Advertisement

Karnataka: ಹೊಸ ವಿವಿ ಆರ್ಥಿಕ ಸಬಲತೆಗೆ ಕ್ರಮ: ಡಾ| ಸುಧಾಕರ್‌

11:44 PM Dec 07, 2023 | Team Udayavani |

ಬೆಳಗಾವಿ: ರಾಜ್ಯದಲ್ಲಿ ಹೊಸದಾಗಿ ಸ್ಥಾಪಿಸಲಾಗಿರುವ ಚಾಮರಾಜ ನಗರ, ಹಾವೇರಿ, ಬಾಗಲಕೋಟೆ, ಕೊಪ್ಪಳ, ಹಾಸನ, ಬೀದರ್‌ ಮತ್ತು ಕೊಡಗು ವಿಶ್ವವಿದ್ಯಾನಿಲಯಗಳಿಗೆ ಆರ್ಥಿಕವಾಗಿ ಸಬಲತೆ ಮತ್ತು ಅಗತ್ಯ ಮೂಲ ಸೌಕರ್ಯ ಒದಗಿಸುವ ಬಗ್ಗೆ ಸಮಗ್ರ ವರದಿ ಸಿದ್ಧಪಡಿಸಿ ಬಳಿಕ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ.ಸುಧಾಕರ್‌ ಹೇಳಿದರು.

Advertisement

ವಿಧಾನ ಪರಿಷತ್‌ನಲ್ಲಿ ಗುರುವಾರ ಸದಸ್ಯರಾದ ಗೋವಿಂದರಾಜು ಮತ್ತು ಕೆ.ಎ.ತಿಪ್ಪೇಸ್ವಾಮಿ ಹಾಗೂ ಸೂರಜ್‌ ರೇವಣ್ಣ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿ, ವಿದ್ಯಾರ್ಥಿಗಳ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಈ ಹೊಸ ವಿವಿಗಳ ಮೂಲಭೂತ ಸೌಕರ್ಯಗಳ ಕೊರತೆ ನೀಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಸ್ಪಷ್ಟ ನಿಲುವು ಪ್ರಕಟಿಸಲಾಗುವುದು. ನೂತನ ವಿವಿಗಳಿಗೆ ಹಂಚಿಕೆಯಾದ ವಾರ್ಷಿಕ 2 ಕೋಟಿ ರೂ. ಆವರ್ತಕ ವೆಚ್ಚದಲ್ಲಿ ಸರಕಾರದ ಆದೇಶದಂತೆ ವೇತನ ಪಾವತಿಗಾಗಿ ತಲಾ 1 ಕೋಟಿ ರೂ.ಗಳಂತೆ 7 ಕೋಟಿ ರೂ.ಗಳನ್ನು ಪುನರ್‌ ವಿನಿಯೋಗದ ಮೂಲಕ ಬಿಡುಗಡೆಗೊಳಿಸಿ ಆದೇಶಿಸಿದೆ ಎಂದರು.
ಹಣಕಾಸಿನ ಮುಗ್ಗಟ್ಟು ಇದೆ. ಹೊಸ ವಿಶ್ವವಿದ್ಯಾನಿಲಯ ಸ್ಥಾಪನೆ ಮಾಡಬೇಕಾದರೆ ಒಂದು ವಿವಿಗೆ ಐದು ವರ್ಷಕ್ಕೆ 342 ಕೋಟಿ ರೂ.ಬೇಕು. ಹಿಂದಿನ ಸರಕಾರ ಅವೈಜ್ಞಾನಿಕವಾಗಿ, ಮಾನದಂಡ ಅನುಸರಿಸದೆ ಹಾಗೂ ಆರ್ಥಿಕ ಇತಿಮಿತಿಗಳನ್ನು ನೋಡದೆ 7 ವಿವಿಗಳನ್ನು ಸ್ಥಾಪಿಸಿದೆ. ಇದೆಲ್ಲವನ್ನೂ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ ಎಂದು ಸಚಿವರು ಹೇಳಿದರು.

ಬೋಧಕ-ಬೋಧಕೇತರ ಹುದ್ದೆ ಗಳಿಗೆ ಸಂಬಂಧಿಸಿ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಅಧಿನಿಯಮ 58ರ ಅನ್ವಯ ಕ್ರಮ ಕೈಗೊಳ್ಳುವ ಕುರಿತು ಅವಕಾಶ ಕಲ್ಪಿಸಲಾಗಿದ್ದು, ಅದರನ್ವಯ ಸರಕಾರದ ಹಂತದಲ್ಲಿ ನೂತನ ವಿವಿಗಳಿಗೆ ಪ್ರಸ್ತಾವಿತ ಬೋಧಕ-ಬೋಧಕೇತರ ಸೇವಾ ಭದ್ರತೆಗೆ ಸಂಬಂಧಪಟ್ಟಂತೆ ನಿರ್ದೇಶನ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next