ಚಾಮರಾಜನಗರ: ಜಿಲ್ಲೆಯಲ್ಲಿ 11,839 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಸುರಕ್ಷತಾ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ. ಜಿಲ್ಲೆಯಲ್ಲಿ 10,806 ವಿದ್ಯಾರ್ಥಿಗಳು ಹೊಸದಾಗ ಪರೀಕ್ಷೆ ಬರೆಯುತ್ತಿದ್ದು, 247 ಮಂದಿ ಖಾಸಗಿ ಹಾಗೂ 629 ಪುನರಾವರ್ತಿತ ವಿದ್ಯಾರ್ಥಿಗಳಿದ್ದಾರೆ. ಇವರಲ್ಲಿ ಹೊರ ಜಿಲ್ಲೆಯಿಂದ ಬಂದ 41 ಜನ, ಹೊರ ರಾಜ್ಯದಿಂದ ನಾಲ್ವರು ಪರೀಕ್ಷೆ ಬರೆಯುತ್ತಿದ್ದಾರೆ.
ಜಿಲ್ಲೆಯ ಒಟ್ಟು 56 ಪರೀಕ್ಷಾ ಕೇಂದ್ರಗಳಿದ್ದು, ಇದರಲ್ಲಿ 46 ಕೇಂದ್ರಗಳು 8 ಉಪ ಕೇಂದ್ರಗಳಿವೆ. ಪರೀಕ್ಷಾ ಕೊಠಡಿಯಲ್ಲಿ ಭೌತಿಕ ಅಂತರ ಕಾಪಾಡಲು ಹೆಚ್ಚುವರಿ ಕೊಠಡಿ ಬಳಸಿದ್ದು ಉಪ ಕೇಂದ್ರಗಳೆಂದು ಪರಿಗಣಿಸಲಾಗಿದೆ. ಜೂ.25ರಿಂದ ಬೆಳಗ್ಗೆ 10.30ರಿಂದ ಪರೀಕ್ಷೆ ಆರಂಭವಾಗಲಿದ್ದು, ಪರೀಕ್ಷಾರ್ಥಿಗಳು ಎರಡು ಗಂಟೆ ಮುಂಚಿತವಾಗಿ ಅಂದರೆ 10.30ಕ್ಕೆ ಪರೀಕ್ಷಾ ಕೇಂದ್ರಕ್ಕೆ ಬರಬೇಕು.
ಕೋವಿಡ್ ಹಿನ್ನೆಲೆಯಲ್ಲಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆಗೆ ಆರೋಗ್ಯ ಇಲಾಖೆಯ ಸಿಬ್ಬಂದಿಯೂ ಇರುತ್ತಾರೆ. ಪ್ರತಿ ವಿದ್ಯಾರ್ಥಿಗೂ ಎರಡು ಮಾಸ್ಕ್, ಕೈಗೆ ಸ್ಯಾನಿಟೈಸರ್ ಹಾಕಲಾಗುವುದು. 2 ಗಂಟೆ ಮುಂಚೆಯೇ ಕೇಂದ್ರಕ್ಕೆ ಬರಬೇಕು ಎಂದು ಸೂಚಿಸಲಾಗಿದೆ.
ವಾಹನ ವ್ಯವಸ್ಥೆ: ಸಾರಿಗೆ ಅಗತ್ಯವಿರಯವ ಮಕ್ಕಳಿಗೆ ಕೆಎಸ್ ಆರ್‌ಟಿಸಿ ಬಸ್, 85 ಖಾಸಗಿ ವಾಹನ ವ್ಯವಸ್ಥೆ ಮಾಡಲಾಗಿದೆ. ಎಲ್ಲ ಕೇಂದ್ರಗಳಲ್ಲೂ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಪ್ರತಿ ಸಿಬ್ಬಂದಿ ಮಾಸ್ಕ್, ಸ್ಯಾನಿಟೈಸರ್ ಬಳಸುವಂತೆ ಸೂಚಿಸಲಾಗಿದೆ. ಕೋವಿಡ್ 19 ಮಾರ್ಗಸೂಚಿ ಪರಿಶೀಲನೆಗೂ ಎಲ್ಲಾ ವ್ಯವಸ್ಥೆ ಮಾಡಲಾಗಿದೆ.
ಇಡೀ ಜಿಲ್ಲೆಯ ಕಣ್ಗಾವಲು ಘಟಕಕ್ಕೆ ಜಿಪಂ ಸಿಇಒ ಅವರನ್ನು ಮೇಲಧಿಕಾರಿಯಾಗಿ ನೇಮಕ ಮಾಡಲಾಗಿದೆ. ಕಂಟೈನ್ಮೆಂಟ್ ವಲಯ ಬಂದರೆ ಆ ಪರೀಕ್ಷಾ ಕೇಂದ್ರವನ್ನು ಸ್ಥಳಾಂತರಿಸಲಾಗುವುದು. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಕ್ಕೂ ಪೊಲೀಸರ ನಿಯೋಜನೆ ಮಾಡಲಾಗಿದೆ.
ಪೋಷಕರು ಆತಂಕಕ್ಕೆ ಒಳಗಾಗಬಾರದು. ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ವಿದ್ಯಾರ್ಥಿಗಳು ಧೈರ್ಯವಾಗಿ ಪರೀಕ್ಷೆ ಬರೆಯಲು ಎಲ್ಲ ವ್ಯವಸ್ಥೆ ಮಾಡಲಾಗಿದೆ.
-ಡಾ. ಎಂ. ಆರ್. ರವಿ. ಜಿಲ್ಲಾಧಿಕಾರಿ