Advertisement

ಸಾರಿಗೆ ಸಿಬ್ಬಂದಿ ವೇತನ ಪಾವತಿಗೆ ಕ್ರಮ: ಸವದಿ

11:38 AM Jul 10, 2020 | Suhan S |

ಹುಬ್ಬಳ್ಳಿ: ಸಾರಿಗೆ ಸಂಸ್ಥೆ ಸಿಬ್ಬಂದಿ ವೇತನ ಪಾವತಿ ಕುರಿತು ಹಣಕಾಸು ಇಲಾಖೆಯೊಂದಿಗೆ ಚರ್ಚಿಸಲಾಗಿದೆ. ಹಿಂದಿನ ಎರಡು ತಿಂಗಳ ವೇತನವನ್ನು ಸರಕಾರವೇ ನೀಡಿದೆ. ಈ ಬಾರಿ ಶೇ.75 ವೇತನವನ್ನು ಸರಕಾರ ನೀಡಿದರೆ, ಉಳಿದ ಶೇ.25 ವೇತನವನ್ನು ಸಾರಿಗೆ ಇಲಾಖೆ ನೀಡುವ ಕುರಿತು ತಿಳಿಸಲಾಗಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ಸೇರಿದಂತೆ ಹಲವು ಇಲಾಖೆಗಳಲ್ಲಿ ಅನೇಕರಿಗೆ ಕೆಲಸ ಇಲ್ಲವಾಗಿದೆ. ಆದರೆ ಯಾವುದೇ ಕಾರಣಕ್ಕೂ ವೇತನ ನಿಲ್ಲಿಸುವುದಿಲ್ಲ. ಸಿಬ್ಬಂದಿ ಕಡಿತ ಕುರಿತು ಇನ್ನೂ ನಿರ್ಧಾರ ಕೈಗೊಂಡಿಲ್ಲ. ಇಲಾಖೆಯಲ್ಲಿ ಹೊರಗುತ್ತಿಗೆಯಲ್ಲಿ ಕೆಲಸ ಮಾಡುವವರ ಉದ್ಯೋಗವನ್ನು ತಾತ್ಕಾಲಿಕವಾಗಿತಡೆಹಿಡಿಯಲು ನಿರ್ಧರಿಸಲಾಗಿದೆ. ಹೊರಗುತ್ತಿಗೆಯಿಂದಾಗಿ ಇಲಾಖೆಗೆ ವರ್ಷಕ್ಕೆ 5-6 ಕೋಟಿ ರೂ. ವೆಚ್ಚ ಬರುತ್ತದೆ ಎಂದು ತಿಳಿಸಿದರು.

ಜನರ ಹಿಂದೇಟು: ಎಲ್ಲ ಮಾರ್ಗಗಳಲ್ಲಿ ಬಸ್‌ ಸಂಚಾರ ಒದಗಿಸಲು ನಾವು ಸಿದ್ಧರಿದ್ದೇವೆ. ಆದರೆ ಕೊರೊನಾ ಭೀತಿಯಿಂದ ಜನರು ಸಾರ್ವಜನಿಕ ಸಂಚಾರದಿಂದ ದೂರ ಉಳಿದಿದ್ದಾರೆ. ಜನರ ಸಂಚಾರಕ್ಕೆ ಅನುಗುಣವಾಗಿ ಹಂತ ಹಂತವಾಗಿ ಬಸ್‌ಗಳ ಸಂಖ್ಯೆ ಹೆಚ್ಚಿಸಲಾಗುತ್ತಿದೆ. ಆದರೆ ಅನವಶ್ಯಕವಾಗಿ ಬಸ್‌ಗಳನ್ನು ಓಡಿಸಲು ಸಾಧ್ಯವಿಲ್ಲ. ಕೆಲ ಸಿಬ್ಬಂದಿಗೆ ಕೋವಿಡ್ ಬಂದಿತೆಂಬ ಕಾರಣಕ್ಕೆ ಸಾರಿಗೆ ಸೇವೆಯನ್ನು ಬಂದ್‌ ಮಾಡಲಾಗುವುದಿಲ್ಲ. ಕೆಲ ಜನಪ್ರತಿನಿಧಿಗಳಿಗೂ ಕೋವಿಡ್ ಬಂದಿದೆ, ಕೋವಿಡ್ ಕಾರಣಕ್ಕೆ ಮನೆಯಲ್ಲಿ ಕೂಡಲಾಗುವುದಿಲ್ಲ ಎಂದರು.

ಸುಳ್ಳು ಆರೋಪ ಶೋಭೆ ತರದು :  ಕೋವಿಡ್‌ ಉಪಕರಣ ಖರೀದಿಯಲ್ಲಿ ಯಾವುದೇ ಅವ್ಯವಹಾರವಾಗಿಲ್ಲ. ಬೇಕಿದ್ದರೆ ತನಿಖೆಯಾಗಲಿ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು. ಮುಖ್ಯಮಂತ್ರಿಯಾಗಿ ಐದು ವರ್ಷ ಕೆಲಸ ಮಾಡಿರುವ ಸಿದ್ದರಾಮಯ್ಯ ಜವಾಬ್ದಾರಿ ಅರಿತು ಆರೋಪ ಮಾಡಲಿ. ಕೋವಿಡ್ ಆರಂಭವಾದಾಗಿನಿಂದ ರಾಜ್ಯ ಸರಕಾರ 600 ಕೋಟಿಗಿಂತ ಹೆಚ್ಚು ಮೊತ್ತದ ಸಲಕರಣೆ ಖರೀದಿಸಿಲ್ಲ. 2000 ಕೋಟಿ ರೂ. ಅವ್ಯವಹಾರವಾಗಿದೆ ಎಂದು ಸಿದ್ದರಾಮಯ್ಯ ಅನವಶ್ಯಕವಾಗಿ ಆರೋಪ ಮಾಡುತ್ತಿದ್ದಾರೆ. ವಿರೋಧ ಪಕ್ಷದ ಮುಖಂಡರೆಂದರೆ ಎಲ್ಲವನ್ನೂ ವಿರೋಧ ಮಾಡುವುದಲ್ಲ. ಮಾತಿನಲ್ಲಿ ತೂಕ ಇರಬೇಕು. ಆರೋಪವನ್ನು ಜನ ಒಪ್ಪಬೇಕು, ಅದು ಸತ್ಯಕ್ಕೆ ಸಮೀಪ ಇರಬೇಕು. ಸುಳ್ಳು ಆರೋಪ ಸಿದ್ದರಾಮಯ್ಯ ಅವರಿಗೆ ಶೋಭೆ ತರುವುದಿಲ್ಲ. ಮುರುಗೇಶ ನಿರಾಣಿ ಅವರ ಬಳಿ ಸಾಕ್ಷಿಯಿದೆ ಎಂಬುದು ಕೇವಲ ಊಹಾಪೋಹ. ನಿರಾಣಿ ಅವರು ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ತಮ್ಮ ಬಳಿ ಯಾವುದೇ ಪುರಾವೆ ಇಲ್ಲ ಎಂದು ಹೇಳಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next