ಹುನಗುಂದ: ಪಟ್ಟಣ ಮತ್ತು ತಾಲೂಕಿನಲ್ಲಿ ವಾಹನ ಮತ್ತು ದ್ವಿಚಕ್ರವಾಹನಗಳ ಅನವಶ್ಯಕ ಸಂಚಾರ ಹೆಚ್ಚಾಗಿದೆ. ತಾಲೂಕು ಆಡಳಿತ ಕೋವಿಡ್ 19 ಮುಂಜಾಗ್ರತಾ ಕ್ರಮವಾಗಿ ವಾಹನ ಸಂಚಾರ ತಡೆಗಟ್ಟಲು ಪಟ್ಟಣದಲ್ಲಿ ನಾಲ್ಕು ಚೆಕ್‌ಪೋಸ್ಟ್ ತೆರೆಯಲಾಗಿದೆ ಎಂದು ತಹಶೀಲ್ದಾರ್ ಬಸವರಾಜ ನಾಗರಾಳ ಹೇಳಿದರು.
ಪಟ್ಟಣದಲ್ಲಿ ಸ್ಥಾಪನೆಗೊಂಡ ಚೆಕ್‌ಪೋಸ್ಟ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು. ಸಾಮಾಜಿಕ ಅಂತರ ಕಾಯ್ದುಕೊಂಡು ಹೆಚ್ಚಿನ ಸಮಯ ಮನೆಯಲ್ಲಿ ಕಳೆಯಬೇಕು. ಕಿರಾಣಿ ಅಂಗಡಿಗಳಿಂದ ದಿನಸಿ ಸಾಮಗ್ರಿಗಳಿಗೆ ತಮ್ಮ ಮನೆಗೆ ಬರುವಂತೆ ಮೊಬೈಲ್ ಸೇವೆ ಪ್ರಾರಂಭಿಸಲಾಗಿದೆ ಎಂದರು.
ಹುನಗುಂದ ನಗರದ ಪ್ರಮುಖ ರಸ್ತೆಗಳಾದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿದ ರಾಜ್ಯ ಹೆದ್ದಾರಿ 20, ವಿಜಯ ಮಹಾಂತೇಶ ಪ್ರೌಢಶಾಲೆ ಎದುರು, ವಿಮ ವೃತ್ತ ಮತ್ತು ಮುಖ್ಯ ಅಂಚೆ ಕಚೇರಿ ಎದುರು ಚೆಕ್ ಪೋಸ್ಟ್‌ಗಳನ್ನು ಸ್ಥಾಪನೆ ಮಾಡಲಾಗಿದೆ ಎಂದು ತಹಶೀಲ್ದಾರ್ ಹೇಳಿದರು.
ಗಲ್ಲಿ-ಗಲ್ಲಿಗಳಲ್ಲಿ ತರಕಾರಿ ಮಾರಾಟ ಮಾಡುವ ವ್ಯವಸ್ಥೆ ಕೈಗೊಳ್ಳಲಾಗಿದೆ. ಬ್ಯಾಂಕ್, ಮೆಡಿಕಲ್ ಅಂಗಡಿ, ಹಾಲು, ಆಸ್ಪತ್ರೆ ಇನ್ನಿತರ ತುರ್ತು ಕೆಲಸಗಳಿಗೆ ನಗರದಲ್ಲಿ ಎರಡು ಬಾರಿ ವಾಹನ ಮೂಲಕ ಸಂಚರಿಸಬಹುದು. ಇದಕ್ಕೂ ಹೆಚ್ಚಿಗೆ ತಿರುಗಾಡಿದರೆ ವಾಹನ ಮತ್ತು ಬೈಕ್‌ಗಳನ್ನು ಪೊಲೀಸ್ ವಶಕ್ಕೆ ನೀಡಿ ಕೇಸ್ ದಾಖಲಿಸಲಾಗುವುದು ಎಂದು ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ಈರಣ್ಣ ಗುಡದಾರಿ ಮಾತನಾಡಿ, ನಗರದ ಪ್ರಮುಖ ರಸ್ತೆಗಳಿಗೆ ಕೂಡು ರಸ್ತೆಗೆ ಮುಳ್ಳು ಕಂಟಿಗಳನ್ನು ಹಚ್ಚಿ ರಸ್ತೆ ಸಂಚಾರಗಳನ್ನು ಬಂದ್ ಮಾಡಲಾಗಿದೆ. ರಾಜ್ಯ ಹೆದ್ದಾರಿ 20ರ ಮೇಲೆ ತಿರುಗುವ ಎಲ್ಲ ವಾಹನಗಳ ಸಂಖ್ಯೆ, ಸವಾರರ ಹೆಸರು ಮತ್ತು ಮುಂದೆ ಹೋಗುವ ಊರುಗಳನ್ನು ಚೆಕ್ ಪೋಸ್ಟ್‌ಗಳಲ್ಲಿ ದಾಖಲಿಸಲಾಗುವುದು ಎಂದು ಗುಡದಾರಿ ತಿಳಿಸಿದರು.
ಈಶ್ವರ ಬಾಲಾಗಾವಿ, ಮಹಾಂತೇಶ ತಾರಿವಾಳ ಇದ್ದರು.