Advertisement

ಫುಡ್ ಪಾರ್ಕ್ ಸ್ಥಾಪನೆಗೆ ಕ್ರಮ

03:49 PM Jun 05, 2020 | Suhan S |

ಹಾವೇರಿ: ಕೃಷಿ ಪ್ರಧಾನ ಹಾವೇರಿ ಮತ್ತು ಗದಗ ಜಿಲ್ಲೆಗಳಲ್ಲಿ ಫುಡ್‌ ಪಾರ್ಕ್‌ ಸ್ಥಾಪನೆಗೆ ಕ್ರಮವಹಿಸಲಾಗುವುದು ಎಂದು ಸಂಸದ ಶಿವಕುಮಾರ ಉದಾಸಿ ಭರವಸೆ ನೀಡಿದರು.

Advertisement

ಇಲ್ಲಿಯ ಪ್ರವಾಸಿಗೃಹದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫುಡ್‌ ಪಾರ್ಕ್‌ ಸ್ಥಾಪನೆಯಿಂದ ಇಲ್ಲಿ ಬೆಳೆದ ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆ ತಂದುಕೊಡುವಲ್ಲಿ ಸಹಕಾರಿಯಾಗಲಿದೆ. ಸ್ಥಳೀಯ ರೈತರಿಗೆ ಅನುಕೂಲವಾಗಲಿದೆ ಎಂದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಎರಡನೇ ಅವಧಿಯ ಕೇಂದ್ರ ಸರ್ಕಾರ ಒಂದು ವರ್ಷ ಪೂರೈಸಿದ್ದು, ಈ ಅವಧಿಯಲ್ಲಿ ಹಾವೇರಿ ಲೋಕಸಭೆ ಕ್ಷೇತ್ರಕ್ಕೆ ಮೂರು ಸಾವಿರ ಕೋಟಿ ರೂ.ಗಳಿಗೂ ಅಧಿಕ ಅನುದಾನ ವಿವಿಧ ಯೋಜನೆಗಳಿಗೆ ಮಂಜೂರಾಗಿದೆ. ಇದರಲ್ಲಿ 2.25 ಕೋಟಿ ರೂ. ನೇರವಾಗಿ ಹಾವೇರಿ ಜಿಲ್ಲೆಗೆ ಮಂಜೂರಾಗಿದೆ. ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಹಾವೇರಿ ಜಿಲ್ಲೆಯ ರಾಣಿಬೆನ್ನೂರು, ಶಿಕಾರಿಪುರ, ಶಿವಮೊಗ್ಗ ಸಂಪರ್ಕಿಸುವ 92 ಕಿ.ಮೀ.ಉದ್ದದ ನೂತನ ರೈಲು ಮಾರ್ಗ ಅನುಷ್ಠಾನಕ್ಕೆ 1700 ಕೋಟಿ ರೂ. ಮಂಜುರಾತಿ ದೊರೆತಿದೆ. ಹಾವೇರಿಯ ನೂತನ ವೈದ್ಯಕೀಯ ಮಹಾವಿದ್ಯಾಲಯ ಪ್ರಾರಂಭಕ್ಕೆ 600 ಕೋಟಿ ರೂ. ಮಂಜೂರಾತಿ ದೊರೆತಿದ್ದು, 46 ಕೋಟಿ ರೂ. ಬಿಡುಗಡೆಯಾಗಿದೆ ಎಂದರು.

ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ ಹಾವೇರಿ ಜಿಲ್ಲೆಯ 245 ಕಿ.ಮೀ. ರಸ್ತೆ ಅಭಿವೃದ್ಧಿಗೆ 159.25 ಕೋಟಿ ರೂ. ಹಾಗೂ ಗದಗ ಜಿಲ್ಲೆಯ 160 ಕಿ.ಮೀ. ರಸ್ತೆ ಅಭಿವೃದ್ಧಿ 109.85 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಮಂಜೂರಾತಿ ದೊರೆತಿದೆ. ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಕೇಂದ್ರ ರಸ್ತೆ ಭೂ ಸಾರಿಗೆ ಸಚಿವಾಲಯದಿಂದ ಗಜೇಂದ್ರಗಡ-ಉಣಚಗೇರಿ ಕ್ರಾಸ್‌ನಿಂದ ರಾಜೂರುವರೆಗೆ 12 ಕಿ.ಮೀ. ಉದ್ದ ಚತುಷ್ಪಥ ರಸ್ತೆ ಕಾಮಗಾರಿಗೆ 92 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು. ಶಾಸಕ ನೆಹರು ಓಲೇಕಾರ, ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ಧರಾಜ ಕಲಕೋಟಿ, ಮಾಜಿ ಶಾಸಕ ಶಿವರಾಜ ಸಜ್ಜನರ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ಕಪ್ಪತಗುಡ್ಡ ಆಗಲಿ ಇಎಸ್‌ಝೆಡ್‌ : ಜೀವವೈವಿಧ್ಯ ತಾಣವಾಗಿರುವ ಕಪ್ಪತಗುಡ್ಡವನ್ನು ಪರಿಸರ ಸೂಕ್ಷ ¾ ವಲಯವನ್ನಾಗಿ (ಇಕೋ ಸೆನ್ಸಿಟಿವ್‌ ಝೋನ್‌) ಘೋಷಿಸಲು ಯಾವುದೇ ಅಭ್ಯಂತರವಿಲ್ಲ. ಆದರೆ, ಬಫರ್‌ ಝೋನ್‌ ವ್ಯಾಪ್ತಿಯಲ್ಲಿ 50-60 ಹಳ್ಳಿಗಳು ಬರಲಿದ್ದು, ಅಲ್ಲಿಯ ರೈತರ ಜಮೀನುಗಳಿಗೆ ಒಂದಿಷ್ಟು ತೊಂದರೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಸರ್ಕಾರ ಸ್ಥಳೀಯ ರೈತರಿಗೆ ಹಾಗೂ ಪರಿಸರಕ್ಕೆ ತೊಂದರೆ ಆಗದಂತೆ ಸೂಕ್ಷ್ಮ ವಲಯವನ್ನಾಗಿ ಮಾಡಲಿ ಎಂದು ಸಂಸದ ಶಿವಕುಮಾರ ಉದಾಸಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Advertisement

ಸಹಾಯಧನ : ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಹಾವೇರಿ ಜಿಲ್ಲೆಯ 1,81,431 ಹಾಗೂ ಗದಗ ಜಿಲ್ಲೆಯ 1,28,708 ಜನರಿಗೆ ತಲಾ ಎರಡು ಸಾವಿರದಂತೆ 60 ಕೋಟಿ ರೂ. ರೈತರ ಖಾತೆಗೆ ಜಮಾ ಮಾಡಲಾಗಿದೆ. ಮಹಿಳಾ ಜನಧನ್‌ ಯೋಜನೆಯಡಿ ಹಾವೇರಿ ಜಿಲ್ಲೆಯ 2.33 ಲಕ್ಷ ಹಾಗೂ ಗದಗ ಜಿಲ್ಲಾ 2.50 ಲಕ್ಷ ಜನರಿಗೆ ತಲಾ ಐದು ನೂರರಂತೆ ಎರಡು ತಿಂಗಳ ಪ್ರೋತ್ಸಾಹಧನವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ. ಉಜ್ವಲ್‌ ಯೋಜನೆಯಡಿ ಹಾವೇರಿ ಜಿಲ್ಲೆಯ 80 ಸಾವಿರ ಹಾಗೂ ಗದಗ ಜಿಲ್ಲೆಯ 45 ಸಾವಿರ ಜನರಿಗೆ ಉಚಿತ ಸಿಲೆಂಡರ್‌ ಪೂರೈಸಲಾಗಿದೆ. ಗರೀಬ್‌ ಕಲ್ಯಾಣ ಯೋಜನೆಯಡಿ ಹಾವೇರಿ ಜಿಲ್ಲೆಯ 3,68,607 ಕುಟುಂಬಗಳಿಗೆ ಹಾಗೂ ಗದಗ ಜಿಲ್ಲೆಯ 2,28,830 ಕುಟುಂಬಗಳಿಗೆ ಎರಡು ತಿಂಗಳ ಉಚಿತ ಪಡಿತರ ವಿತರಿಸಲಾಗಿದೆ ಎಂದು ತಿಳಿಸಿದರು.

ಸ್ವಚ್ಛ ಭಾರತ ಮಿಷನ್‌ : ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಮಿಷನ್‌ ಯೋಜನೆಯಡಿ ಹಾವೇರಿ ಜಿಲ್ಲೆಗೆ 3.50 ಕೋಟಿ ರೂ. ಹಾಗೂ ಗದಗ ಜಿಲ್ಲೆಗೆ 8.28 ಕೋಟಿ ರೂ. ಮಂಜೂರಾತಿ ದೊರೆತಿದೆ. 15ನೇ ಹಣಕಾಸು ಯೋಜನೆಯಡಿ ಹಾವೇರಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಗೆ 20.88 ಕೋಟಿ ರೂ., ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ 103.75 ಕೋಟಿ ರೂ. ಹಾಗೂ ಗದಗ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಗೆ 24.69 ಕೋಟಿ ರೂ. ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ 58.84 ಕೋಟಿ ರೂ. ಮಂಜೂರಾಗಿದೆ ಎಂದು ತಿಳಿಸಿದರು.

ಆಯುಷ್ಮಾನ್‌ ಭಾರತ ಯೋಜನೆಯಡಿ ಹಾವೇರಿ ಜಿಲ್ಲೆಯ 26,011 ಜನ ವೈದ್ಯಕೀಯ ಚಿಕಿತ್ಸೆ ಪಡೆದಿದ್ದು, 37.08 ಕೋಟಿ ರೂ. ಹಾಗೂ ಗದಗ ಜಿಲ್ಲೆಯ 13,527 ಜನರು ವೈದ್ಯಕೀಯ ಚಿಕಿತ್ಸೆ ಪಡೆದಿದ್ದು, 24.94 ಕೋಟಿ ರೂ. ನೆರವು ನೀಡಲಾಗಿದೆ. ಕೋವಿಡ್‌ ಸಂಕಷ್ಟದ ಹಿನ್ನೆಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಹಾವೇರಿ ಜಿಲ್ಲೆಯಲ್ಲಿ 20.32 ಕೋಟಿ ರೂ. ಖರ್ಚು ಮಾಡಲಾಗಿದೆ. 7.25 ಲಕ್ಷ ಮಾನವ ದಿನಗಳನ್ನು ಸೃಜಿಸಿ ಜನರಿಗೆ ಉದ್ಯೋಗ ನೀಡಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next