ಬಾದಾಮಿ: ಕೋವಿಡ್ 19 ವೈರಸ್ ಹರಡದಂತೆ ಮುನ್ನಚ್ಚರಿಕೆ ಕ್ರಮವಾಗಿ ರಾಜ್ಯದಲ್ಲಿ ಲಾಕ್‌ಡೌನ್‌ಜಾರಿಯಲ್ಲಿರುವುದರಿಂದ ಪಟ್ಟಣದಲ್ಲಿ ಅನಾವಶ್ಯಕ ದ್ವಿಚಕ್ರ ವಾಹನ ಸಂಚಾರ ನಿಷೇಧಿಸಲಾಗಿದೆ ಎಂದು ತಹಶೀಲ್ದಾರ್ ಸುಹಾಸ ಇಂಗಳೆ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಲಾಕ್‌ಡೌನ್ ಜಾರಿಯಲ್ಲಿದ್ದರೂ ಸಹಿತ ಅನವಶ್ಯಕ ದ್ವಿಚಕ್ರ ವಾಹನಗಳು ಸಂಚರಿಸುತ್ತಿವೆ. ಇದನ್ನು ತಡೆಗಟ್ಟಲು ಇಂದಿನಿಂದಲೇ ದ್ವಿಚಕ್ರ ವಾಹನ ಓಡಾಟ ನಿಷೇಧಿಸಲಾಗಿದೆ. ಬಾಗಲಕೋಟೆ ಜಿಲ್ಲೆ ರೆಡ್ ಝೋನ್‌ನಲ್ಲಿರುವುದರಿಂದ ಕೋವಿಡ್ 19 ಹರಡದಂತೆ ಬಿಗಿಯಾದ ಕ್ರಮ ಅನಿವಾರ್ಯವಾಗಿದೆ ಎಂದರು.
ಕಿರಾಣಿ ವರ್ತಕರು ಪ್ರತಿ ದಿನ ಸಂಜೆ 6 ರಿಂದ 8 ಗಂಟೆಯವರೆಗೆ ದೂರವಾಣಿ ಮೂಲಕ ಆರ್ಡರ್ ಪಡೆದು ಅಗತ್ಯ ವಸ್ತುಗಳನ್ನು ಮನೆ ಮನೆಗೆ ಸೇವೆ ಕೊಡಬೇಕು. ರೈತರು ಕಡ್ಡಾಯವಾಗಿ ವ್ಯವಸಾಯಕ್ಕೆ ಟ್ರ್ಯಾಕ್ಟರ್ ವಾಹನ ಉಪಯೋಗಿಸಬೇಕು. ಪಟ್ಟಣದಿಂದ ಯಾರೂ ಹೊರಗೆ ಹೋಗುವಂತಿಲ್ಲ. ಬೇರೆ ತಾಲೂಕಿನಿಂದ ನಗರಕ್ಕೆ ಬರುವಂತಿಲ್ಲ ಎಂದರು.
ತಾಲೂಕಿನ ಜಾಲಿಹಾಳ ಮತ್ತು ಹಲಕುರ್ಕಿಯಲ್ಲಿ ಚೆಕ್‌ಪೋಸ್ಟ್ ಹಾಕಲಾಗಿದೆ. ಅನವಶ್ಯಕ ಬೈಕ್‌ಹೊರಗಡೆ ಬಂದರೆ ಯಾವುದೇ ರಾಜಕೀಯ ಒತ್ತಡಕ್ಕೆ ಅವಕಾಶ ಇಲ್ಲದಂತೆ ನಿರ್ದಾಕ್ಷಿಣ್ಯವಾಗಿ ಬೈಕ್ ಸೀಜ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಿಪಿಐ ರಮೇಶ ಹಾನಾಪುರ ಮಾತನಾಡಿ, ನಮ್ಮ ಜಿಲ್ಲೆ ಈಗಾಗಲೇ ರೆಡ್ ಝೋನ್ ಇರುವುದರಿಂದ ತಾಲೂಕಿಗೆ ಕೋವಿಡ್ 19 ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು. ಅನವಶ್ಯಕ ಓಡಾಟ, ಬೇಕಾಬಿಟ್ಟಿ ಬೈಕ್ ಸವಾರಕ್ಕೆ ಬ್ರೇಕ್ ಹಾಕಲು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ದ್ವಿಚಕ್ರವಾಹನ ನಿಷೇಧ ಮಾಡಲಾಗಿದ್ದು, ಕೊರೊನಾ ತಡೆಗಟ್ಟಲು ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು. ಸಾರ್ವಜನಿಕರು ಯಾವುದೇ ಸಮಸ್ಯೆ ಇದ್ದರೆ ಸಹಾಯವಾಣಿ ಮೊ;9901505090, 9945005115, 9480803949, 9480851100 ಸಂಪರ್ಕಿಸಿದರೆ ಅಗತ್ಯ ಸಹಾಯ ಮಾಡುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಿಎಸ್‌ಐ ಪ್ರಕಾಶ ಬಣಕಾರ, ಮುಖ್ಯಾಧಿಕಾರಿ ಜ್ಯೋತಿಗಿರೀಶ ಹಾಜರಿದ್ದರು.