Advertisement

ನಕಲು,ಅಕ್ರಮ ಮುಕ್ತ ಪರೀಕ್ಷೆಗೆ ಕ್ರಿಯಾಯೋಜನೆ- SSLC, PUC ಪರೀಕ್ಷೆಯಲ್ಲಿ ಅಕ್ರಮ ತಡೆಗೆ ಕ್ರಮ

09:19 PM Jul 22, 2023 | Team Udayavani |

ದಾವಣಗೆರೆ: ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ನಡೆಯುವ ನಕಲು ಹಾಗೂ ಅಕ್ರಮ ತಡೆಯಲು ಶಾಲಾ ಶಿಕ್ಷಣ ಇಲಾಖೆ ಕ್ರಿಯಾಯೋಜನೆ ತಯಾರಿಸಿ ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ ತರಲು ನಿರ್ಧರಿಸಿದೆ.

Advertisement

ಎಸೆಸೆಲ್ಸಿ ಪರೀಕ್ಷೆಯಲ್ಲಿ ಅಕ್ರಮ ತಡೆಯಲು ಜಿಲ್ಲಾ ಮಟ್ಟದಲ್ಲಿ ಉಪ ನಿರ್ದೇಶಕರು (ಆಡಳಿತ) ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಭೆ ನಡೆಸಿ ಕ್ರಿಯಾಯೋಜನೆ ಸಿದ್ಧಪಡಿಸಬೇಕು. ಪಿಯುಸಿ ಪರೀಕ್ಷೆಗೆ ಸಂಬಂಧಿಸಿ ಜಿಲ್ಲಾ ಹಂತದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಪ.ಪೂ. ಕಾಲೇಜುಗಳ ಪ್ರಾಂಶುಪಾಲರ ಸಭೆ ಆಯೋಜಿಸಿ ಕ್ರಿಯಾಯೋಜನೆ ಸಿದ್ಧಪಡಿಸಿ ಕಳುಹಿಸಲು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಸೂಚನೆ ನೀಡಿದ್ದಾರೆ.

ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯಮಾಪನ ಮಂಡಳಿಯಿಂದ ನಡೆಸುವ ಪರೀಕ್ಷೆಗಳ ಸಮರ್ಪಕ ನಿರ್ವಹಣೆಗೆ ಸಂಬಂಧಿಸಿ ಇತ್ತೀಚೆಗೆ ನಡೆಸಿದ ವೀಡಿಯೋ ಸಂವಾದದಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಈ ಕುರಿತು ಸೂಚನೆ ನೀಡಿದ್ದಾರೆ. ಎಸೆಸೆಲ್ಸಿ ಪರೀಕ್ಷೆಯಲ್ಲಿ ನಕಲು ಹಾಗೂ ಅವ್ಯವಹಾರಗಳು ಹೆಚ್ಚಾಗಿ ನಡೆಯುತ್ತಿದ್ದು, ಇದಕ್ಕೆ ಸಹಕರಿಸಿದ ಆರೋಪದಲ್ಲಿ 38 ಶಿಕ್ಷಕರನ್ನು ಅಮಾನತು ಮಾಡಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಇಲಾಖೆ, ಈಗ ಪರೀಕ್ಷಾ ಅಕ್ರಮ ತಡೆಗೆ ಯೋಜನೆ ರೂಪಿಸಲು ಸಜ್ಜಾಗಿದೆ.

ವಿಜಯಪುರ, ಯಾದಗಿರಿ, ಬೆಳಗಾವಿ, ಬೀದರ್‌, ಚಿಕ್ಕೋಡಿ ಸಹಿತ ಉತ್ತರ ಕರ್ನಾಟಕ ಭಾಗದಲ್ಲಿ ಪರೀಕ್ಷಾ ನಕಲು ಹಾಗೂ ಅಕ್ರಮ ಅವ್ಯಾಹತವಾಗಿ ನಡೆಯುತ್ತಿರುವುದನ್ನು ಉಲ್ಲೇಖೀಸಿರುವ ಇಲಾಖೆ, ಪರೀಕ್ಷಾ ಪಾವಿತ್ರ್ಯತೆ ಕಾಪಾಡಲು ಈಗಾಗಲೇ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಉಪ ನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಈಗಾಗಲೇ ಒಂದು ಸುತ್ತಿನ ಮಾತುಕತೆ, ಸಭೆಯನ್ನೂ ನಡೆಸಿದೆ. ಜತೆಗೆ ಈಗ ಜಿಲ್ಲಾ ಹಂತದಿಂದ ಕ್ರಿಯಾ ಯೋಜನೆ ಮೂಲಕ ಸಲಹೆ ಪಡೆಯಲು ಮುಂದಾಗಿದೆ.

ಪರೀಕ್ಷೆ ಮಂಡಳಿ ಸಲಹೆ
ಪ್ರಶ್ನೆ ಪತ್ರಿಕೆಗಳಲ್ಲಿ ಎ, ಬಿ, ಸಿ, ಡಿ ವರ್ಷನ್‌ ಹಾಗೂ ಕ್ಯೂಆರ್‌ ಕೋಡ್‌ಗಳನ್ನು ಅಳವಡಿಸಬೇಕು. ನೀಟ್‌ ಮಾದರಿಯಲ್ಲಿ ವಿದ್ಯಾರ್ಥಿಗಳಿಗೆ ವಸ್ತ್ರಸಂಹಿತೆ ಜಾರಿಗೊಳಿಸಿ, ವಿದ್ಯಾರ್ಥಿಗಳು ಶೂ ಧರಿಸದೆ ಪರೀಕ್ಷೆ ಬರೆಯುವ ಮಾರ್ಗಸೂಚಿ ಹೊರಡಿಸಬೇಕು. ಪರೀಕ್ಷಾ ಕೇಂದ್ರದ ಪ್ರತಿ ಕೊಠಡಿಯಲ್ಲಿ ಸಿಸಿಟಿವಿ ಹಾಗೂ ಡಿವಿಆರ್‌ ಅಳವಡಿಸಿ ದೃಶ್ಯಾವಳಿಗಳನ್ನು ಡಯಟ್‌ ಅಧಿಕಾರಿಗಳಿಂದ ಪರಿಶೀಲಿಸುವ ವ್ಯವಸ್ಥೆ ಮಾಡಬೇಕು.

Advertisement

ಪ್ರಶ್ನೆಪತ್ರಿಕೆ ಬಂಡಲ್‌ ತೆರೆಯುವುದನ್ನು ಮತ್ತು ಕೊನೆಯಲ್ಲಿ ಸೀಲ್‌ ಮಾಡುವುದನ್ನು ವೆಬ್‌ ಕಾಸ್ಟಿಂಗ್‌ ಮಾಡಬೇಕು. ಬಾಡಿಗೆ ಆಧಾರದಲ್ಲಿ ಪ್ರತಿಯೊಂದು ಪರೀಕ್ಷಾ ಕೇಂದ್ರದಲ್ಲಿ ಡ್ರೋನ್‌ ಕೆಮರಾ ಮೂಲಕ ಪರೀಕ್ಷಾ ಕಾರ್ಯ ಸೆರೆ ಹಿಡಿಯಬೇಕು. ಶಾಲಾ ಆರಂಭದ ದಿನಗಳಿಂದಲೇ ಪರೀಕ್ಷಾ ಅಕ್ರಮ ತಡೆಗೆ ವಿದ್ಯಾರ್ಥಿ, ಶಿಕ್ಷಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ಮಾಪನ ಮಂಡಳಿ ಅಧ್ಯಕ್ಷ ಎಸ್‌.ರಾಮಚಂದ್ರ ಸಲಹೆ ನೀಡಿದ್ದಾರೆ.

ಪರೀಕ್ಷೆಯಲ್ಲಿ ನಕಲು, ಅಕ್ರಮ ನಡೆಯುತ್ತಿರುವುದಕ್ಕೆ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ದೂಷಿಸದೆ ಮೇಲಿನ ಹಂತದ ಅಧಿಕಾರಿಗಳಾದ ನಾವೇ ಇದರ ಜವಾಬ್ದಾರಿ ಹೊರಬೇಕು. ಇದಕ್ಕಾಗಿ ಎಲ್ಲ ಜಿಲ್ಲೆಗಳಿಂದ ಕ್ರಿಯಾಯೋಜನೆ ತರಿಸಿಕೊಂಡು ನಕಲು ಹಾಗೂ ಅಕ್ರಮ ಮುಕ್ತ ಪರೀಕ್ಷೆ ನಡೆಸಲು ಅಂತಿಮ ಯೋಜನೆ ರೂಪಿಸಲಾಗುವುದು.
– ರಿತೇಶ್‌ಕುಮಾರ್‌ ಸಿಂಗ್‌, ಸರಕಾರದ ಪ್ರಧಾನ ಕಾರ್ಯದರ್ಶಿ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ, ಬೆಂಗಳೂರು

ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next