Advertisement

ಶಿಕ್ಷಣ ಗುಣಮಟ್ಟ ಹೆಚ್ಚಳಕ್ಕೆ ಕ್ರಮ: ಪ್ರೊ|ನಾಗರಾಜಯ್ಯ

06:24 PM Mar 20, 2021 | Team Udayavani |

ಜೇವರ್ಗಿ: ತಾಲೂಕಿನಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಹಾಗೂ ಶೇ.100 ಫಲಿತಾಂಶ ತರುವ ಉದ್ದೇಶದಿಂದ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದ್ದು, ಇದರಲ್ಲಿ ಶಿಕ್ಷಕರ ಪಾತ್ರ ಹಾಗೂ ಸಹಕಾರ ಅಗತ್ಯವಾಗಿದೆ ಎಂದು ಶಿಕ್ಷಣ ತಜ್ಞ ಪ್ರೊ| ಆರ್‌.ನಾಗರಾಜಯ್ಯ ಹೇಳಿದರು.

Advertisement

ಪಟ್ಟಣದ ಮಿನಿ ವಿಧಾನಸೌಧದಲ್ಲಿರುವ ಶಾಸಕರ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೈಕ್ಷಣಿಕ ಕ್ರಾಂತಿಗೆ ಶಿಕ್ಷಕರ ಪಾತ್ರ ಹಿರಿದಾಗಿದ್ದು, ಧರ್ಮಸಿಂಗ್‌ ಫೌಂಡೇಶನ್‌ ವತಿಯಿಂದ ಶಿಕ್ಷಣ ಸೇವೆಗೆ ಹೆಚ್ಚಿನ ಮಹತ್ವ ಕೂಡ ನೀಡಲಾಗುತ್ತಿದೆ ಎಂದರು.

ಶಾಸಕ ಡಾ| ಅಜಯಸಿಂಗ್‌ ಅವರು ಧರ್ಮಸಿಂಗ್‌ ಫೌಂಡೇಶನ್‌ ಹಾಗೂ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ತಾಲೂಕಿನಲ್ಲಿ ಅಕ್ಷರ ಆವಿಷ್ಕಾರ ಮಿಷನ್‌-100 ಎನ್ನುವ ವಿನೂತನ ಕಾರ್ಯಕ್ರಮದೊಂದಿಗೆ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆ. ಈ ನಿಟ್ಟಿನಲ್ಲಿ ತಾವು ಕ್ಷೇತ್ರ ಶಿಕ್ಷಣಾ ಕಾರಿ ವೆಂಕಯ್ಯ ಇನಾಂದಾರ ಅವರ ಸಹಕಾರದೊಂದಿಗೆ ತಾಲೂಕಿನ 25 ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಕಲಿಕಾ ಗುಣಮಟ್ಟ ಅಳೆಯಲಾಗಿದೆ. ಕಲಿಕೆಯಲ್ಲಿ ನಿಧಾನಗತಿಯಲ್ಲಿರುವ ಮಕ್ಕಳಿಗೆ ವಿಶೇಷ ಒತ್ತು ನೀಡಲಾಗುತ್ತಿದೆ. ಅಲ್ಲದೇ ಈ ಮಕ್ಕಳಿಗೆ ವಿಶೇಷ ಬೋಧನೆ ಜತೆಗೆ ಶಾಸಕರು ಉಚಿತವಾಗಿ ಪಠ್ಯಪುಸ್ತಕ ನೀಡುತ್ತಿದ್ದಾರೆ ಎಂದರು.

ಈಗಾಗಲೇ ತಾಲೂಕಿನ 178 ಶಿಕ್ಷಕರು ಹಾಗೂ ಸುಮಾರು 1500 ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸಲಾಗಿದೆ. ಕಲಿಕಾ ಗುಣಮಟ್ಟ ಹೆಚ್ಚಿಸಿಕೊಳ್ಳಲು ಕೆಲವು ನಿಯಮಗಳನ್ನು ಕಟ್ಟಿನಿಟ್ಟಾಗಿ ಪಾಲಿಸುವ ಕುರಿತು ಸಮಾಲೋಚನೆ ನಡೆಸಲಾಗಿದೆ ಎಂದರು.

ತಾಲೂಕಿನ ಕೆಲ ಶಾಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಶಿಕ್ಷಕರು ಫಲಿತಾಂಶ ಹೆಚ್ಚಳಕ್ಕೆ ತಮ್ಮದೇ ರೀತಿಯಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಇನ್ನುಳಿದ ಶಾಲೆಗಳಿಗೆ ತಾವು ಭೇಟಿ ನೀಡುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಶಾಸಕ ಡಾ| ಅಜಯಸಿಂಗ್‌ ಪ್ರಯತ್ನಕ್ಕೆ ಕ್ಷೇತ್ರ ಶಿಕ್ಷಣಾ  ಧಿಕಾರಿ ಹಾಗೂ ಶಿಕ್ಷಕರು ಸಾಥ ನೀಡುತ್ತಿದ್ದಾರೆ. ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶ ಗಣನೀಯವಾಗಿ ಹೆಚ್ಚಳ ಆಗುವ ನಿರೀಕ್ಷೆ ತಮ್ಮದಾಗಿದೆ ಎಂದು ಹೇಳಿದರು.

Advertisement

ಜೇವರ್ಗಿ ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕಾಗಿ ಧರ್ಮಸಿಂಗ್ ಫೌಂಡೇಶನ್‌ ಹಾಗೂ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಅಕ್ಷರ ಆವಿಷ್ಕಾರ ಮಿಷನ್‌-100 ಜಾರಿಗೆ ತರಲಾಗಿದೆ. ತಾಲೂಕಿನಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ಗಣನೀಯ ಫಲಿತಾಂಶ ತರುವ ಮಹದಾಸೆ  ತಮ್ಮದಾಗಿದೆ. ಜೇವರ್ಗಿ-ಯಡ್ರಾಮಿ ತಾಲೂಕುಗಳು ಶೈಕ್ಷಣಿಕವಾಗಿ ಜಿಲ್ಲೆಯಲ್ಲಿಯೇ ಮುಂದೆ ಬರಬೇಕು.
ಡಾ| ಅಜಯಸಿಂಗ್‌, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next