ಮುಂಬೈ:ಆ್ಯಕ್ಟಿವಾ ಸ್ಕೂಟರ್ ಮಾಡೆಲ್(ಮಾದರಿ) ದೇಶೀಯ ಮಾರುಕಟ್ಟೆಯಲ್ಲಿ 2.5 ಕೋಟಿಗೂ ಅಧಿಕ ಗ್ರಾಹಕರನ್ನು ಪಡೆದುಕೊಂಡಿರುವುದಾಗಿ ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ(ಎಚ್ ಎಂಎಸ್ ಐ) ಗುರುವಾರ (ಜನವರಿ 07,2021) ತಿಳಿಸಿದೆ.
ದೇಶದಲ್ಲಿ ದ್ವಿಚಕ್ರ ವಾಹನಕ್ಕೆ ಭಾರೀ ಬೇಡಿಕೆ ಇರುವ ಸಂದರ್ಭದಲ್ಲಿಯೇ ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಿಕಾ ಕಂಪನಿಯಾದ ಹೋಂಡಾ 2001ರಲ್ಲಿ ಭಾರತದಲ್ಲಿ ಮೊದಲ ಬಾರಿ ಆ್ಯಕ್ಟಿವಾ ಅನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿತ್ತು.
ಭಾರತದ ದ್ವಿಚಕ್ರ ವಾಹನಗಳ ತಯಾರಿಕೆಯ ಇತಿಹಾಸದಲ್ಲಿಯೇ ಹೊಸ ದಾಖಲೆ ಸೃಷ್ಟಿಸಿದ ಹೆಗ್ಗಳಿಕೆ ಹೋಂಡಾ ಸ್ಕೂಟರ್ ಬ್ರ್ಯಾಂಡ್ ನದ್ದಾಗಿದ್ದು, ಬರೋಬ್ಬರಿ 2.5 ಕೋಟಿ ಗ್ರಾಹಕರನ್ನು ಪಡೆಯುವ ಮೂಲಕ ಯಶಸ್ಸು ಗಳಿಸಿರುವುದಾಗಿ ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಪ್ರಕಟಣೆಯಲ್ಲಿ ತಿಳಿಸಿದೆ.
ಆರಂಭದಲ್ಲಿ ಒಂದು ಕೋಟಿ ಗ್ರಾಹಕರ ಗುರಿ ತಲುಪಲು ಆ್ಯಕ್ಟಿವಾ ಬ್ರ್ಯಾಂಡ್ ಹದಿನೈದು ವರ್ಷಗಳ ಕಾಲ ತೆಗೆದುಕೊಂಡಿದ್ದು, ನಂತರದ ಐದು ವರ್ಷಗಳಲ್ಲಿಯೇ 2.5 ಕೋಟಿ ಗ್ರಾಹಕರನ್ನು ಪಡೆದಿರುವುದಾಗಿ ವಿವರಿಸಿದೆ.
ಇದನ್ನೂ ಓದಿ:ಎಚ್ಚರ…ಪ್ಲೇ ಸ್ಟೋರ್ ನಿಂದ ನಕಲಿ ಕೋ ವಿನ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬೇಡಿ!
ಕಳೆದ 20 ವರ್ಷಗಳಿಂದ ತಂತ್ರಜ್ಞಾನದ ಆವಿಷ್ಕಾರದಲ್ಲಿ ಆ್ಯಕ್ಟಿವಾ ಮುಂಚೂಣಿಯಲ್ಲಿದ್ದು, ಕೆಲವೊಮ್ಮೆ ದಶಕಗಳ ಮೊದಲೇ ನೂತನ ಮಾದರಿಯ ದ್ವಿಚಕ್ರ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸಿತ್ತು ಎಂದು ಎಚ್ ಎಂಎಸ್ ಐನ ಆಡಳಿತ ನಿರ್ದೇಶಕ ಅಟ್ಸುಶಿ ಒಗಾಟಾ ತಿಳಿಸಿದ್ದಾರೆ.