ಸುವರ್ಣ ವಿಧಾನಸೌಧ: ರಾಜ್ಯದಲ್ಲಿನ ನಾಲ್ಕು ಕೃಷಿ ವಿಶ್ವವಿದ್ಯಾಲಯಗಳಲ್ಲಿ ಬಾಕಿ ಇರುವ ಒಟ್ಟು ಹುದ್ದೆಗಳಲ್ಲಿ ಶೇ.50 ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಎಸ್.ವಿ.ಸಂಕನೂರು ಪ್ರಶ್ನೆಗೆ ಉತ್ತರಿಸಿ, ಬೆಂಗಳೂರು ಕೃವಿವಿಯಲ್ಲಿ ಬೋಧಕ 227, ಬೋಧಕೇತರ 1,031, ಧಾರವಾಡ ಕೃವಿವಿಯಲ್ಲಿ ಬೋಧಕ 128, ಬೋಧಕೇತರ 671, ರಾಯಚೂರು ಕೃವಿವಿಯಲ್ಲಿ ಬೋಧಕ 72, ಬೋಧಕೇತರ 341, ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿವಿಯಲ್ಲಿ ಬೋಧಕ 188, ಬೋಧಕೇತರ 403 ಹುದ್ದೆಗಳು ಖಾಲಿ ಇದ್ದು, ಇವುಗಳಲ್ಲಿ ಶೇ.50 ರಷ್ಟನ್ನಾದ ಭರ್ತಿಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಹುದ್ದೆಗಳ ಭರ್ತಿ ಮೂಲಕ ಪ್ರಾಧ್ಯಾಪಕರ ಮೇಲಿರುವ ಕಾರ್ಯ ಒತ್ತಡ ಕಡಿಮೆ ಮಾಡಲಾಗುವುದು. ಧಾರವಾಡ ಕೃವಿವಿ ಡೀನ್ ಹಾಗೂ ನಿರ್ದೇಶಕರ ನೇಮಕಕ್ಕೆ ನಿಯಮ ಮೀರಿ ಕ್ರಮ ಕೈಗೊಂಡಿರುವುದು, ಬೋಧಕ, ಬೋಧಕೇತರ ನೌಕರರು ಹೈಕೋರ್ಟ್ ಮೊರೆ ಹೋಗಿ ನೇಮಕ ರದ್ದು ಪಡಿಸಿದ್ದು, ಸರ್ಕಾರ ಕ್ಕೆ ಆಗಿರುವ ಹಿನ್ನಡೆ. ಅಲ್ಲಿ ಕುಲಪತಿ ಹಾಗೂ ನೌಕರರ ನಡುವೆ ಸಾಕಷ್ಟು ಭಿನ್ನಾಭಿಪ್ರಾಯ, ಹೋರಾಟವೂ ನಡೆದಿದ್ದು ರಾಜ್ಯಪಾಲರೇ ಎರಡೂ ಕಡೆಯವರನ್ನು ಕರೆಸಿ ಚರ್ಚಿಸಿದ್ದಾರೆ.
ಇದನ್ನೂ ಓದಿ:ಚೀನಾ ನೆರವಿನಿಂದ ಕ್ಷಿಪಣಿ ನಿರ್ಮಿಸುತ್ತಿದೆ ಸೌದಿ ಅರೇಬಿಯಾ!
ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಗೆ ಆಧಿವೇಶನ ಮುಗಿದ ನಂತರ ಧಾರವಾಡಕ್ಕೆ ತೆರಳಿ ಅಲ್ಲಿನ ಸ್ಥಿತಿ ಕುರಿತು ಸಮಾಲೋಚನೆ ನಡೆಸುವಂತೆ ಸೂಚಿಸಿದ್ದೇನೆ ಎಂದರು.