Advertisement

ಬೆಳೆನಷ್ಟ ಪರಿಹಾರ ಕೊಡಿಸಲು ಕ್ರಮ

01:19 PM May 24, 2017 | Team Udayavani |

ದಾವಣಗೆರೆ: ಅರ್ಹ ರೈತರಿಗೆ 100ಕ್ಕೆ 100ರಷ್ಟು ಬೆಳೆನಷ್ಟ ಪರಿಹಾರ ದೊರೆಯುವಂತಾಗಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಾಲೂಕು ಪಂಚಾಯತ್‌ ಕಾರ್ಯ ನಿರ್ವಹಣಾಧಿಕಾರಿ ಎಲ್‌. ಎಸ್‌. ಪ್ರಭುದೇವ್‌ ತಿಳಿಸಿದ್ದಾರೆ. 

Advertisement

ಮಂಗಳವಾರ ಮಮತಾ ಮಲ್ಲೇಶಪ್ಪ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ, ಬೆಳೆನಷ್ಟ ಪರಿಹಾರ ಸಮರ್ಪಕವಾಗಿ ತಲುಪದೇ ಇರುವ ಬಗ್ಗೆ ಸದಸ್ಯರ ಪ್ರಶ್ನೆ, ಆಕ್ಷೇಪ, ಒತ್ತಾಯಕ್ಕೆ ಉತ್ತರಿಸಿದ ಅವರು, ಬ್ಯಾಂಕ್‌ ಖಾತೆಗೆ ಆಧಾರ್‌ ಜೋಡಣೆ ಮಾಡದಿದ್ದ ಕಾರಣಕ್ಕೆ ಬೆಳೆನಷ್ಟ ಪರಿಹಾರ ದೊರತಿಲ್ಲ.

ಹಾಗಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿನ ಸಿಬ್ಬಂದಿ ಮೂಲಕ ಆಧಾರ್‌ ಜೋಡಣೆ ಮಾಡಿಸಲಾಗುವುದು. ಎಲ್ಲಾ ರೈತರಿಗೆ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ಇದಕ್ಕೂ ಮುನ್ನ ಬೆಳೆ ಪರಿಹಾರದ ವಿಷಯ ಪ್ರಸ್ತಾಪಿಸಿದ ಬೇತೂರು ಕ್ಷೇತ್ರದ ಸದಸ್ಯ ಸಂಗಜ್ಜಗೌಡ್ರು, ದಾವಣಗೆರೆ ತಾಲೂಕಿನಲ್ಲಿ ನೀರಾವರಿ,ಬೆದ್ದಲು ಎರಡೂ ಇವೆ.

ಅಧಿಕಾರಿಗಳು ನೀರಾವರಿ ಮಾತ್ರ ಇದೆ ಎಂಬುದಾಗಿ ದಾಖಲೆಯಲ್ಲಿ ತೋರಿಸುವುದರಿಂದ ಖುಷ್ಕಿ ಜಮೀನು ಹೊಂದಿರುವ ತಮ್ಮನ್ನೂ ಒಳಗೊಂಡಂತೆ ಅನೇಕರಿಗೆ ಪರಿಹಾರ ಬಂದಿಲ್ಲ ಎಂದು ತಿಳಿಸಿದರು. ತಾಲೂಕಿನ 17 ಸಾವಿರ ರೈತರಲ್ಲಿ 7 ಸಾವಿರ ರೈತರಿಗೆ ಪರಿಹಾರ ಸಿಕ್ಕಿದೆ. ಇನ್ನುಳಿದ 10 ಸಾವಿರ ರೈತರಲ್ಲಿ ಕೆಲವರು ಬ್ಯಾಂಕ್‌ ಖಾತೆಗೆ ಆಧಾರ್‌ ಜೋಡಣೆ ಮಾಡೇ ಇಲ್ಲ.

ಹಾಗಾಗಿ ಪರಿಹಾರ ಸಿಕ್ಕಿಲ್ಲ. ಆಧಾರ್‌ ಜೋಡಣೆಗೆ ಮೇ. 25ರ ವರೆಗೆ ಕಾಲಾವಕಾಶ ಇದೆ. ಆಧಾರ್‌ ಜೋಡಣೆ ಮಾಡಿದಲ್ಲಿ ಪರಿಹಾರ ದೊರೆಯಲಿದೆ. ಇತರೆ ಕಾರಣದಿಂದ ಪರಿಹಾರ ಬರದೇ ಇದ್ದಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕ ಉಮೇಶ್‌ ಸಭೆಗೆ ತಿಳಿಸಿದರು. 

Advertisement

ಮೇ 25 ರಿಂದ ತಾಲೂಕಿನಾದ್ಯಂತ ಕೃಷಿ ಅಭಿಯಾನದ ಮೂಲಕ ರೈತರಲ್ಲಿ ಬೆಳೆ, ನೀರು ಬಳಕೆ, ಬೀಜೋಪಚಾರ, ಸಿರಿಧಾನ್ಯಗಳ ಬೆಳೆಯಲು ಪ್ರೇರಣೆ ಇತರೆ ಮಾಹಿತಿ ನೀಡುವ ಜೊತೆಗೆ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು. ತಾಲೂಕಿನಲ್ಲಿ ಈವರೆಗೆ ಸರಿಯಾಗಿ ಮಳೆ ಆಗಿಲ್ಲ.

5 ಕಡೆ ಬೀಜ ವಿತರಣಾ ಕೇಂದ್ರ ಪ್ರಾರಂಭಿಸಲಾಗಿದೆ. ಈ ಬಾರಿ 6 ಸಹಕಾರ ಸಂಘಗಳ ಮೂಲಕವೂ  ಬೀಜ ತರಣೆ ವ್ಯವಸ್ಥೆ ಮಾಡಲಾಗುವುದು ಎಂದು ಉಮೇಶ್‌ ತಿಳಿಸಿದಾಗ, ಮಳೆ ಬರುವ ಮುನ್ನವೇ ರೈತರಿಗೆ ಬೀಜ ವಿತರಿಸುವ ಕೆಲಸ ಆಗಬೇಕು.

ಮಳೆ ಬಂದಾಕ್ಷಣ ಬಿತ್ತನೆ ಮಾಡುವ ವ್ಯವಸ್ಥೆ ಮಾಡಬೇಕು. ಅದನ್ನು ಬಿಟ್ಟು ಮಳೆ ಬಂದಾಗ ರೈತರು ಬೀಜಕ್ಕಾಗಿ ಅಲೆಯುವುದನ್ನ ತಪ್ಪಿಸಬೇಕು. ಕಳಪೆ, ನಕಲಿ ಬಿತ್ತನೆ ಬೀಜದ ಹಾವಳಿಗೆ ಸೂಕ್ತ ಕಡಿವಾಣ ಹಾಕಬೇಕು ಎಂದು ಸದಸ್ಯರಾದ ಆಲೂರು ನಿಂಗರಾಜ್‌, ಸಂಗಜ್ಜಗೌಡ್ರು ಒತ್ತಾಯಿಸಿದರು.  

ಡೊನೇಷನ್‌ಗೆ ಕಡಿವಾಣ ಹಾಕಿ: ಅನುದಾನಿತ ಶಾಲೆಯಲ್ಲಿನ ಎಲ್‌ಕೆಜಿ ಮಕ್ಕಳಿಗೆ ಲಕ್ಷಗಟ್ಟಲೆ ಡೊನೇಷನ್‌ ಪಡೆಯಲಾಗುತ್ತಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಡೊನೇಷನ್‌ ನಿಯಂತ್ರಣಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳುತ್ತಿಲ್ಲ. ಹಾಗಾಗಿ ಎಲ್ಲಾ ಕಡೆ ಡೊನೇಷನ್‌ ಹಾವಳಿ ಮಿತಿ ಮೀರಿದೆ.

ಡೊನೇಷನ್‌ ಹಾವಳಿಗೆ ಕಠಿಣ ಕಡಿವಾಣ ಹಾಕಬೇಕು ಎಂದು ಆಲೂರು ನಿಂಗರಾಜ್‌, 30-35 ಕಿಲೋ ಮೀಟರ್‌  ದೂರದ ಹಳ್ಳಿಗಳಿಂದ ಮಕ್ಕಳನ್ನು ದಾವಣಗೆರೆ ಶಾಲೆಗೆ ಕರೆ ತರುವುದನ್ನ ನಿಲ್ಲಿಸಬೇಕು ಎಂದು ಉಮೇಶ್‌ನಾಯ್ಕ ಒತ್ತಾಯಿಸಿದರು. ಸರ್ಕಾರಿ ನಿಗದಿ ಪಡಿಸಿದ ಶುಲ್ಕ ವಸೂಲು ಮಾಡಲಾಗುತ್ತಿದೆ ಹೊರತು ಡೊನೇಷನ್‌ ತೆಗೆದುಕೊಳ್ಳುತ್ತಿಲ್ಲ ಎಂಬುದಾಗಿ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿ. ಸಿದ್ದಪ್ಪ ಹೇಳಿದಾಗ, ಸದಸ್ಯರು ಅತೀವ ಅಚ್ಚರಿ ವ್ಯಕ್ತಪಡಿಸಿದರು.

ಈ ವಿಚಾರವಾಗಿ ಸಾಕಷ್ಟು ಚರ್ಚೆ ನಡೆಯುತ್ತಾದರೂ, ಡೊನೇಷನ್‌ ಹಾವಳಿ ನಿಯಂತ್ರಣ, ಆರ್‌ಟಿಇ ಪ್ರವೇಶ ಪ್ರಕ್ರಿಯೆ ಕ್ರಮದ ಬಗ್ಗೆ ಪ್ರಸ್ತಾಪವಾಗಲೇ ಇಲ್ಲ. ಸರ್ಕಾರಿ ಶಾಲೆಯಲ್ಲಿ ಓದಿದವರೇ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವುದಕ್ಕೆ ಹಿಂದೇಟು ಹಾಕುವ ವಾತಾವರಣ ಇದೆ.

ಮಕ್ಕಳನ್ನು ಸೇರಿಸುವ ಮೂಲಕ  ಸರ್ಕಾರಿ ಶಾಲೆ ಉಳಿಸುವ ಕೆಲಸ ಆಗಬೇಕು ಎಂದು ಇಒ ಪ್ರಭುದೇವ್‌ ಹೇಳಿದಾಗ ಅನೇಕರು ಸಹಮತ ವ್ಯಕ್ತಪಡಿಸಿದರು. ಒಣಗಿರುವ, ಹಾಳಾಗಿರುವ ಅಡಕೆ, ತೆಂಗಿಗೆ ನಷ್ಟ ಪರಿಹಾರ, ಅನುದಾನಿತ ಶಾಲೆಯಲ್ಲಿಫಲಿತಾಂಶ ಹೆಚ್ಚಳ, ತೋಟಗಾರಿಕಾ ಇಲಾಖೆಯಿಂದ  ಸಹಾಯಧನ ಆಧಾರದಲ್ಲಿ ನೀರಿನ ಟ್ಯಾಂಕರ್‌ ವಿತರಣೆ, ಶಾಲೆಗಳಿಗೆ ಅಲಂಕಾರಿಕ, ಹಣ್ಣು ಸಸಿಗಳ ವಿತರಣೆ… ಇತರೆ ವಿಷಯದ ಬಗ್ಗೆ ಚರ್ಚೆ ನಡೆದವು. 

ಅಣಜಿ ಕೆರೆ ಒತ್ತುವರಿ ತೆರವು ಮಾಡುವಂತೆ ಕೋರಿ ಗ್ರಾಮಸ್ಥರು ಮನವಿ ಸಲ್ಲಿಸಿದರು. ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ(618) ಪಡೆದಿರುವ ಹಾಲುವರ್ತಿ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿನಿ ದೀಪಿಕಾರನ್ನು ಸನ್ಮಾನಿಸಲಾಯಿತು. ವಿವಿಧ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ಇತರೆ ಸೌಲಭ್ಯ ವಿತರಿಸಲಾಯಿತು. ಉಪಾಧ್ಯಕ್ಷ ಕೆ.ಆರ್‌. ಪರಮೇಶ್ವರಪ್ಪ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಕೆ. ಅಶೋಕ್‌ ಇತರರು ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next