Advertisement

ಪರೀಕ್ಷಾ ಅಕ್ರಮ ತಡೆಗೆ ಕ್ರಮ: ಭೂಬಾಲನ್‌

06:16 PM May 19, 2022 | Team Udayavani |

ಬಾಗಲಕೋಟೆ: ಜಿಲ್ಲೆಯಲ್ಲಿ ಮೇ 21 ಮತ್ತು 22ರಂದು ನಡೆಯಲಿರುವ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮ ನಡೆಯದಂತೆ ತಡೆಯುವ ನಿಟ್ಟಿನಲ್ಲಿ ಅಭ್ಯರ್ಥಿಗಳ ಎರಡು ಹಂತದ ತಪಾಸಣೆ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್‌ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಜಿಲ್ಲಾ ಪಂಚಾಯತ್‌ ಸಭಾ ಭವನದಲ್ಲಿ ಸಿಇಟಿ ಪರೀಕ್ಷಾ ಕುರಿತು ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಒಟ್ಟು 22 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಪ್ರತಿಯೊಂದು ಕೊಠಡಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತಿದೆ. ಅಲ್ಲದೇ ಪರೀಕ್ಷಾ ಅಭ್ಯರ್ಥಿಗಳನ್ನು ಎರಡು ಹಂತದಲ್ಲಿ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಪ್ರಥಮ ಹಂತದಲ್ಲಿ ಪ್ರವೇಶ ದ್ವಾರದಲ್ಲಿ ಅಭ್ಯರ್ಥಿಗಳ ಪ್ರವೇಶ ಪತ್ರ ಪರಿಶೀಲಿಸಿ ಖಚಿತಪಡಿಸಿಕೊಂಡ ನಂತರ ಮೊಬೈಲ್‌, ಬ್ಲೂಟೂತ್‌ ಡಿವೈಸ್‌, ಇಲೆಕ್ಟ್ರಾನಿಕ್‌ ವಸ್ತುಗಳು, ಕ್ಯಾಲ್ಕುಲೇಟರ್‌ ಸೇರಿದಂತೆ ಇತರೆ ನಿಷೇಧಿತ ವಸ್ತುಗಳನ್ನು ಪರಿಶೀಲಿಸಲಾಗುತ್ತಿದೆ ಎಂದರು.

2ನೇ ಹಂತದಲ್ಲಿ ಪರೀಕ್ಷಾ ಕೊಠಡಿಯ ಪ್ರವೇಶಿಸುವ ಅಭ್ಯರ್ಥಿಗಳನ್ನು ಮೆಟಲ್‌ ಡಿಟೆಕ್ಟರ್‌ ಉಪಯೋಗಿಸಿ ತಪಾಸಣೆ ಕೈಗೊಳ್ಳಲಾಗುತ್ತಿದೆ. ಯಾವುದೇ ರೀತಿಯ ಪರೀಕ್ಷಾ ಕೊಠಡಿಯಲ್ಲಿ ನಿರ್ಬಂಧಿಸಿದ ವಸ್ತುಗಳನ್ನು ಪರಿಶೀಲಿಸಿದ ನಂತರವೇ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ. ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮ ನಡೆಯದಂತೆ ನಿಯೋಜನೆಗೊಂಡ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ನಿಗಾವಹಿಸುವ ಕೆಲಸವಾಗಬೇಕು. ಮೇಲುಸ್ತುವಾರಿಗಾಗಿ ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಒಳಗೊಂಡ ತ್ರಿ ಸದಸ್ಯ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.

ಪರೀಕ್ಷಾ ಕೇಂದ್ರದ ಸೂತ್ತ 144 ಕಲಂ 200 ಮೀಟರ್‌ ವ್ಯಾಪ್ತಿಯ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗುತ್ತಿದ್ದು, ಈ ವ್ಯಾಪ್ತಿಯಲ್ಲಿ ಪರೀಕ್ಷಾ ಅವಧಿಯಲ್ಲಿ ಝರಾಕ್ಸ್‌ ಅಂಗಡಿಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳಬೇಕು. ಅಲ್ಲದೇ ಪರೀಕ್ಷಾರ್ಥಿಗಳು ಯಾವುದೇ ತರಹದ ಮೊಬೈಲ್‌, ಬ್ಲೂಟೂತ್‌, ಡಿವೈಸ್‌ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ಸ್‌ ವಸ್ತುಗಳು ಹಾಗೂ ಬ್ಯಾಗ್‌ಗಳನ್ನು ತರುವುದು ಸಂಪೂರ್ಣ ನಿಷೇಧವಿರುತ್ತದೆ.

Advertisement

ಅಭ್ಯ ರ್ಥಿಗಳು 1 ಗಂಟೆ ಮುಂಚೆ ಪರೀಕ್ಷಾ ಕೇಂದ್ರ ದಲ್ಲಿ ಹಾಜರಿರತಕ್ಕದ್ದೆಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಜಿಲ್ಲೆಯಲ್ಲಿ ಮೇ 21ರಂದು ಪ್ರಥಮ ಅಧಿವೇಶನಕ್ಕೆ 5059, ದ್ವಿತೀಯ ಅಧಿವೇಶನದಲ್ಲಿ 1031 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಮೇ 22ರಂದು ಪ್ರಥಮ ಹಾಗೂ ದ್ವಿತೀಯ ಅಧಿವೇಶನಕ್ಕೆ 4720 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಗೌಪ್ಯ ಸಾಮಗ್ರಿಗಳ ಅಭಿರಕ್ಷೆ, ವಿತರಣಾ ಸಮಿತಿ ಸಹ ರಚಿಸಲಾಗಿದ್ದು, 12 ಜನ ಪ್ರಶ್ನೆ ಪತ್ರಿಕಾ ಮಾರ್ಗಾಧಿಕಾರಿ, 22 ಜನ ಸಿಟಿಂಗ್‌ ಸ್ಕ್ವಾಡ್‌, ಪರೀಕ್ಷಾ ಕೇಂದ್ರದ ನಿಯಂತ್ರಣಾಧಿಕಾರಿಗಳು ಹಾಗೂ 307 ಜನರನ್ನು ಮೇಲ್ವಿಚಾರಕರನ್ನು ಮತ್ತು 22 ಜನ ಮೊಬೈಲ್‌ ಸ್ವಾಧೀನಾಧಿಕಾರಿಗಳು, ಪರೀಕ್ಷಾ ಕೇಂದ್ರಕ್ಕೆ 22 ಜನ ಹೆಡ್‌ ಪೊಲೀಸ್‌, ಪೊಲೀಸ್‌ ರನ್ನು ನಿಯೋಜಿಸಲಾಗಿದೆ ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪ ವಿಭಾಗಾಧಿಕಾರಿ ಶ್ವೇತಾ ಬಿಡಿಕರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್‌.ಎಸ್‌. ಬಿರಾದಾರ, ಇಲಕಲ್ಲ ಡಯಟ್‌ನ ಉಪನಿರ್ದೇಶಕ ಬಿ.ಕೆ. ನಂದನೂರ, ಪರೀಕ್ಷಾ ನೋಡಲ್‌ ಅಧಿಕಾರಿ ಎ.ಕೆ. ಬಸಣ್ಣವರ ಮುಂತಾದವರು ಇದ್ದರು.

ಪ್ರಥಮ ಹಂತದಲ್ಲಿ ಪ್ರವೇಶ ದ್ವಾರದಲ್ಲಿ ಅಭ್ಯರ್ಥಿಗಳ ಪ್ರವೇಶ ಪತ್ರ ಪರಿಶೀಲಿಸಿ, ಖಚಿತಪಡಿಸಿಕೊಂಡ ನಂತರ ಮೊಬೈಲ್‌, ಬ್ಲೂಟೂತ್‌ ಡಿವೈಸ್‌, ಇಲೆಕ್ಟ್ರಾನಿಕ್‌ ವಸ್ತುಗಳು, ಕ್ಯಾಲ್ಕುಲೇಟರ್‌ ಸೇರಿದಂತೆ ಇತರೆ ನಿಷೇಧಿತ ವಸ್ತುಗಳನ್ನು ಪರಿಶೀಲಿಸಿಯೇ ಒಳಗೆ ಬಿಡಲಾಗುವುದು. –ಟಿ. ಭೂಬಾಲನ್‌, ಪ್ರಭಾರಿ ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next