Advertisement

ಚುರುಕು ಪಡೆದ ಕೃಷಿ ಚಟುವಟಿಕೆ, ಕೋಟ ಹೋಬಳಿಯಲ್ಲಿ ನಾಟಿ ಆರಂಭ

07:49 AM Jun 06, 2020 | Team Udayavani |

ಕೋಟ: ನಿಸರ್ಗ ಚಂಡಮಾರುತದ ಅಬ್ಬರದ ಜತೆಗೆ ಮುಂಗಾರಿನ ಆಗಮನವಾಗಿದ್ದು ಕರಾವಳಿಯಲ್ಲಿ ಭತ್ತದ ಬೇಸಾಯ ಗರಿಗೆದರಿದೆ. ಕೋಟ ಹೋಬಳಿಯ ಕಾರ್ಕಡದಲ್ಲಿ ಸಾಕಷ್ಟು ಮುಂಚಿತವಾಗಿ ನೇಜಿ ಸಿದ್ಧಪಡಿಸಿಕೊಂಡಿದ್ದು ಈಗಾಗಲೇ ನಾಟಿ ಕಾರ್ಯ ಕೂಡ ಆರಂಭಿಸಿದ್ದಾರೆ ಹಾಗೂ ಹಲವು ಕಡೆಗಳಲ್ಲಿ ನೇಜಿ ತಯಾರಿ ನಡೆದಿದೆ. ಕಳೆದ ಋತುವಿನಲ್ಲಿ ಮುಂಗಾರು ಸಾಕಷ್ಟು ವಿಳಂಬವಾಗಿ ರೈತನಿಗೆ ಸಮಸ್ಯೆಯಾಗಿತ್ತು. ಆದರೆ ಈ ಬಾರಿ ಜೂನ್‌ ಮೊದಲ ವಾರದಲ್ಲೇ ಮಳೆಯಾಗಿರುವುದರಿಂದ ಸಾಕಷ್ಟು ಅನುಕೂಲವಾಗಿದೆ.

Advertisement

ನೇರ ಬಿತ್ತನೆಗೆ ಒಲವು
ಕಾರ್ಮಿಕರ ಕೊರತೆ, ಹೆಚ್ಚು ಶ್ರಮ ಮುಂತಾದ ಕಾರಣಗಳಿಗಾಗಿ ಸಾಂಪ್ರದಾಯಿಕ ಕೃಷಿ ವಿಧಾನದಿಂದ ರೈತ ದೂರವಾಗುತ್ತಿದ್ದು, ನೇರ ಬಿತ್ತನೆ ಕಡೆಗೆ ಮನಸ್ಸು ಮಾಡುತ್ತಿದ್ದಾನೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಎಲ್ಲಾ ಕಡೆಗಳಲ್ಲಿ ನೇರ ಬಿತ್ತನೆ, ಕೂರಿಗೆ, ಸಾಲು ಬೀಜ, ಡ್ರಮ್‌ಸೀಡರ್‌ ಮತ್ತು ಯಾಂತ್ರೀಕೃತ ನಾಟಿ ಹೆಚ್ಚಾಗಿ ಕಂಡುಬರುತ್ತಿದೆ.

ಈ ಬಾರಿ ಕೃಷಿ ಚಟುವಟಿಕೆ ಹೆಚ್ಚುವ ನಿರೀಕ್ಷೆ
ಲಾಕ್‌ಡೌನ್‌ ಸಮಸ್ಯೆಯಿಂದಾಗಿ ಹಲವು ಮಂದಿಗೆ ಉದ್ಯೋಗವಿಲ್ಲವಾಗಿದೆ ಹಾಗೂ ಹೊರ ಜಿಲ್ಲೆ, ಹೊರ ರಾಜ್ಯದಲ್ಲಿರುವವರು ಸಾಕಷ್ಟು ಜನ ಗ್ರಾಮೀಣ ಭಾಗಕ್ಕೆ ಆಗಮಿಸಿದ್ದಾರೆ. ಹೀಗಾಗಿ ಅವರಲ್ಲಿ ಒಂದಷ್ಟು ಮಂದಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಲಿದ್ದು ಬೇಸಾಯದ ಪ್ರಮಾಣ ಹೆಚ್ಚಳವಾಗುವ ನಿರೀಕ್ಷೆ ಇದೆ ಮತ್ತು ಹಡವು ಹಾಕಿದ ಜಮೀನುಗಳು ಹಸಿರಾಗುವ ಲಕ್ಷಣವಿದೆ.

ಬ್ರಹ್ಮಾವರ ತಾಲೂಕು 11,640 ಹೆಕ್ಟೇರ್‌ ನಿರೀಕ್ಷೆ
ಬ್ರಹ್ಮಾವರ ತಾಲೂಕಿನ ಕೋಟ ಹೋಬಳಿಯಲ್ಲಿ 5,200 ಹೆಕ್ಟೇರ್‌ ಹಾಗೂ ಬ್ರಹ್ಮಾವರ ಹೋಬಳಿಯಲ್ಲಿ 6,440ಹೆಕ್ಟೇರ್‌ ಸೇರಿದಂತೆ ಒಟ್ಟು 11,640 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯುವ ನೀರಿಕ್ಷೆ ಇದೆ ಹಾಗೂ ಕೋಟದಲ್ಲಿ 420 ಕ್ವಿಂಟಾಲ್‌ ಮತ್ತು ಬ್ರಹ್ಮಾವರದಲ್ಲಿ 338 ಕ್ವಿಂಟಾಲ್‌ ಬಿತ್ತನೆ ಬೀಜ ಮಾರಾಟವಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರೈತರು ಹೆಚ್ಚು ಆಸಕ್ತಿಯಿಂದ ಕೃಷಿಯಲ್ಲಿ ತೊಡಗಿದ್ದಾರೆ.
– ಮೋಹನ್‌ರಾಜ್‌, ಎ.ಡಿ.ಎ. ಕೃಷಿ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next