ಶಿವಮೊಗ್ಗ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ವಸತಿ ಶಾಲೆಗಳಲ್ಲಿ 6 ನೇ ತರಗತಿ ಪ್ರವೇಶಾತಿಗೆ ಲಭ್ಯವಿರುವ ಸೀಟುಗಳಿಗೆ ಮಾರ್ಚ್ 20 ರಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ಜಿಲ್ಲೆಯ ಎಲ್ಲಾ ತಾಲೂಕುಗಳ ಒಟ್ಟು 14 ಪರೀಕ್ಷಾ ಕೇಂದ್ರಗಳಲ್ಲಿ ಸಾಮಾನ್ಯ ಪರೀಕ್ಷೆ ನಡೆಯಲಿದ್ದು, ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ಸೆಲ್ವಮಣಿ ಹೇಳಿದರು.
ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪರೀಕ್ಷಾ ಪೂರ್ವ ಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಪರೀಕ್ಷೆಗೆ ಜಿಲ್ಲೆಯ 14 ಪರೀಕ್ಷಾ ಕೇಂದ್ರಗಳಲ್ಲಿ 4728 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಅದಕ್ಕಾಗಿ ಪ್ರಶ್ನೆ ಪತ್ರಿಕೆಗಳನ್ನು ಸಕಾಲದಲ್ಲಿ ಕೇಂದ್ರಕ್ಕೆ ತಲುಪಿಸಿ, ಹಿಂದಿರುಗಿಸಲು ಮಾರ್ಗಾಧಿಕಾರಿಗಳು, ಪರೀಕ್ಷಾ ಮೇಲ್ವಿಚಾರಕರ ತಂಡಗಳನ್ನು ನಿಯೋಜಿಸಲಾಗಿದೆ. ಅಲ್ಲದೆ ಪೊಲೀಸ್ ಸಹಕಾರವನ್ನು ನೀಡುವಂತೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕೋರಲಾಗಿದೆ ಎಂದರು.
ಪರೀಕ್ಷೆ ನಡೆಯುವ ದಿನ ಪರೀಕ್ಷಾ ಕೇಂದ್ರದ ಸುತ್ತಮುತ್ತಲಿನ 200 ಮೀಟರ್ ಪ್ರದೇಶ ವ್ಯಾಪ್ತಿಯಲ್ಲಿ ಸಾರ್ವಜನಿಕರು ಸಂಚರಿಸುವುದು, ಗುಂಪು ಗೂಡುವುದನ್ನು ನಿರ್ಬಂಧಿಸಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪರೀಕ್ಷಾರ್ಥಿಗಳು ಹಾಗೂ ಪರೀಕ್ಷೆಗೆ ನಿಯೋಜಿತರಾದ ಅಧಿಕಾರಿ, ಸಿಬ್ಬಂದಿ ಹೊರತುಪಡಿಸಿ ಇತರೆ ವ್ಯಕ್ತಿಗಳು ಕೇಂದ್ರ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆಯದಂತೆ ಮುಂಜಾಗ್ರತಾ ಕ್ರಮವಹಿಸಲು ಸೂಚಿಸಲಾಗಿದೆ. ಪರೀಕ್ಷೆ ನಡೆಯುವ ದಿನ ಪರೀಕ್ಷಾ ಕೇಂದ್ರದ ಸುತ್ತಮುತ್ತಲಿನ ಟೈಪಿಂಗ್, ಝೆರಾಕ್ಸ್ ಹಾಗೂ ಫ್ಯಾಕ್ಸ್ ಅಂಗಡಿಗಳು ತೆರೆಯದಂತೆ ಸೂಚಿಸಲಾಗಿದೆ ಎಂದರು.
ಪರೀಕ್ಷ ಕಾರ್ಯಕ್ಕೆ ನಿಯೋಜಿತರಾದ ಅಧಿಕಾರಿ ಮತ್ತು ಸಿಬ್ಬಂದಿ ಸದಾ ಜಾಗೃತವಾಗಿದ್ದು ತಮ್ಮ ಜವಾಬ್ದಾರಿಯರಿತು ಕಾರ್ಯನಿರ್ವಹಿಸಿ. ಪರೀಕ್ಷ ಕೇಂದ್ರದೊಳಗೆ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎಲ್ಲಾ ಮೂಲಭೂತ ಅಗತ್ಯಗಳನ್ನು ಒದಗಿಸುವಂತೆ ಸೂಚಿಸಿದರು. ಪರೀಕ್ಷಾರ್ಥಿಗಳು ಪರೀಕ್ಷ ಕೇಂದ್ರಕ್ಕೆ ಮೊಬೈಲ್, ಪುಸ್ತಕ, ಬ್ಯಾಗ್, ಪರ್ಸ್, ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು, ಸ್ಮಾರ್ಟ್‌ವಾಚ್ ತರುವುದನ್ನು ಕಡ್ಡಾಯವಾಗಿ ನಿಷೇಧಿ ಸಲಾಗಿದೆ ಎಂದರು.
ಸಭೆಯ ನಂತರ ಪರೀಕ್ಷ ಕಾರ್ಯಕ್ಕೆ ನಿಯೋಜಿತರಾದ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಡಾ| ನಾಗೇಂದ್ರ ಎಫ್.ಹೊನ್ನಳ್ಳಿ ತರಬೇತಿ ನೀಡಿದರು. ಸಭೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ನಾಗರಾಜ್ ಕಾಗಲ್ಕರ್ ಸೇರಿದಂತೆ ಎಲ್ಲಾ ತಾಲೂಕಿನ ತಹಶೀಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕಾರ್ಯನಿರ್ವಾಹಕ ಅಧಿಕಾರಿಗಳು, ನಿಯೋಜಿತ ಅಧಿಕಾರಿ-ಸಿಬ್ಬಂದಿ ಉಪಸ್ಥಿತರಿದ್ದರು.