ಬೆಂಗಳೂರು: ಬೈಕ್ ವೀಲಿಂಗ್ ಮಾಡುತ್ತಿರುವ ಯುವಕರ ವಿರುದ್ಧ ನಗರ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದು, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹಿತೇಂದ್ರ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ನಗರದಲ್ಲಿ ಬೈಕ್ ವೀಲಿಂಗ್ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರಿಂದ ಸಾಮಾಜಿಕ ಜಾಲತಾಣಗಳ ಮೂಲಕ ಹಾಗೂ ನೇರವಾಗಿ ಠಾಣೆಗೇ ದೂರು ನೀಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಅಂತಹ ಯುವಕರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುತ್ತದೆ. ಜತೆಗೆ, ಅಪ್ರಾಪ್ತ ಮಕ್ಕಳು ಕೃತ್ಯದಲ್ಲಿ ಪಾಲ್ಗೊಂಡಿದ್ದರೆ ಅವರ ಪೋಷಕರನ್ನು ಬಂಧಿಸಲಾಗುವುದು ಎಂದು ತಿಳಿಸಿದರು.
ಕಳೆದ ವರ್ಷಕ್ಕೆ ಹೊಲಿಸಿದರೆ ಈ ವರ್ಷ ವೀಲಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. 2017ರಲ್ಲಿ 140 ಪ್ರಕರಣ ದಾಖಲಿಸಿದ್ದು, 162 ವಾಹನಗಳ ಜಪ್ತಿ ಮಾಡಲಾಗಿತ್ತು. ಹಾಗೆಯೇ 131 ಮಂದಿಯನ್ನು ಬಂಧಿಸಲಾಗಿತ್ತು. ಪ್ರಸಕ್ತ ವರ್ಷದಲ್ಲಿ (ಆ.17ರವರೆಗೆ) 148 ಪ್ರಕರಣಗಳನ್ನು ದಾಖಲಿಸಲಾಗಿದೆ. 160 ವಾಹನಗಳ ಜಪ್ತಿ ಮಾಡಿದ್ದು, 161 ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಮೆಕಾನಿಕ್‌ಗಳ ವಿರುದ್ಧ ಕೇಸ್: ಹಣದಾಸೆಗೆ ಬಿದ್ದು ಯುವಕರು ಹೇಳಿದ್ದಂತೆ ಬೈಕ್‌ಗಳನ್ನು ಮಾರ್ಪಾಡು(ಸೈಲೆನ್ಸರ್ ಹಾಗೂ ಇತರೆ) ಮಾಡಿಕೊಡುವ ಮೆಕಾನಿಕ್‌ಗಳ ವಿರುದ್ಧವು ಪ್ರಕರಣ ದಾಖಲಿಸಲಾಗುವುದು. ಬಂಧನಕ್ಕೊಳಗಾಗಿರುವ ಯುವಕರ ಮಾಹಿತಿ ಮೇರೆಗೆ ಅಂತಹ ಮೆಕಾನಿಕ್‌ಗಳ ಪತ್ತೆಗೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹಿತೇಂದ್ರ ಹೇಳಿದರು. ಜತೆಗೆ ಜಾಗೃತಿ ಮೂಡಿಸಲು ಶಾಲಾ ಕಾಲೇಜುಗಳ ಮುಂದೆ ಫಲಕ ಹಾಗೂ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.