ಯಾದಗಿರಿ: ರೈಲ್ವೆ ಇಲಾಖೆಗೆ ವಿದ್ಯುತ್ ಪೂರೈಕೆಗಾಗಿ ಜಿಲ್ಲೆಯ ಖಾನಾಪುರದಿಂದ ಮುದ್ನಾಳ ರೈಲ್ವೆ ಟ್ರಾ ್ಯಕ್‌ವರೆಗೆ ವಿದ್ಯುತ್ ಪ್ರಸರಣ ಮಾರ್ಗ ಹಾಗೂ ಟಾವರ್ ನಿರ್ಮಿಸಲಾಗುತ್ತಿದ್ದು, ಮಾರ್ಗ ಹಾದು ಹೋಗುವ ಸಂಬಂಧಿಸಿದ ಭೂ ಮಾಲೀಕರಿಗೆ ಸಮರ್ಪಕ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಭರವಸೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲೆಯ ಖಾನಾಪುರ ಗ್ರಾಮದಲ್ಲಿರುವ 110/11 ಕೆ.ವಿ ಉಪ ಕೇಂದ್ರದಿಂದ ಹಾದು ಹೋಗುವ ವಿದ್ಯುತ್ ಪ್ರಸರಣ ಮಾರ್ಗಗಳು ಹಾಗೂ ಟಾವರ್ ನಿರ್ಮಿಸುವ ಸಲುವಾಗಿ ಸಂಬಂಧಿಸಿದ ಜಮೀನಿನ ಮಾಲೀಕರಿಗೆ ಪರಿಹಾರದ ಮೊತ್ತ ನಿಗದಿಪಡಿಸುವ ಕುರಿತು ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸರಣ ಮಾರ್ಗವು ಖಾನಾಪುರ ಗ್ರಾಮದಿಂದ ಮನಗನಾಳ, ನಾಯ್ಕಲ್, ಅಬ್ಬೆತುಮಕೂರ, ಯಾದಗಿರಿ (ಬಿ) ಮಾರ್ಗವಾಗಿ ಮುದ್ನಾಳ ರೈಲ್ವೆ ಟ್ರ್ಯಾಕ್ ತಲುಪಲಿದೆ. ಸುಮಾರು 80 ರೈತರ ಹೊಲಗಳಲ್ಲಿ ವಿದ್ಯುತ್ ಟಾವರ್/ ಪ್ರಸರಣ ಮಾರ್ಗ ಹಾದು ಹೋಗಲಿದೆ. ಆಯಾ ಹಳ್ಳಿಗಳಲ್ಲಿನ ಭೂಮಿಯ ಪ್ರಸ್ತುತ ಮಾರುಕಟ್ಟೆ ದರ ಆಧರಿಸಿ, 1 ಸ್ಕ್ವಾಯರ್ ಮೀಟರ್ ಲೆಕ್ಕದಲ್ಲಿ ಬೆಲೆ ನಿರ್ಧರಿಸಲಾಗುವುದು. ಇದರ ಜೊತೆಗೆ ವಿದ್ಯುತ್ ಟಾವರ್ ಮತ್ತು ಪ್ರಸರಣ ಮಾರ್ಗಗಳ ಅಳವಡಿಕೆ ಸಂದರ್ಭದಲ್ಲಿ ಉಂಟಾದ ಬೆಳೆಯ ಹಾನಿಗೂ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
ರೈತರ ಹೊಲಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಂಡು ವಿದ್ಯುತ್ ಟಾವರ್ ಹಾಕಲಾಗುತ್ತಿದೆ. ವಿದ್ಯುತ್ ಅವಘಡ ಬಗ್ಗೆ ರೈತರು ಆತಂಕಪಡುವ ಅಗತ್ಯವಿಲ್ಲ. ಜಮೀನು ಕೂಡ ಆಯಾ ರೈತರ ಹೆಸರಿನಲ್ಲಿಯೇ ಇರುತ್ತದೆ. ನಿಗದಿತ ಸಮಯದೊಳಗೆ ಪರಿಹಾರ ನೀಡಲಾಗುವುದು ಎಂದು ರೈತರ ಪ್ರಶ್ನೆಗಳಿಗೆ ಉತ್ತರಿಸಿದರು.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಕಲಬುರಗಿಯ ಕಾರ್ಯನಿರ್ವಾಹಕ ಇಂಜಿನಿಯರ್ ರಾಜೇಶ್ ಹಿಪ್ಪರಗಿ ಮಾತನಾಡಿ, ವಿದ್ಯುತ್ ಟಾವರ್ ಹಾಗೂ ಮಾರ್ಗ ಹಾದು ಹೋಗುವ ಸಂಬಂಧಿಸಿದ ಭೂ ಮಾಲೀಕರಿಗೆ ಒಂದು ತಿಂಗಳೊಳಗೆ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ, ರೈಲ್ವೆ ವಿಕಾಸ ನಿಗಮ ಲಿಮಿಟೆಡ್‌ನ ಸಿಕಂದರಾಬಾದ್ ಜೆಜಿಎಂ ಸಂಜೀವರಾವ್, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಕಲಬುರಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಋಷಿಕೇಶ ಹಾಗೂ ವಿವಿಧ ಗ್ರಾಮಗಳ ರೈತರು ಸಭೆಯಲ್ಲಿ ಇದ್ದರು.