ಹಾಸನ: ಅಕ್ರಮ ಮದ್ಯಮಾರಾಟ, ಗುಟ್ಕಾ ಹಾಗೂ ಮದ್ಯ ಸೇವಿಸಿ ವಾಹನ ಚಲಾಯಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್‌ಗೌಡ ಹೇಳಿದರು. ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಚನ್ನರಾಯಪಟ್ಟಣ, ಸಕಲೇಶಪುರ, ಅರಕಲಗೂಡು, ಹಾಸನ ತಾಲೂಕುಗಳಿಂದ ಸಾರ್ವಜನಿಕರಿಂದ ಬಂದಂತಹ ಕರೆ ಸ್ವೀಕರಿಸಿ ಅವರ ಸಮಸ್ಯೆಗೆ ಸ್ಪಂದಿಸಿ ಮಾತನಾಡಿದರು.
ಅಂಗಡಿಗಳ ಸ್ಥಳಾಂತರ: ಟ್ರಾಫಿಕ್‌ಗೆ ಸಂಬಂಧಿಸಿದ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಲಾಗುವುದು. ಕೆಲವು ಕಡೆ ಫುಟ್‌ಪಾತ್‌ನಲ್ಲಿ ಇರುವ ಅಂಗಡಿಗಳಿಂದ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿದ್ದು ಅಂಗಡಿಗಳನ್ನು ಆದಷ್ಟು ಬೇಗ ಬೇರೆಡೆಗೆ ಸ್ಥಳಾಂತರಗೊಳಿಸುವುದಾಗಿ ತಿಳಿಸಿದರು.
ವ್ಹೀಲಿಂಗ್, ಗುಟ್ಕಾ, ಅಕ್ರಮ ಮದ್ಯ ಮಾರಾಟ, ಮುಂತಾದ ಚಟುವಟಿಕೆಗಳನಿಯಂತ್ರಣ ಹಾಗೂ ಅನಧಿಕೃತವಾಗಿ ಆಟೋ ಓಡಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಮಾಡಿದ ಮನವಿಗೆ ಸ್ಪಂದಿಸಿದ ಅವರು, ಈ ಸಂಬಂಧ ಅಗತ್ಯ ಕ್ರಮ ಜರುಗಿಸಲಾಗುವುದು ಎಂದರು.
ಇದನ್ನೂ ಓದಿ:ಗ್ರಾಮಾಭಿವೃದ್ಧಿಯಿಂದ ಜನಪರ ಕಾರ್ಯಕ್ರಮ
ರಕ್ಷಣೆ ಒದಗಿಸುವೆವು: ಚನ್ನರಾಯಪಟ್ಟಣ ನಗರದ ನವೋದಯ ವೃತ್ತದ ಸಿಗ್ನಲ್ ಸಮಸ್ಯೆಯನ್ನು ಆದಷ್ಟು ಬೇಗ ಸರಿಪಡಿಸಿ ಲೈಟ್‌ಗಳನ್ನು ಅಳವಡಿಸಿ ಜನರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದ ಅವರು, ಜನರಿಗೆ ನಿವೇಶನದ ಅಥವಾ ಜಮೀನುಗಳ ಸರ್ವೇ ಸಂದರ್ಭದಲ್ಲಿ ಯಾರಿಂದಾದರೂ ಅಡ್ಡಿಯಾದರೆ ನಮ್ಮ ಇಲಾಖೆಯಿಂದ ರಕ್ಷಣೆ ಒದಗಿಸಲಾಗುವುದು ಎಂದು ಹೇಳಿದರು.