Advertisement

ಅತಿಕ್ರಮಣ ವಿರುದ್ಧ ಕಟ್ಟು ನಿಟ್ಟಿನ ಕ್ರಮ; ಅಧಿಕಾರಿಗಳಿಗೆ ಡಾ|ಕೆ.ವಿ. ರಾಜೇಂದ್ರ ಸೂಚನೆ

12:09 AM May 28, 2022 | Team Udayavani |

ಮಂಗಳೂರು: ಸರಕಾರಿ ಜಾಗವನ್ನು ಯಾರೇ ಅತಿಕ್ರಮಣ ಮಾಡಿದರೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಮತ್ತು ಅತಿಕ್ರಮಣ ತೆರವುಗೊಳಿಸಿ ಸರಕಾರಿ ಉದ್ದೇಶಗಳಿಗೆ ಮೀಸಲಿರಿಸ‌ಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ ಹೇಳಿದರು.

Advertisement

ಗಂಜೀಮಠ ಗ್ರಾಮ ಪಂಚಾಯತ್‌ನ ಮೊಗರು ಗ್ರಾಮದಲ್ಲಿ ಶುಕ್ರವಾರ ಜರಗಿದ ಜಿಲ್ಲಾಧಿಕಾರಿಯವರ ಗ್ರಾಮ ವಾಸ್ತವ್ಯದ ಅಂಗವಾಗಿ ಕುಕ್ಕಟ್ಟೆ ವಿದ್ಯಾಭಾರತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸರಕಾರಿ ಜಾಗ ಅತಿಕ್ರಮಣ ಕುರಿತು ಬಂದ ದೂರು ಅರ್ಜಿಯ ಕುರಿತು ಅವರು ಪ್ರತಿಕ್ರಿಯಿಸಿದರು.

ಮಂಜೂರಾತಿ ಪತ್ರ ವಿತರಣೆ
ಗ್ರಾಮವಾಸ್ತವ್ಯದಲ್ಲಿ ಒಟ್ಟು ವಿವಿಧ ಸಮಸ್ಯೆ, ವಿಚಾರಗಳಿಗೆ ಸಂಬಂಧಿಸಿ ಒಟ್ಟು 63 ಅರ್ಜಿಗಳ ಸಲ್ಲಿಕೆಯಾಯಿತು. 30 ಅರ್ಜಿಗಳನ್ನು ಸ್ಥಳದಲ್ಲೇ ಇತ್ಯರ್ಥಗೊಳಿಸಲಾಯಿತು. 20 ಮಂದಿಗೆ ವಸತಿ ಹಾಗೂ 14 ಮಂದಿಗೆ ಪಿಂಚಣಿ, ಮಾಸಾಶನ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಯವರು, ಗ್ರಾಮ ವಾಸ್ತವ್ಯದಲ್ಲಿ ಮಾಸಿಕ ಪಿಂಚಣಿ, ಮನೆ, ನಿವೇಶನ, ರಸ್ತೆ, ಕೃಷಿ ಹಾನಿ, ತೋಟಗಾರಿಕೆ ಬೆಳೆ ಹಾನಿ, ಶಾಲಾ ಅಭಿವೃದ್ಧಿ, ಕಂದಾಯ ಇಲಾಖೆ ಸೇರಿದಂತೆ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ಬಂದಿರುವ ಅರ್ಜಿಗಳಲ್ಲಿ ಶೇ. 50ಕ್ಕೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲಾಗಿದೆ. ಶೇ. 25ನ್ನು ಹೆಚ್ಚಿನ ಪರಿಶೀಲನೆ ಹಿನ್ನೆಲೆಯಲ್ಲಿ ಮುಂದಿನ ಕ್ರಮಕ್ಕೆ ಕಳುಹಿಸಲಾಗುತ್ತಿದೆ. ಇನ್ನುಳಿದ ಶೇ. 25 ಅರ್ಜಿಗಳು ಕಾನೂನು ಸಮಸ್ಯೆ, ನ್ಯಾಯಾಲಯಗಳಲ್ಲಿರುವಂತದ್ದು ಆಗಿದ್ದು ಈ ಬಗ್ಗೆ ಅವರಿಕೆ ಮನವರಿಕೆ ಮಾಡಿ ಸೂಕ್ತ ಮಾಹಿತಿ ನೀಡಲಾಗಿದೆ ಎಂದರು.

ವಿವಿಧೆಡೆ ಭೇಟಿ
ಜಿಲ್ಲಾಧಿಕಾರಿಯವರು ಮಧ್ಯಾಹ್ನದ ಬಳಿಕ ಗ್ರಾಮದ ವಿವಿಧೆಡೆಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಅಂಗನವಾಡಿ, ಮೊಗರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕೊರಗರ ಕಾಲನಿಗೆ ಭೇಟಿ ನೀಡಿದರು.ಕೊರಗರ ಕಾಲನಿಯಲ್ಲಿ ಮೂಲಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಗಂಜೀಮಠದಲ್ಲಿ ಮನೆ ನಿವೇಶನಕ್ಕೆ ಮೀಸಲಿರಿಸಿರುವ 11.19 ಎಕ್ರೆ ಜಾಗಕ್ಕೆ ಭೇಟಿ ಸ್ಥಳ ಪರಿಶೀಲನೆ ಮಾಡಿದರು. ಗ್ರಾ.ಪಂ. ವ್ಯಾಪ್ತಿಯಲ್ಲಿ ಸರಕಾರದ ವಿವಿಧ ಉದ್ದೇಶಗಳಿಗೆ ಸುಮಾರು 25 ಎಕ್ರೆ ಜಾಗವನ್ನು ಹೊಂದಿಸಿಕೊಳ್ಳುವ ಬಗ್ಗೆ ವಿವಿಧಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಗ್ರಾಮಸ್ಥರಿಂದ ಮನವಿ
ಗ್ರಾಮಕ್ಕೆ ಸಂಬಂಧಿಸಿದ ವಿವಿಧ ಸಮಸ್ಯೆಗಳಿಗೆ ಬಗ್ಗೆ ಜನರು ಅರ್ಜಿ ಸಲ್ಲಿಸಿದರು. ಬಡವರಿಗೆ ಮನೆ ನಿರ್ಮಾಣಕ್ಕೆ 11 ಇ ನಿಬಂಧನೆ ಸೃಷ್ಟಿಸಿರುವ ಸಮಸ್ಯೆ, ಮೊಗರು-ಅರ್ಬಿ ರಸ್ತೆ ದುಸ್ಥಿತಿ, ಮೊಗರು ಅನುದಾನಿತ ಹಿ.ಪ್ರಾ. ಶಾಲೆಯಲ್ಲಿ ಶಿಕ್ಷಕರ ಕೊರತೆ, ಬಿಪಿಎಲ್‌ ಪಡಿತರ ಚೀಟಿ, ಪಿಂಚಣಿ, ಮಸಾಶನ ಸೇರಿದಂತೆ ವಿವಿಧ ವಿಚಾರಗಳಿಗೆ ಸಂಬಂಧಿಸಿ ಅರ್ಜಿಗಳು ಸಲ್ಲಿಕೆಯಾಗಿದ್ದವು.

ಜಿ.ಪಂ. ಸಿಇಒ ಡಾ| ಕುಮಾರ್‌, ಎಸಿ ಮದನಮೋಹನ್‌, ತಹಶೀಲ್ದಾರ್‌ ಪುರಂದರ ಹೆಗ್ಡೆ, ಗ್ರಾ.ಪಂ. ಅಧ್ಯಕ್ಷ ನೋಣಯ ಕೋಟ್ಯಾನ್‌, ಉಪಾಧ್ಯಕ್ಷೆ ಕುಮುದಾ ನಾಯ್ಕ, ಉಪತಹಶೀಲ್ದಾರ್‌ ಶಿವಪ್ರಸಾದ್‌, ಕಂದಾಯ ನಿರೀಕ್ಷಕ ಪೂರ್ಣಚಂದ್ರ ತೇಜಸ್ವಿ, ಪಿಡಿಒ ಜಗದೀಶ್‌ ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿ ರಾತ್ರಿ ವಾಸ್ತವ್ಯ
ರಾತ್ರಿ ವೇಳೆ ಮೊಗರು ಅನುದಾನಿತ ಹಿ.ಪ್ರಾ. ಶಾಲೆಯಲ್ಲಿ ವಾಸ್ತವ್ಯ ಹೂಡಿದ ಜಿಲ್ಲಾಧಿಕಾರಿ ಜನರ ಜತೆ ಅಭಿವೃದ್ಧಿ, ಸಮಸ್ಯೆಗಳಿಗೆ ಸಂಬಂಧಿಸಿ ಚರ್ಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next