ಬಾದಾಮಿ: ಶಿವಯೋಗಮಂದಿರ ಶಾಖಾಮಠವನ್ನು ಡಾ| ಸಂಗನಬಸವ ಶ್ರೀಗಳು ನವೀಕರಣಗೊಳಿಸುವ ಮೂಲಕ ಬಡವರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಹುಬ್ಬಳ್ಳಿ ಮೂರು ಸಾವಿರ ಮಠದ ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ಹೇಳಿದರು.
ಪಟ್ಟಣದ ಅಕ್ಕಮಹಾದೇವಿ ಅನುಭಾವ ಮಂಟಪದಲ್ಲಿ ಸದಾಶಿವ ಪ್ರಸಾದ ಭವನ, ಹಾಗೂ ಕುಮಾರೇಶ್ವರ ಸಭಾಭವನ, ನವೀಕೃತ ಅಕ್ಕಮಹಾದೇವಿ ಅನುಭಾವ ಮಂಟಪ ಉದ್ಘಾಟನಾ ಸಮಾರಂಭದಲ್ಲಿ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿ, ಬಡಜನರ ಮದುವೆ,ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಮಾಡುವುದು ಆರ್ಥಿಕ ಹೊರೆಯಾಗುತ್ತಿತ್ತು. ಆದರೆ ನವೀಕೃತ ಮಂಟಪದಲ್ಲಿ ಕೇವಲ 15 ಸಾವಿರ ಎಲ್ಲ ಸೌಲಭ್ಯ ಒದಗಿಸಿರುವುದು ಸಂತೋಷ ಸಂಗತಿ ಎಂದರು.
ಬಾಲೆಹೊಸೂರಿನ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಕುಮಾರೇಶ್ವರ ಸಭಾಭವನ ಉದ್ಘಾಟಿಸಿ ಮಾತನಾಡಿ, ಶಿವಯೋಗಮಂದಿರ ಶಾಖಾಮಠ ಬೆಳೆದು ಬಂದ ಹಾದಿಯನ್ನು ಹಾಗೂ ತಾವೂ ಸಹ ಈ ಶಾಖೆಯಲ್ಲಿದ್ದು ಒಂದು ತಿಂಗಳ ಪ್ರವಚನ ನೀಡಿರುವುದನ್ನು ಸ್ಮರಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ| ಸಂಗನಬಸವ ಸ್ವಾಮೀಜಿ, ಭಕ್ತರು ಲಿಂಗಧಾರಣೆ ಮಾಡಿಕೊಳ್ಳಬೇಕು. ಲಿಂಗಧಾರಣೆ ಮಾಡುವ ಸಂಬಂಧ ಪಾದಯಾತ್ರೆ ಮಾಡಿ ಎಲ್ಲರೂ ಲಿಂಗಧರಿಸಬೇಕು. ಅಕ್ಕನ ಬಳಗದವರು ಹೆಚ್ಚೆಚ್ಚು ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಖ್ಯಾತ ಯೋಗಗುರು ವಚನಾನಂದ ಸ್ವಾಮಿಗಳು, ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ನೀಲಕಂಠ ಸ್ವಾಮೀಜಿ, ರುದ್ರಮುನಿ ಸ್ವಾಮೀಜಿ, ಶಂಕರರಾಜೇಂದ್ರ ಸ್ವಾಮೀಜಿ, ಹೊಳೆ ಹುಚ್ಚೇಶ್ವರ ಸ್ವಾಮೀಜಿ, ಮಹಾಂತಲಿಂಗ ಶಿವಾಚಾರ್ಯ, ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಶಿವಪೂಜಾ ಶಿವಾಚಾರ್ಯ ಸ್ವಾಮೀಜಿ, ಕೊಟ್ಟೂರು ದೇವರು ಹಾಗೂ ಎ.ಸಿ. ಪಟ್ಟಣದ, ಎಂ.ಕೆ. ಪಟ್ಟಣಶೆಟ್ಟಿ, ಬಿ.ಬಿ. ಚಿಮ್ಮನಕಟ್ಟಿ, ಭೀಮಸೇನ್ ಚಿಮ್ಮನಕಟ್ಟಿ, ಎಂ.ಬಿ. ಹಂಗರಗಿ, ಮಹಾಂತೇಶ ಮಮದಾಪುರ ಇತರರು ಹಾಜರಿದ್ದರು.