Advertisement

ಅಗತ್ಯವಿದ್ದರೆ ತರಗತಿ ಅವಧಿ 1 ತಾಸು ವಿಸ್ತರಿಸಲು ಕ್ರಮ

01:31 AM Jan 20, 2022 | Team Udayavani |

ಮಂಗಳೂರು: ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶದ ದೃಷ್ಟಿಯಿಂದ ದ.ಕ. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಹೊಸ ಮಾರ್ಗಸೂಚಿ ಸಿದ್ಧಗೊಳಿಸಿದೆ.

Advertisement

ಶಾಲೆಗಳಲ್ಲಿ ಆವಶ್ಯಕತೆಗೆ ಅನುಗುಣವಾಗಿ ಪ್ರತೀ ತರಗತಿಯ ಅವಧಿಯನ್ನು 1 ಗಂಟೆ ವಿಸ್ತರಿಸಲು ಶಾಲಾ ಹಂತದಲ್ಲಿ ಕ್ರಮ ಕೈಗೊಳ್ಳಲು /ವೇಳಾಪಟ್ಟಿ ತಯಾರಿಸಲು ಅವಕಾಶ ಕಲ್ಪಿಸುವ ಬಗ್ಗೆ ಶಾಲೆಗಳಿಗೆ ಸೂಚನೆ ನೀಡಲಾಗಿದೆ. ಈ ಮೂಲಕ ಕಲಿಕೆಗೆ ಹೆಚ್ಚು ಗಮನ ಸಾಧ್ಯವಾಗಲಿದೆ.

ಜಿಲ್ಲೆಯ ನುರಿತ ಶಿಕ್ಷಕರು ತಯಾರಿಸಿದ ಪ್ರಶ್ನಾಕೋಠಿ (ಕ್ವಶ್ಚನ್‌ ಬ್ಯಾಂಕ್‌) ಪರಿಷ್ಕರಿಸಲಾಗಿದ್ದು ಎಲ್ಲ ಶಾಲೆಗಳಿಗೆ ತಲುಪಿಸಲಾಗಿದೆ. ಎಸೆಸೆಲ್ಸಿ ಪರೀಕ್ಷೆ ಮುಗಿಯುವವರೆಗೆ ಪೋಷಕರು-ಮಕ್ಕಳು ಓದುವ ಸಮಯದಲ್ಲಿ ಟಿವಿ/ ಸಮೂಹ ಮಾಧ್ಯಮಗಳಲ್ಲಿ ಯಾವುದೇ ಕಾರ್ಯಕ್ರಮಗಳನ್ನು ವೀಕ್ಷಿಸದಿರುವಂತೆ ಮನವಿ ಸಲ್ಲಿಸುವುದು, ವಿದ್ಯಾರ್ಥಿಗಳು ನೋಟ್‌ ಪುಸ್ತಕಗಳನ್ನು ನಿರ್ವಹಿಸುವುದನ್ನು ಮತ್ತು ಎಲ್ಲ ಪ್ರಶ್ನೋತ್ತರಗಳನ್ನು ಬರೆದಿರುವುದನ್ನು ಖಾತ್ರಿ ಪಡಿಸುವುದು ಶಿಕ್ಷಕರ ಮತು ಮುಖ್ಯೋಪಾಧ್ಯಾಯರ ಹೊಣೆಗಾರಿಕೆ ಎಂದು ಇಲಾಖೆ ನಿಗದಿ ಪಡಿಸಿದೆ.

ಶಿಕ್ಷಕರ ಸಹಾಯವಾಣಿ
ಮಕ್ಕಳು ಹಾಗೂ ಶಿಕ್ಷಕರಿಗೆ ಸಹಾಯವಾಗುವಂತೆ ಸಂಪನ್ಮೂಲ ಶಿಕ್ಷಕರ ಸಹಾಯವಾಣಿ ಕೆಲವೇ ದಿನಗಳಲ್ಲಿ ಆರಂಭಿಸಲಾಗುತ್ತದೆ. ಆಕಾಶವಾಣಿ ಮೂಲಕ ವಿದ್ಯಾರ್ಥಿಗಳು-ಪೋಷಕರಿಗೆ ಎಸೆಸೆಲ್ಸಿ ಪರೀûಾ ಪೂರ್ವ ಸಿದ್ಧತೆಗೆ ಸಂಬಂಧಿಸಿದಂತೆ ಪೂರಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಜಿಲ್ಲೆಯಲ್ಲಿ ಅಲ್ಪಸಂಖ್ಯಾಕ ಹಾಗೂ ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿದ್ಯಾರ್ಥಿಗಳ ಫಲಿತಾಂಶವನ್ನು ಗಣನೀಯವಾಗಿ ಹೆಚ್ಚಿಸಲು ಸ್ವಯಂಸೇವಾ ಸಂಘಟನೆಗಳು ಹಾಗೂ ಸಮುದಾಯ ಮುಖಂಡರ ಸಹಾಯ ಪಡೆಯಲಾಗುತ್ತದೆ.

ಸ್ವಚ್ಛತೆಯ ಜತೆಗೆ ಪರೀಕ್ಷೆ
ಅನೌನ್ಸ್‌ಮೆಂಟ್‌!
ನಗರ ಹಾಗೂ ಗ್ರಾ.ಪಂ.ಗಳಲ್ಲಿ ಸ್ವಚ್ಛತೆಗೆ ಸಂಬಂಧಿಸಿದಂತೆ ಧ್ವನಿವರ್ಧಕ ಮೂಲಕ ಮಾಹಿತಿ ಕೊಡಲಾಗುತ್ತಿದೆ. ಜತೆಗೆ ಎಸೆಸೆಲ್ಸಿ ಪರೀಕ್ಷೆಯ ಬಗ್ಗೆ ಹೆಚ್ಚಿನ ಗಮನಹರಿಸುವಂತೆ ಪೋಷಕರು ಹಾಗೂ ಸಾರ್ವಜನಿಕರಿಗೆ ಕರೆ ನೀಡಲು ಇಲಾಖೆ ಚಿಂತಿಸಿದೆ ಎಂದು ಡಿಡಿಪಿಐ ತಿಳಿಸಿದ್ದಾರೆ.

Advertisement

ತರೆದ ಪುಸ್ತಕ ಪರೀಕ್ಷೆ !
ತಾಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ತಯಾರಿಸಲಾದ ಪ್ರಶ್ನೆಪತ್ರಿಕೆಗಳನ್ನು ಬಳಸಿ ಮೂರು ಪೂರ್ವಸಿದ್ಧತಾ ಪರೀಕ್ಷೆಗಳನ್ನು ಫೆಬ್ರವರಿ ಅಂತ್ಯದೊಳಗೆ ನಡೆಸಲು ಸೂಚಿಸಲಾಗಿದೆ. ಇದಕ್ಕಾಗಿ ಎಲ್ಲ ಶಿಕ್ಷಕರು ತಮ್ಮ ವಿಷಯಗಳಲ್ಲಿ ಪ್ರತೀ ವಾರ ತೆರೆದ ಪುಸ್ತಕಗಳ ಪರೀಕ್ಷೆ ನಡೆಸಬೇಕಾಗಿದೆ. ಈ ಮೂಲಕ ಮಕ್ಕಳಲ್ಲಿ ಓದುವ ಮತ್ತು ಬರೆಯುವ ಸಾಮರ್ಥ್ಯ ಹೆಚ್ಚಿಸಲಾಗುವುದು.

ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್‌
ಪ್ರತೀ ಶಾಲೆಯಲ್ಲಿರುವ ಕೌನ್ಸೆಲಿಂಗ್‌ ವ್ಯವಸ್ಥೆಯನ್ನು ಸಕ್ರಿಯಗೊಳಿಸಲಾಗುವುದು. ಸ್ವಯಂಸೇವಾ ಸಂಘಟನೆಗಳ ಸಹಾಯದಿಂದ ಮಕ್ಕಳು ಹಾಗೂ ಶಿಕ್ಷಕರಲ್ಲಿ ಧನಾತ್ಮಕ ಮನೋ ಭಾವ ಬೆಳೆಸುವುದು ಕೌನ್ಸಲಿಂಗ್‌ ಉದ್ದೇಶ. ಪ್ರತೀ ಶಾಲೆಯ ಶಿಕ್ಷಕರು ಹಾಗೂ ಮುಖ್ಯಶಿಕ್ಷಕರು ಫಲಿತಾಂಶ ವರ್ಧನೆಗೆ ಸೂಕ್ತ ಯೋಜನೆಯನ್ನು ರೂಪಿಸಿ ಅನುಷ್ಠಾನಕ್ಕೆ ತರುವಂತೆ ಡಿಡಿಪಿಐ ಸುಧಾಕರ ಕೆ. ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next