ಬೆಂಗಳೂರು: “ರಾಜ್ಯ ಫಿಸಿಯೋಥೆರಪಿ ಕೌನ್ಸಿಲ್’ ಸ್ಥಾಪನೆ ಕುರಿತ ಪ್ರಸ್ತಾವನೆ ಗಮನಿಸಿ ಅಗತ್ಯ ಕ್ರಮಕೈಗೊಳ್ಳುವುದಾಗಿ ಕಾನೂನು ಸಚಿವ ಟಿ.ಬಿ.ಜಯಚಂದ್ರ ಭರವಸೆ ನೀಡಿದ್ದಾರೆ. ಭಾನುವಾರ ಖಾಸಗಿ ಹೋಟೆಲ್‌ನಲ್ಲಿ ಬೆಂಗಳೂರು ಫಿಸಿಯೋಥೆರಪಿ ನೆಟ್‌ವರ್ಕ್ ಸಂಘದ 7ನೇ ವಾರ್ಷಿಕೋತ್ಸವ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಮೂಳೆ, ಕೀಲು ನೋವು ಇತ್ಯಾದಿ ಸಮಸ್ಯೆಗಳಿಗೆ ವೈದ್ಯಕೀಯ ಔಷಧಗಳಿಗಿಂತ ಫಿಸಿಯೋಥೆರಪಿ ಚಿಕಿತ್ಸೆ ತುಂಬಾ ಸಹಕಾರಿಯಾಗಿವೆ ಎಂದ ಅವರು, ತಮಗೆ ಭುಜದ ನೋವು ಬಂದಾಗ ಫಿಸಿಯೋಥೆರಪಿಯಿಂದ ಗುಣಮುಖವಾಗಿದ್ದನ್ನು ಸ್ಮರಿಸಿದರು.
ಸಂಘದ ಅಧ್ಯಕ್ಷೆ ಡಾ.ಆರತಿ ಪ್ರಸಾದ್ ಮಾತನಾಡಿ, ಫಿಸಿಯೋಥೆರಪಿ ಆರೋಗ್ಯ ಕ್ಷೇತ್ರದ ಪ್ರಮುಖ ಅಂಗವಾಗಿದೆ. ಆದ್ದರಿಂದ ಬಿಬಿಎಂಪಿ ವ್ಯಾಪ್ತಿಯ ಎಲ್ಲ ವಾರ್ಡ್‌ನ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಆಸ್ಪತ್ರೆಗಳಲ್ಲಿ ಫಿಸಿಯೋಥೆರಪಿಸ್ಟ್‌ಗಳ ಅಗತ್ಯತೆ ಹೆಚ್ಚಿದ್ದು, ಈ ನಿಟ್ಟಿನಲ್ಲಿ ಫಿಸಿಯೋಥೆರಪಿಸ್ಟ್‌ಗಳನ್ನು ನೇಮಿಸಲು ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಫಿಸಿಯೋಥೆರಪಿ ಚಿಕಿತ್ಸೆಯಲ್ಲಿ ಮತ್ತು ಶಿಕ್ಷಣದಲ್ಲಿ ಅನೇಕ ಬದಲಾವಣೆಗಳಾಗಿವೆ.ಜ್ಞಾನಾಧಾರಿತ ನಾಗರಿಕತೆಯಲ್ಲಿ ತಂತ್ರಜ್ಞಾನಗಳು ಬದಲಾಗಿದ್ದು, ಹೊಸ ಸಂಶೋಧನೆಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಫಿಸಿಯೋಥೆರಪಿಸ್ಟ್‌ಗಳು ಹೊಸ ಅನ್ವೇಷಣೆಯಲ್ಲಿ ತೊಡಗಬೇಕು.
ಜತೆಗೆ ಸರ್ಕಾರಗಳು ಸಹ ಆಸ್ಪತ್ರೆಗಳಲ್ಲಿ ಫಿಸಿಯೋಥೆರಪಿ ವಿಭಾಗಗಳನ್ನು ತೆರೆದು, ಫಿಸಿಯೋಥೆರಪಿಸ್ಟ್‌ಗಳನ್ನು ನೇಮಿಸಿಕೊಳ್ಳಬೇಕು. ದೇಹಕ್ಕೆ ಪೆಟ್ಟಾದಾಗ ನೋವು ಉಂಟಾಗುತ್ತದೆ. ಅದು ಸ್ವಾಭಾವಿಕವಾಗಿ ಗುಣಮುಖವಾಗಲು ಸ್ವಲ್ಪ ಸಮಯ ಬೇಕಾಗುತ್ತದೆ. ಅದಕ್ಕೆ ಪೂರಕವಾಗಿ ಫಿಸಿಯೋಥೆರಪಿ ಸಹಕರಿಸುತ್ತದೆ.
ಇದರ ಕುರಿತು ಜನರಲ್ಲಿ ಅರಿವಿನ ಕೊರತೆ ಇದ್ದು, ಅದನ್ನು ಜಾಗೃತಗೊಳಿಸುವ ಕಾರ್ಯವನ್ನು ಮಾಡುವ ಅಗತ್ಯವಿದೆ ಎಂದರು. ಕಾರ್ಯಕ್ರಮದಲ್ಲಿ ಬೆಂಗಳೂರು ಫಿಸಿಯೋಥೆರಪಿ ನೆಟ್‌ವರ್ಕ್‌ನ ಡಾ.ನವೀನ್, ಡಾ.ಧನಂಜಯನ್, ವಿಜೇಂದ್ರನ್, ಡಾ.ಪದ್ಮನಾಭನ್ ಮತ್ತಿತರರು ಉಪಸ್ಥಿತರಿದ್ದರು.