ಬಳ್ಳಾರಿ: ಬಳ್ಳಾರಿ ನಗರಕ್ಕೆ ಸ್ಮಾರ್ಟ್ ಸಿಟಿ ಯೋಜನೆ ತರಲು, ನಗರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲು ಪಕ್ಷದ ಹಿರಿಯ ನಾಯಕರು, ಮೇಯರ್, ಉಪ ಮೇಯರ್, ಸದಸ್ಯರನ್ನೊಳಗೊಂಡ ಸಮಿತಿ ರಚಿಸಲಾಗುವುದು ಎಂದು ಕಾಂಗ್ರೆಸ್ ವಿಧಾನ ಸಭಾ ಉಪ ನಾಯಕ, ಶಾಸಕ ಯು.ಟಿ. ಖಾದರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ ಮಹಾನಗರದ ಜನರು ನಮ್ಮ ಮೇಲೆ ನಂಬಿಕೆ ಇಟ್ಟು 11 ತಿಂಗಳ ಹಿಂದೆ ನಡೆದ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ನೀಡಿದ್ದಾರೆ. ಅವರ ನಂಬಿಕೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ. ನಗರದ ಸರ್ವತೋಮುಖ ಅಭಿವೃದ್ಧಿಗೆ ಪಕ್ಷದ ಹಿರಿಯ ಮುಖಂಡರು, ಎಲ್ಲಾ ಪಾಲಿಕೆ ಸದಸ್ಯರ ಸಲಹೆ, ಸೂಚನೆ ಪಡೆಯಲು ಮೇಯರ್, ಉಪಮೇಯರ್ ಒಳಗೊಂಡ ಸಮಿತಿ ರಚಿಸುತ್ತೇವೆ ಎಂದರು.
ಇಲ್ಲಿನ ವಿಪಕ್ಷ ನಾಯಕರ ಕುರಿತು ಸಣ್ಣ ಆತಂಕ ಇರುವುದು ನಿಜ. ಅವರು ಸದಾ ಅಂತಹ ಆತಂಕ ಸೃಷ್ಟಿಸಿಕೊಂಡೇ ಬಂದಿದ್ದಾರೆ. ಇದು ನಮ್ಮ ಪಕ್ಷದ ಪಾಲಿಕೆ ಸದಸ್ಯರ ವಿಷಯದಲ್ಲೂ ಇತ್ತು. ಪಕ್ಷದ ಸದಸ್ಯರ್ಯಾರೂ ಸಹ ಅವರ ಆಮಿಷಕ್ಕೆ ಬಲಿಯಾಗಲಿಲ್ಲ. ಈ ಆತಂಕ ಕೇವಲ ನಮ್ಮ ಪಕ್ಷಕ್ಕೆ ಮಾತ್ರವಲ್ಲ ಇಲ್ಲಿನ ಜನರಿಗೂ ಇದೆ. ಇದೇ ಕಾರಣಕ್ಕೆ ಈ ಬಾರಿ ಚುನಾವಣೆಯಲ್ಲಿ ಅವರು ಬಿಜೆಪಿಯನ್ನು ಸೋಲಿಸಿದರು ಎಂದು ಅವರು ಹೇಳಿದರು.
ಬಳ್ಳಾರಿ ನಗರಕ್ಕೆ ಸ್ಮಾರ್ಟ್ ಸಿಟಿ ಯೋಜನೆ ತರಲು ನಾವು ಪ್ರಯತ್ನಿಸುತ್ತೇವೆ. ಉತ್ತಮ, ವಿವರವಾದ ವರದಿ ಸಲ್ಲಿಕೆ ಮಾಡುವ ಮೂಲಕ ಕೇಂದ್ರದ ಸ್ಮಾರ್ಟ್ ಸಿಟಿ ಯೋಜನೆ ವ್ಯಾಪ್ತಿಗೆ ಬಳ್ಳಾರಿ ಸೇರಿಸುವ ಯತ್ನಮಾಡುತ್ತೇವೆ. ಈಗಾಗಲೇ ಬಳ್ಳಾರಿ, ಹುಬ್ಬಳ್ಳಿ ಸೇರಿದಂತೆ ರಾಜ್ಯದ ಹಲವು ಸಿಟಿಗಳು ಸ್ಮಾರ್ಟ್ ಯೋಜನೆ ವ್ಯಾಪ್ತಿಗೆ ಬಂದಿವೆ. ಈ ಸಾಲಿಗೆ ಬಳ್ಳಾರಿಯನ್ನೂ ಸಹ ಸೇರಿಸಲಿದ್ದೇವೆ ಎಂದು ಅವರು ಹೇಳಿದರು. ಮಾಜಿ ಸಂಸದರಾದ ವಿ.ಎಸ್. ಉಗ್ರಪ್ಪ, ಬಿ.ಎನ್. ಚಂದ್ರಪ್ಪ, ಪಕ್ಷದ ಜಿಲ್ಲಾಧ್ಯಕ್ಷ ಮೊಹಮ್ಮದ್ ರಫೀಕ್, ಮಂಜುನಾಥ, ಯತೀಂದ್ರಗೌಡ ಇತರರಿದ್ದರು.