Advertisement

ರಾಜ್ಯ ಸರ್ಕಾರಿ ನೌಕರರ ಸಂಘದ ಕ್ರಿಯಾಶೀಲ ಜಿಲ್ಲಾ ಅಧ್ಯಕ್ಷ ಕೆ.ಮಂಜುನಾಥ್‌

11:27 AM Aug 16, 2022 | Team Udayavani |

ಚಿತ್ರದುರ್ಗ ಐತಿಹಾಸಿಕ ಜಿಲ್ಲೆ. ಬ್ರಿಟೀಷರ ಕಾಲದಲ್ಲೇ ಆಡಳಿತ ಕೇಂದ್ರವಾಗಿತ್ತು.100-150 ವರ್ಷಗಳ ಹಿಂದೆಯೇ ಮಾನ್ಯತೆ ಪಡೆದ ಜಿಲ್ಲೆಯಾಗಿತ್ತು. 150 ವರ್ಷಗಳ ಇತಿಹಾಸ ಹೊಂದಿರುವ ನಮ್ಮ ಜಿಲ್ಲಾಧಿಕಾರಿ ಕಚೇರಿ ಇದಕ್ಕೆ ಸಾಕ್ಷಿಯಾಗಿದೆ.ಇಂಥದ್ದೊಂದು ಜಿಲ್ಲೆಯಲ್ಲಿ ಅಂದಿನಿಂದಲೇ ಸರ್ಕಾರಿ ನೌಕರರು ಕೆಲಸ ಮಾಡುತ್ತಿದ್ದಾರೆ. ಆದರೆ ಅವರಿಗೊಂದು ಸಮುದಾಯ ಭವನ ಇಲ್ಲವೆನ್ನುವುದು ನನ್ನನ್ನು ಬಹುವಾಗಿ ಕಾಡುವ ವಿಷಯವಾಗಿತ್ತು. ಈ ಕಾರಣಕ್ಕೆ ನಾನು ಸರ್ಕಾರಿ ನೌಕರರ ಸಂಘದ ಚುನಾವಣೆಗೆ ಸ್ಪರ್ಧೆ ಮಾಡಿದೆ, ಅಧ್ಯಕ್ಷನಾದೆ. ಕಳೆದೆರಡು ವರ್ಷಗಳಿಂದ ಸಮುದಾಯ ಭವನಕ್ಕೆ ಜಾಗ ಹುಡುಕುವುದು, ಶಾಸಕರು-ಸಂಸದರು- ಸಚಿವರಲ್ಲಿ ಅನುದಾನ ಕೇಳುವುದನ್ನು ಮಾಡುತ್ತಿದ್ದೇವೆ. ನಮ್ಮ ಈ ಪ್ರಯತ್ನದ ಅಂತಿಮ ಘಟಕ್ಕೆ ಬಂದು ತಲುಪಿದ್ದೇವೆ.

Advertisement

ಇದಿಷ್ಟೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚಿತ್ರದುರ್ಗ ಜಿಲ್ಲಾ ಅಧ್ಯಕ್ಷ ಕೆ.ಮಂಜುನಾಥ್‌ ಅವರ ಮಾತುಗಳು.

ತೀರಾ ಇತ್ತೀಚೆಗೆ ಅಸ್ತಿತ್ವಕ್ಕೆ ಬಂದ ಜಿಲ್ಲೆಗಳಲ್ಲೇ ಸರ್ಕಾರಿ ನೌಕರರಿಗೆ ಸಮುದಾಯ ಭವನ, ವಸತಿ ವ್ಯವಸ್ಥೆ ಇದೆ. ಆದರೆ ನಮ್ಮ ಸಂಘಕ್ಕೆ 100 ವರ್ಷಗಳ ಇತಿಹಾಸವಿದೆ. ಇಲ್ಲಿಗೆ ಅಗತ್ಯವಾಗಿ ಸಮುದಾಯ ಭವನ ಬೇಕು. ಇದು ನಮ್ಮ ಆದ್ಯತೆ. ಆದರೆ ಈ ವಿಚಾರದಲ್ಲಿ ಒಂದಿಷ್ಟು ನಿರಾಸೆಯಾಗಿದೆ. ಎರಡು ವರ್ಷ ಕಳೆದರೂ ಜಾಗ ಹುಡುಕುವುದರಲ್ಲೇ ಕಳೆದಿದ್ದೇವೆ ಎನ್ನುವ ಬೇಸರವಿದೆ. ನೌಕರರು ಕೇಳುವ ಪ್ರಶ್ನೆಗೆ ಏನು ಉತ್ತರ ಹೇಳುವುದು ಎನ್ನುವಂತಾಗುತ್ತದೆ.

ನಮ್ಮ ಜಿಲ್ಲಾಧಿಕಾರಿಗಳಾದ ಕವಿತಾ ಎಸ್‌. ಮನ್ನಿಕೇರಿ ಅವರು ಸರ್ಕಾರಿ ನೌಕರರ ಸಮುದಾಯ ಭವನಕ್ಕೆ ಜಾಗ ನೀಡುವ ವಿಚಾರದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹೆದ್ದಾರಿ ಬದಿಯ ಉಪಾಧ್ಯ ಹೋಟೆಲ್‌ ಹಿಂಭಾಗದಲ್ಲಿ ಜಾಗ ತೋರಿಸಿದ್ದಾರೆ. ನಮಗೆ ಹಸ್ತಾಂತರ ಆಗುವುದು ಬಾಕಿಯಿದೆ.

ಅನುದಾನ ನೀಡಲಿದ್ದಾರೆ
ಜನಪ್ರತಿನಿಧಿಗಳು
ಭವನಕ್ಕೆ ನಿವೇಶನ ಪಡೆದುಕೊಂಡು ಬನ್ನಿ ನಾವು ಅನುದಾನ ಕೊಡುತ್ತೇವೆ ಎನ್ನುವ ಮಾತುಗಳು ಜಿಲ್ಲೆಯ ಎಲ್ಲ ಶಾಸಕರ ಕಡೆಯಿಂದ ಬಂದಿವೆ. ಶಾಸಕರಾದ ಜಿ.ಎಚ್‌. ತಿಪ್ಪಾರೆಡ್ಡಿ, ಗೂಳಿಹಟ್ಟಿ ಶೇಖರ್‌, ಎಂ.ಚಂದ್ರಪ್ಪ, ಪೂರ್ಣಿಮಾ ಶ್ರೀನಿವಾಸ್‌, ಟಿ.ರಘುಮೂರ್ತಿ, ಸಚಿವರಾದ ಬಿ.ಶ್ರೀರಾಮುಲು, ವಿಧಾನ ಪರಿಷತ್‌ ಸದಸ್ಯ ಕೆ.ಎಸ್‌. ನವೀನ್‌ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಶತಾಯ ಗತಾಯ ಸರ್ಕಾರಿ ನೌಕರರ ಸಮುದಾಯ ಭವನ ಕಟ್ಟುವುದು ನಮ್ಮ ಗುರಿಯಾಗಿದೆ ಎಂಬುದು ಮಂಜುನಾಥ್‌ ಅವರ ಸ್ಪಷ್ಟೋಕ್ತಿ.

Advertisement

ನೌಕರರ ಸಮಸ್ಯೆಗೆ ಸ್ಪಂದನೆಯೇ ಆದ್ಯತೆ
ಸರ್ಕಾರಿ ನೌಕರರು ಒಂದೇ ಕುಟುಂಬದ ಸದಸ್ಯರಿದ್ದಂತೆ. ಯಾರಿಗೇ ಸಮಸ್ಯೆಯಾದರೂ ನಾನು ಹಾಗೂ ನಮ್ಮ ತಂಡ ತಕ್ಷಣ ಸ್ಪಂದಿಸುವ ಕೆಲಸ ಮಾಡುತ್ತಿದೆ. ನೌಕರರಿಗೆ ಸಾಕಷ್ಟು ಸಮಸ್ಯೆಗಳಿರುತ್ತವೆ. ಕೆಲ ಇಲಾಖೆಗಳಲ್ಲಿ ಸಕಾಲಕ್ಕೆ ಸಂಬಳವೇ ಆಗಿರುವುದಿಲ್ಲ. ಪದೋನ್ನತಿ ಆಗುವುದಿಲ್ಲ. ಮೇಲಧಿ ಕಾರಿಗಳ ಜತೆಗೆ ಮಾತನಾಡಿ ಅಂತಹ ಸಮಸ್ಯೆಗಳನ್ನು ಬಗೆಹರಿಸುತ್ತಲೇ ಬಂದಿದ್ದೇವೆ ಎನ್ನುತ್ತಾರೆ ಮಂಜುನಾಥ್‌.

ಕ್ರಿಯಾಶೀಲ ರಾಜ್ಯಾಧ್ಯಕ್ಷರು
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಷಡಾಕ್ಷರಿ ಅವರು ಅತ್ಯಂತ ಕ್ರಿಯಾಶೀಲರು. ಅವರ ಕಾರ್ಯಶೈಲಿಯೇ ನಮಗೆ ಸ್ಫೂರ್ತಿ ನೀಡುತ್ತದೆ. ಷಡಾಕ್ಷರಿ ಅವರು ಶಿವಮೊಗ್ಗದಲ್ಲಿ ವಿಶೇಷವಾದ ಸಮುದಾಯ ಭವನ ಕಟ್ಟಿದ್ದಾರೆ. ಒಂದು ಸಾವಿರದಷ್ಟು ನಿವೇಶನ ಮಾಡಿಸಿ, ಗೃಹ ನಿರ್ಮಾಣ ಮಂಡಳಿ ಹಾಗೂ ಸಹಕಾರಿ ಬ್ಯಾಂಕ್‌ ಮಾಡಿ 50 ಕೋಟಿ ರೂ.ಗೂ ಹೆಚ್ಚು ಸಾಲ ಕೊಡಿಸಿದ್ದಾರೆ.

ಸರ್ಕಾರಿ ನೌಕರರ ದಿನಾಚರಣೆಗೆ ಮನವಿ ಮಾಡಿದ್ದು ನಾವೇ ಕೇಂದ್ರ ಸರ್ಕಾರ ಅಧೀನದಲ್ಲಿ ಬರುವ ಐಎಎಸ್‌ ಅ ಧಿಕಾರಿಗಳಿಗಾಗಿ ಸಿವಿಲ್‌ ಸರ್ವಿಸ್‌ ಡೇ ಆಚರಿಸಲಾಗುತ್ತದೆ. ಅದೇ ರೀತಿ ನಮ್ಮ ರಾಜ್ಯದ ಸರ್ಕಾರಿ ನೌಕರರಿಗೆ ಯಾಕೆ ನಾವು ಸರ್ಕಾರಿ ನೌಕರರ ದಿನ ಆಚರಿಸಬಾರದು ಎಂಬ ಪ್ರಶ್ನೆ ಮೂಡಿದಾಗ ಈ ಸಂಬಂಧ ರಾಜ್ಯಾಧ್ಯಕ್ಷರಿಗೆ ಮನವಿ ಸಲ್ಲಿಸಿ ಈ ಬಗ್ಗೆ ಸರ್ಕಾರದ ಮುಂದೆ ಮಂಡನೆ ಮಾಡಿ ಆಚರಣೆಗೆ ಸಂಬಂ ಧಿಸಿದಂತೆ ಆದೇಶ ಹೊರಡಿಸುವಂತೆ ಮನವಿ ಮಾಡಲಾಯಿತು. ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ರಾಜ್ಯ ಅಧ್ಯಕ್ಷರು ಈ ಸಂಬಂಧವಾಗಿ ಮುಖ್ಯಮಂತ್ರಿಗಳು ಹಾಗೂ ಸರ್ಕಾರದ ಉನ್ನತ ಅ ಧಿಕಾರಿಗಳೊಂದಿಗೆ ಚರ್ಚಿಸಿ ನೌಕರರ ದಿನ ಆಚರಿಸಲು ಆದೇಶ ಮಾಡಿಸಿದ್ದಾರೆ. ಈ ಮನವಿ ಮಾಡಲು ಅವಕಾಶ ಮಾಡಿದ ಚಿತ್ರದುರ್ಗ ಜಿಲ್ಲೆಯ ಸಮಸ್ತ ಸರ್ಕಾರಿ ನೌಕರರಿಗೆ ಹಾಗೂ ನನ್ನನ್ನು ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಎಲ್ಲಾ ನಿರ್ದೇಶಕ ಮಿತ್ರರಿಗೆ, ರಾಜ್ಯ ಲೆಕ್ಕ ಪರಿಶೋಧನೆ, ಲೆಕ್ಕಪತ್ರ ಇಲಾಖೆಯ ಎಲ್ಲಾ ನೌಕರರಿಗೆ , ಅ ಧಿಕಾರಿಗಳಿಗೆ ವಿಶೇಷ ಧನ್ಯವಾದಗಳು.

ಕೆ.ಮಂಜುನಾಥ್‌ ಬೆಳೆದು ಬಂದ ದಾರಿ
ಕೆ.ಮಂಜುನಾಥ್‌ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಚಿಕ್ಕಂದವಾಡಿ ಗ್ರಾಮದವರು. 1981 ಏಪ್ರಿಲ್‌ 2ರಂದು ಜನಿಸಿದರು. ತಂದೆ ದಿ| ಕೃಷ್ಣಮೂರ್ತಿ. ತಾಯಿ ಗಂಗಮ್ಮ. ಓರ್ವ ಸಹೋದರ ಹಾಗೂ ಸಹೋದರಿ ಇದ್ದಾರೆ.ಮೊಳಕಾಲ್ಮೂರು ತಾಲೂಕು ಕೊಂಡ್ಲಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ, ಸ್ವಗ್ರಾಮ ಚಿಕ್ಕಂದವಾಡಿ ಗ್ರಾಮದ ಗುರುಮೂರ್ತಿ ಮಾರಮ್ಮ ಶಾಲೆಯಲ್ಲಿ ಪ್ರೌಢಶಿಕ್ಷಣ, ದಾವಣಗೆರೆಯ ಎಆರ್‌ಜಿ ಕಾಲೇಜಿನಲ್ಲಿ ಪಿಯುಸಿ, ಬಿಎ ಪದವಿ ಪಡೆದಿದ್ದಾರೆ.ಸಹೋದರ ಕೆ.ಅರುಣ ಅಬಕಾರಿ ಇಲಾಖೆಯಲ್ಲಿ ಇನ್ಸ್‌ಪೆಕ್ಟರ್‌, ಸಹೋದರಿ ಕೆ.ಲತಾ ಕೆಎಸ್‌ಆರ್‌ಟಿಸಿ ಎಒ ಆಗಿ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಮಂಜುನಾಥ್‌ ಪತ್ನಿ ಆಶಾ, ಮಕ್ಕಳು ಚಾರ್ವಿ ಎಂ ವೊಲ್ಲೆಪೂರ್‌, ಗೋಕುಲ್‌ ಚಂದ್‌ ಎಂ ವೊಲ್ಲೇಪುರ್‌.

ಕೆ.ಮಂಜುನಾಥ್‌ ಮತ್ತು ತಂಡ ಕೈಗೊಂಡ ಮಹತ್ಕಾರ್ಯಗಳು

-ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾಗಿ ಬಂದ ನಂತರ ಎರಡು ವರ್ಷ ಕ್ರೀಡಾ-ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ.
-ರಾಷ್ಟ್ರಮಟ್ಟದ ಕ್ರೀಡಾ ಸಾಧಕರು, ರಾಷ್ಟ್ರಪತಿ ಪದಕ ಪ್ರಶಸ್ತಿ ಪುರಸ್ಕೃತ ಪೊಲೀಸ್‌ ಅ ಧಿಕಾರಿಗಳಿಗೆ ಅಭಿನಂದನಾ ಕಾರ್ಯಕ್ರಮ.
-ವಿಶ್ವ ಪರಿಸರ ದಿನಾಚರಣೆಯಲ್ಲಿ ಸಂಘದ ಪದಾ ಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರಿಗೆ ಗಡಿಗಳನ್ನು ದತ್ತು ನೀಡುವ ವಿಶೇಷ ಕಾರ್ಯಕ್ರಮ.
-ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸಂಘದಿಂದ ಉಚಿತವಾಗಿ 20 ಸಾವಿರ ಮಾಸ್ಕ್ಗಳ ವಿತರಣೆ.
-ಸರ್ಕಾರಿ ನೌಕರರಿಗೆ ಕೋವಿಡ್‌ ಲಸಿಕೆ ವಿತರಣಾ ಶಿಬಿರಗಳ ಆಯೋಜನೆ.
-ಪ್ರಕೃತಿಯೆಡೆಗೆ ನಮ್ಮ ನಡಿಗೆ ಎಂಬ ಘೋಷಣೆಯೊಂದಿಗೆ ಸಂಘದ ಸದಸ್ಯರ ಜತೆಗೆ ಚಾರಣ.
-ಆರೋಗ್ಯ ಇಲಾಖೆ-ಜಿಲ್ಲಾಡಳಿತದ ಜತೆಗೆ ಮಾತುಕತೆ ನಡೆಸಿ ಕೋವಿಡ್‌ ಬಾ ಧಿತ ನೌಕರರಿಗೆ ಕೋವಿಡ್‌ ಆಸ್ಪತ್ರೆಗಳಲ್ಲಿ ಶೇ.10 ಹಾಸಿಗೆ ಮೀಸಲಿಡುವಂತೆ ಆದೇಶ ಮಾಡಿಸಿದ್ದು.
-ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಸರ್ಕಾರಿ ನೌಕರರಿಗೆ ಉಚಿತ ಆರೋಗ್ಯ ತಪಾಸಣಾ(ಕ್ಯಾನ್ಸರ್‌ ತಪಾಸಣೆ) ಶಿಬಿರದ ಆಯೋಜನೆ.
-ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಒಂದು ದಿನದ ಪರೀûಾ ಪೂರ್ವ ತರಬೇತಿ ಕಾರ್ಯಾಗಾರ.

ಕುಟುಂಬದ ಜವಾಬ್ದಾರಿಗೆ ಹೆಗಲು
ತಂದೆ ಕೃಷ್ಣಮೂರ್ತಿ ಅವರ ನಿಧನರಾದ ನಂತರ ಕುಟುಂಬದ ಜವಾಬ್ದಾರಿ ಮಂಜುನಾಥ್‌ ಅವರು ಹೊತ್ತುಕೊಳ್ಳುತ್ತಾರೆ. ಚಿತ್ರದುರ್ಗ ಜಿಪಂ ಇಂಜಿನಿಯರಿಂಗ್‌ ವಿಭಾಗದ ಲೆಕ್ಕಪತ್ರ ವಿಭಾಗದಲ್ಲಿ 2003ರಿಂದ ವೃತ್ತಿ ಜೀವನ ಆರಂಭಿಸಿದ ಅವರು, 2017ರಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಬಡ್ತಿ ಪಡೆದಿದ್ದಾರೆ. 2019ರಲ್ಲಿ ರಾಜ್ಯ ಲೆಕ್ಕ ಪರಿಶೋಧಕರ ಮತ್ತು ಲೆಕ್ಕಪತ್ರ ಇಲಾಖೆಯಿಂದ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿ ನಂತರ ಜಿಲ್ಲಾ ಅಧ್ಯಕ್ಷರಾಗಿ ಚುನಾಯಿತರಾದರು.

ನಾಯಕತ್ವಕ್ಕೆ ಎನ್‌ಸಿಸಿ ಸ್ಫೂರ್ತಿ
ಮೂಲತಃ ವಾಲಿಬಾಲ್‌ ಆಟಗಾರರಾಗಿರುವ ಕೆ.ಮಂಜುನಾಥ್‌, ಕಾಲೇಜು ಹಂತದಿಂದಲೇ ಎನ್‌ಸಿಸಿ ಕೆಡೆಟ್‌. ಬರೋಬ್ಬರಿ 30 ಎನ್‌ಸಿಸಿ ಕ್ಯಾಂಪ್‌ಗ್ಳಲ್ಲಿ ಭಾಗವಹಿಸುವ ಮೂಲಕ ರಾಜ್ಯದ ಎಲ್ಲ ಜಿಲ್ಲೆಗಳು, ದೆಹಲಿ, ಪಂಜಾಬ್‌, ರಾಜಸ್ಥಾನ, ಮಹಾರಾಷ್ಟ್ರಗಳಲ್ಲಿ ಪ್ರವಾಸ ಮಾಡುವ ಮೂಲಕ ಬದುಕಿಗೆ ಮಹತ್ವದ ತಿರುವು ಸಿಕ್ಕಿದೆ. ಅಲ್ಲಿಂದಲೇ ನಾಯಕತ್ವದ ಗುಣ ಬಂದಿದೆ ಎಂದು ಸ್ಮರಿಸಿಕೊಳ್ಳುತ್ತಾರೆ.

ಸದಾಶಯಗಳ ಕನಸುಗಾರ
ಎಲ್ಲ ಸರ್ಕಾರಿ ನೌಕರರಿಗೆ ಇಲಾಖೆಗಳಲ್ಲಿ ಅನಾವಶ್ಯಕವಾಗಿ ತೊಂದರೆಯಾಗದಂತೆ ನೆಮ್ಮದಿಯಿಂದ ಜೀವನ ಮಾಡಲು ಸಿಗಬೇಕಾದ ಸರ್ಕಾರದ ಸೌಲಭ್ಯಗಳನ್ನು ನ್ಯಾಯಯುತವಾಗಿ ಕೊಡಿಸಬೇಕಿದೆ. ಕಡಿಮೆ ದರದಲ್ಲಿ ನೌಕರರಿಗೆ ನಿವೇಶನ, ಒಂದೇ ಸೂರಿನಡಿ ವಾಸ ಮಾಡಲು ವಸತಿ ಸಮುತ್ಛಯಗಳು ಇಂದಿನ ಅಗತ್ಯ. ಈ ನಿಟ್ಟಿನಲ್ಲಿ ಸರ್ಕಾರ ಎಲ್ಲ ಜಿಲ್ಲೆಗಳಲ್ಲೂ ಹತ್ತು ಎಕರೆ ಜಮೀನು ಮೀಸಲಿಡಬೇಕು. ಸರ್ಕಾರಿ ನೌಕರರ ಸಮುದಾಯ ಭವನಕ್ಕೂ 5ಎಕರೆ ಜಾಗ ಮೀಸಲಿಟ್ಟರೆ ನೌಕರರು ಪ್ರಾಮಾಣಿಕವಾಗಿ ಕೆಲಸ ಮಾಡಲು ಅನುಕೂಲವಾಗುತ್ತದೆ.

ಸಾರ್ವಜನಿಕರೇ
ನಮ್ಮ ದೇವರು
ಸರ್ಕಾರಿ ನೌಕರರು ಸಾರ್ವಜನಿಕರ ಜತೆಗೆ ಗೌರವದಿಂದ ಇರಬೇಕಾಗುತ್ತದೆ. ಅವರ ತೆರಿಗೆ ಹಣದಲ್ಲೇ ನಮ್ಮ ಜೀವನ ಇದೆ. ಇಂದು ಕೆಲಸ ಆಗದಿದ್ದರೆ ನಾಳೆ ಮಾಡಿ ಕೊಡುತ್ತೇವೆ ಎಂದು ಸೌಜನ್ಯದಿಂದ ಹೇಳ್ಳೋಣ. ಯಾರನ್ನೂ ಅನಗತ್ಯ ಅಲೆದಾಡಿಸಬಾರದು. ನಮ್ಮ ಮೇಲೆ ವಿಶ್ವಾಸ ಬರುವಂತೆ ನಡೆದುಕೊಳ್ಳಬೇಕು. ಕರ್ತವ್ಯದಲ್ಲಿ ಮೊದಲ ಆದ್ಯತೆ ಸಾರ್ವಜನಿಕರಿಗೆ ಇರಲಿ ಎನ್ನುವುದು ನಮ್ಮ ಆಶಯ.

ನೌಕರರಿಗೆ ಹಲ್ಲೆ-ಕಿರುಕುಳ ನಿಲ್ಲಲಿ
ಯಾವುದೇ ನೌಕರರಿಗೆ ಕಿರುಕುಳ, ಹಲ್ಲೆ ಮಾಡುವುದು ನಿಲ್ಲಬೇಕು. ವಿಶೇಷವಾಗಿ ಮಹಿಳಾ ನೌಕರರ ಮೇಲೆ ದಬ್ಟಾಳಿಕೆ ಆಗಬಾರದು. ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಸರ್ಕಾರ ಭರ್ತಿ ಮಾಡಿಕೊಳ್ಳುವ ಮೂಲಕ ನೌಕರರ ಮೇಲಿನ ಒತ್ತಡ ಕಡಿಮೆ ಮಾಡಬೇಕು.

ಗುರುಭವನ ಬಿಟ್ಟು ಕೊಡಿ
ಚಿತ್ರದುರ್ಗ ಜಿಲ್ಲೆಯಲ್ಲಿ ಅತೀ ಹೆಚ್ಚು ನೌಕರರನ್ನು ಹೊಂದಿರುವ ಶಿಕ್ಷಣ ಇಲಾಖೆಯ ನೌಕರರು ತಮ್ಮ ಒಂದು ದಿನದ ವೇತನ ನೀಡುವ ಮೂಲಕ ನಿರ್ಮಿಸಿರುವ ಗುರುಭವನವನ್ನು ಜಿಲ್ಲಾಡಳಿತ ಚುನಾವಣಾ ಕಾರ್ಯಕ್ಕೆ ಬಳಸಿಕೊಂಡಿದೆ. ಶಿಕ್ಷಕರ ಸಾಂಸ್ಕೃತಿಕ ಅಥವಾ ಶೈಕ್ಷಣಿಕ ಸಭೆ- ಸಮಾರಂಭಗಳನ್ನು ನಡೆಸಲು ಯಾವುದೇ ಜಾಗವಿಲ್ಲದೆ ಹಣ ನೀಡಿ ರಂಗಮಂದಿರ ಅಥವಾ ಖಾಸಗಿ ಸಮುದಾಯ ಭವನಗಳನ್ನು ಅವಲಂಬಿಸಬೇಕಾಗಿದೆ. ಆದ್ದರಿಂದ ನೌಕರರ ಅಥವಾ ಶಿಕ್ಷಕರ ಚಟುವಟಿಕೆಗಳನ್ನು ನಡೆಸಲು ಗುರುಭವನವನ್ನು ಜಿಲ್ಲಾಡಳಿತ ಆದಷ್ಟು ಬೇಗ ಬಿಟ್ಟು ಕೊಡಲು ಮನವಿ ಮಾಡುತ್ತೇನೆ

ನಗದು ರಹಿತ ಚಿಕಿತ್ಸೆ ದೊಡ್ಡ ಹೋರಾಟ
ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಷಡಾಕ್ಷರಿ ಅವರು ಸರ್ಕಾರಿ ನೌಕರರು ಹಾಗೂ ಅವರ ಅವಲಂಬಿತರಿಗೆ ನಗದು ರಹಿತ ಚಿಕಿತ್ಸೆ ದೊರೆಯುವಂತೆ ಮಾಡಲು ಸಂಘದ ಮೂಲಕ ದೊಡ್ಡ ಹೋರಾಟವನ್ನೇ ಮಾಡಿದ್ದಾರೆ. ಕೆಲವೇ ದಿನಗಳಲ್ಲಿ ಇದು ಜಾರಿಯಾಗುವ ಭರವಸೆ ಇದೆ. ಇದರಿಂದ 1526 ಕಾಯಿಲೆಗಳಿಗೆ ಚಿಕಿತ್ಸೆ ಸಿಗುತ್ತದೆ.

ವರ್ಗಾವಣೆ ನಿಯಮ ಪಾಲಿಸಲಿ
ಕಂದಾಯ ಇಲಾಖೆ, ಆರೋಗ್ಯ ಇಲಾಖೆ, ಆರ್‌ಡಿಪಿಆರ್‌, ಪೊಲೀಸ್‌ ಇಲಾಖೆ, ಶಿಕ್ಷಣ ಇಲಾಖೆಗಳ ನೌಕರರ ವರ್ಗಾವಣೆಗಳಿಂದ ನೌಕರರು ಬೇಸತ್ತಿದ್ದಾರೆ. ನಿಯಮ ಬದ್ಧವಾಗಿ ನಿಗ ದಿತ ಅವಧಿ ಯಲ್ಲಿ ಮುಗಿಸಬೇಕು. ವರ್ಷಪೂರ್ತಿ ಮಾಡಬಾರದು.

ಸರ್ಕಾರಿ ನೌಕರರ ಸಂಘದ ಮುಂದಿರುವ ದೊಡ್ಡ ಸವಾಲುಗಳು
7ನೇ ವೇತನ ಆಯೋಗ ರಚನೆ ಮತ್ತು ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರಕ್ಕೆ ಸಮಾನವಾದ ವೇತನ ಜಾರಿಗೆ, ಈಗಾಗಲೇ ಪಶ್ಚಿಮ ಬಂಗಾಳ, ರಾಜಸ್ಥಾನ, ಹರಿಯಾಣ, ಚಂಡಿಗಡ, ಆಂಧ್ರಪ್ರದೇಶ, ಸರ್ಕಾರಗಳು ತಮ್ಮ ಸರ್ಕಾರಿ ನೌಕರರಿಗೆ ಅನುಕೂಲವಾಗುವ ರೀತಿಯಲ್ಲಿ ಎನಿ³ಎಸ್‌ ರದ್ದುಪಡಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಅದರಂತೆ ಕರ್ನಾಟಕದಲ್ಲಿಯೂ ಸರ್ಕಾರಿ ನೌಕರರಿಗೆ ಮರಣ ಶಾಸನ ವಾಗಿರುವ ಎನಿ³ಎಸ್‌ ರದ್ದುಪಡಿಸಿ ಒಪಿಎಸ್‌ ಜಾರಿಗೊಳಿಸುವುದು.

ಸದಸ್ಯತ್ವ ಶುಲ್ಕ ಪ್ರತಿ ವರ್ಷ ಪಾವತಿಸಿ
ಸರ್ಕಾರಿ ನೌಕರರ ಸಂಘಕ್ಕೆ ಪ್ರತಿ ವರ್ಷ 200 ರೂ. ಸದಸ್ಯತ್ವ ಶುಲ್ಕವನ್ನು ಫೆಬ್ರವರಿ ತಿಂಗಳಲ್ಲೇ ಜಮಾ ಮಾಡಬೇಕಿದೆ. ಇದರಿಂದ ಪ್ರತಿಭಾ ಪುರಸ್ಕಾರ, ವಿಶೇಷ ಕಾರ್ಯಕ್ರಮ ನಡೆಯುತ್ತವೆ. ಇತರೆ ಕಾರ್ಯಕ್ರಮಗಳ ವ್ಯವಸ್ಥೆಗೂ ಅನುಕೂಲವಾಗಲಿದೆ.

ವೇತನ ಸಕಾಲಕ್ಕೆ ಸಿಗಲಿ
ಸರ್ಕಾರಿ ನೌಕರರು ಮಾಸಿಕ ವೇತನವನ್ನು ನಂಬಿಕೊಂಡಿರುವ ಮಧ್ಯಮ ವರ್ಗದವರು. ತಿಂಗಳ ನಂತರ ಮಕ್ಕಳ ವಿದ್ಯಾಭ್ಯಾಸ ಖರ್ಚು, ದಿನನಿತ್ಯದ ಸಾಮಾನುಗಳ ಖರೀದಿ, ಬ್ಯಾಂಕ್‌ ಸಾಲಗಳ ತಿಳುವಳಿ, ತಂದೆ-ತಾಯಿಗಳ, ಹೆಂಡತಿ-ಮಕ್ಕಳ, ಕುಟುಂಬದ ಸದಸ್ಯರ, ಆರೋಗ್ಯದ ಜವಾಬ್ದಾರಿ, ನಿಗದಿತ ಸಮಯಕ್ಕೆ ಸರಿಯಾಗಿ ವೇತನ ಭತ್ಯೆಗಳನ್ನು ನೀಡಲು ಅಧಿಕಾರಿಗಳು ಗಮನಹರಿಸಬೇಕು.

-ಕೇಂದ್ರ ಸರ್ಕಾರಿ ನೌಕರರಿಗೆ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರತಿ ತಿಂಗಳು ಎಜುಕೇಶನ್‌ ಅಲಯನ್ಸ್‌ ನೀಡಲಾಗುತ್ತಿದೆ. ಅದೇ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲು ರಾಜ್ಯಾಧ್ಯಕ್ಷರಿಗೆ ಮನವಿ ಮಾಡಲಾಗಿದೆ.
– ಸರ್ಕಾರಿ ನೌಕರರಿಗೆ ಕಚೇರಿಗಳಲ್ಲಿ ನೆಮ್ಮದಿಯಿಂದ ಕೆಲಸ ಮಾಡುವ ವಾತಾವರಣ ಸೃಷ್ಟಿಯಾಗಬೇಕು.
– ವಿದೇಶಿ ಪ್ರಯಾಣ ಮಾಡುವ ನೌಕರರಿಗೆ, ವಿದೇಶಗಳಲ್ಲಿ ವ್ಯಾಸಂಗ ಮಾಡುತ್ತಿರುವ ನೌಕರರ ಮಕ್ಕಳನ್ನು ಭೇಟಿ ಮಾಡಲು, ಪ್ರವಾಸ ಮಾಡಲು ಅಪೇಕ್ಷಿಸುವ ನೌಕರರು ಕೇಂದ್ರ ಸರ್ಕಾರ ಎ ಮತ್ತು ಬಿ ದರ್ಜೆಯ ನೌಕರರಿಗೆ ಅವಕಾಶ ಕಲ್ಪಿಸಿರುವಂತೆ ಹಾಗೂ ಓಡಿಸಾ ಸರ್ಕಾರದಲ್ಲಿ ತನ್ನ ಸರ್ಕಾರಿ ನೌಕರರಿಗೆ ನೀಡಿರುವಂತೆ ಯಾವುದೇ ಅನುಮತಿ ಇಲ್ಲದೆ ವಿದೇಶ ಪ್ರವಾಸ ಮಾಡಲು ಅವಕಾಶ ಕಲ್ಪಿಸುವುದು.
– ಸರ್ಕಾರಿ ಕಾರ್ಯಕ್ರಮಗಳನ್ನು ಸರ್ಕಾರಿ ಯೋಜನೆಗಳನ್ನು, ಸರ್ಕಾರದ ರೂಪುರೇಷೆಗಳನ್ನು, ಸರ್ಕಾರದ ಆದೇಶಗಳನ್ನು, ಸರ್ಕಾರದ ಸವಲತ್ತುಗಳನ್ನು, ಬಡವರಿಗೆ, ನಿರ್ಗತಿಕರಿಗೆ, ಶೋಷಿತರಿಗೆ, ತಳ ಸಮುದಾಯದವರಿಗೆ, ಜನಸಾಮಾನ್ಯರಿಗೆ ತಲುಪಿಸುವ ಸಂಪರ್ಕ ಸೇತುವೆಯಾಗಿ ಕೆಲಸ ನಿರ್ವಹಿಸುತ್ತಿರುವ ಸರ್ಕಾರಿ ನೌಕರರಿಗಾಗಿ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಸರ್ಕಾರಿ ನೌಕರರ ಸಮುದಾಯ ಭವನ ನಿರ್ಮಿಸಿಕೊಳ್ಳಲು ಜಮೀನು ಕಾಯ್ದಿರಿಸಿ ಮಂಜೂರಾತಿ ಮಾಡಿ ನೌಕರರ ಹಿತ ಕಾಪಾಡುವುದು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಈವರೆಗೂ ನೌಕರರಿಗಾಗಿ ಮಾಡಿರುವ ಅನುಕೂಲಗಳು
-ಅನಾಮಧೇಯ ಪತ್ರಗಳಿಗೆ ಕಡಿವಾಣ
-ಶವ ಸಂಸ್ಕಾರದ ವೆಚ್ಚ 15,000ಗಳಿಗೆ ಹೆಚ್ಚಳ
-ಜಿಲ್ಲಾ ಮಟ್ಟದಲ್ಲಿ ಜಂಟಿ ಸಮಾಲೋಚನೆ ಸಮಿತಿ ರಚನೆ
-ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ವೃಂದ ಮತ್ತು ನೇಮಕಾತಿ ತಿದ್ದುಪಡಿಗಳಿಗೆ ಕ್ರಮ
-ಸರ್ವೋತ್ತಮ ಸೇವಾ ಪ್ರಶಸ್ತಿ ಸಂಖ್ಯೆಯ ಹೆಚ್ಚಳ
-ಕೆಜಿಐಡಿ ಇಲಾಖೆಯ ಗಣಕೀಕರಣ
-ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಿಗೆ ಎಲ್ಲಾ ಅವಧಿಯಲ್ಲಿಯೂ ವಿಧಾನಸೌಧಕ್ಕೆ ಪ್ರವೇಶ
-ಸರ್ಕಾರಿ ನೌಕರರ ದಿನಾಚರಣೆಯ ಆಚರಣೆಗೆ 2021 ರಲ್ಲಿ ಆದೇಶ
-ಡಯಾಲಿಸಿಸ್‌ ಮತ್ತು ಕ್ಯಾನ್ಸರ್‌ ಪೀಡಿತ ಸರ್ಕಾರಿ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ ಮಂಜೂರು
-ಕೋವಿಡ್‌ ಕರ್ತವ್ಯ ನಿರತ ನೌಕರರು ನಿಧನರಾದ ಸಂದರ್ಭದಲ್ಲಿ 30 ಲಕ್ಷಗಳ ವಿಮಾ ಪರಿಹಾರ
-ಎಲ್ಲಾ ಇಲಾಖೆಗಳಲ್ಲಿ ವರ್ಷಕ್ಕೆ ಎರಡು ಬಾರಿ ಡಿಪಿಸಿ ಅಥವಾ ಇಲಾಖಾ ಪದೋನ್ನತಿ ಸಮಿತಿ ಸಭೆ ಏರ್ಪಡಿಸಿ ಪದೋನ್ನತಿ ನೀಡುವುದು.
-ಹಬ್ಬದ ಮುಂಗಡ 10,000 ದಿಂದ 25000 ಕ್ಕೆ ಹೆಚ್ಚಳ
-ಎಚ್‌ಆರ್‌ಎಂಎಸ್‌-2 ಜಾರಿಗೆ ತರುವ ಮೂಲಕ ಸರ್ಕಾರಿ ನೌಕರರ 25 ರಿಂದ 30 ಸೇವೆಗಳನ್ನು ಆನ್‌ಲೈನ್‌ ತಂತ್ರಾಂಶದಲ್ಲಿ ಅಳವಡಿಸುವುದು.
-ಕೆಜಿಐಡಿ ವಿಮಾ ಸೌಲಭ್ಯವನ್ನು ಈಗಿರುವ 55 ವರ್ಷಗಳ ಅವಧಿಯಿಂದ ಅರವತ್ತು ವರ್ಷಗಳಿಗೆ ಹೆಚ್ಚಳ ಮಾಡುವುದು.

ಎಲ್ಲ ಅಧಿಕಾರಿಗಳಿಗೂ ಧನ್ಯವಾದ
ಚಿತ್ರದುರ್ಗ ಜಿಲ್ಲೆಯಲ್ಲಿ ಜಿಲ್ಲಾಧಿ ಕಾರಿಗಳಿಂದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಎಲ್ಲ ಅಧಿ ಕಾರಿಗಳು, ನೌಕರರು ನನಗೆ ಹಾಗೂ ಸರ್ಕಾರಿ ನೌಕರರ ಸಂಘದ ನಮ್ಮ ತಂಡಕ್ಕೆ ಸಹಕಾರ ನೀಡುತ್ತಿದ್ದಾರೆ. ಎಲ್ಲರಿಗೂ ಈ ಮೂಲಕ ಧನ್ಯವಾದ ತಿಳಿಸುತ್ತೇನೆ. ಸರ್ಕಾರದ ಎಲ್ಲ ಇಲಾಖೆಗಳ ಜತೆಗೆ ನಂಟು ಹೊಂದಿರುವ ಖಜಾನೆ ಇಲಾಖೆ ಎಲ್ಲ ನೌಕರರ ಜತೆಗೆ ಉತ್ತಮ ಸಂಬಂಧ ಹೊಂದಿರುವುದು ಶ್ಲಾಘನೀಯ ಎಂದು ಮಂಜುನಾಥ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

– ಶ್ರೀನಿವಾಸ ಟಿ.ಜಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next