿ ಮಾಡಿದ್ದೆ. ಆದರೆ ಅವರು ಸಂಪನ್ಮೂಲನದ ನೆಪವೊಡ್ಡಿ ಪ್ರಚಾರಕ್ಕೆ ಬರಲೇ ಇಲ್ಲ ಎಂದು ದೂರಿದರು. ಕಸಬಾ
ಹೋಬಳಿಗೆ ಅಭ್ಯರ್ಥಿ ಬಾರದಿದ್ದರಿಂದ ಮತದಾರರಿಗೆ ಅವರ ಮುಖಪರಿಚಯವೂ ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 

ಲೀಲಾವತಿ ಅವರು ತಮ್ಮ ಸ್ವಗ್ರಾಮ ಮತ್ತು ಹೋಬಳಿಯಲ್ಲಿ ಪ್ರಚಾರ ಮಾಡಿದರೇ ಹೊರತು ಕ್ಷೇತ್ರದ ಇತರೆಡೆ ಅವರ ಪ್ರವಾಸ ಕೈಗೊಳ್ಳಲೇ ಇಲ್ಲ. ತಮ್ಮ ಮತ್ತು ಇತರ ಕಾರ್ಯಕರ್ತರ ದೂರವಾಣಿ ಕರೆಗಳನ್ನು ಸ್ವೀಕರಿಸಲಿಲ್ಲ ಎಂದರು. 

ಚುನಾವಣಾ ಪ್ರಚಾರಕ್ಕೆಂದೆ ಪಕ್ಷ ಚೆಕ್‌ ಮುಲಕ 15 ಲಕ್ಷ ರೂ. ಕೊಟ್ಟಿದೆ. ಪಕ್ಷ ಕೊಟ್ಟ ಆರ್ಥಿಕ ಸಂಪನ್ಮೂಲ ಸಮರ್ಪಕವಾಗಿ ಬಳಕೆಯಾಗಿಲ್ಲ. ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರೆ ಬಹುಶಃ ಪಕ್ಷಕ್ಕೆ ಕನಿಷ್ಠ 20 ರಿಂದ 25 ಸಾವಿರ ಮತಗಳು ದೊರಕುತ್ತಿದ್ದವು ಎಂದು ದೂರಿದರು. 

Advertisement

ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಇತರ ಕಾರ್ಯಕರ್ತರು ಮಾತನಾಡಿ, ಪಕ್ಷ ನೀಡಿದ ಸಂಪನ್ಮೂಲದ ಸಮರ್ಪಕ ಬಳಕೆ ಮಾಡದಿರುವುದು ಮತ್ತು ತಕ್ಕ ಪ್ರಚಾರ ಕೈಗೊಳ್ಳಲದೆ ಪಕ್ಷವನ್ನು ವಂಚಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜ್‌ ಮತ್ತು ಅಭ್ಯರ್ಥಿ ಲೀಲಾವತಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಸ್ವಾಮಿ, ಸಾಮಾಜಿಕ ಜಾಲತಾಣ ಘಟಕ ವಿನೋದ್‌ ಭಗತ್‌, ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಿರಣ್‌ ಕುಮಾರ್‌, ಕೃಷ್ಣ, ಅನಿಲ್‌, ಲೋಕೇಶ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next