Advertisement

ಅನ್ನದಾತರ ಒಪ್ಪಿಗೆ ಇಲ್ಲದೆ ಭೂಮಿ ಸ್ವಾಧೀನ ಸರಿಯಲ್ಲ

09:20 PM Feb 12, 2020 | Team Udayavani |

ತುಮಕೂರು: ರೈತ ಆಧಾರಿತ ಕೃಷಿ ಉಳಿಸಲು ಮುಂದಾಗಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಸಿ.ಭಯ್ನಾರೆಡ್ಡಿ ತಿಳಿಸಿದರು.ನಗರದ ಕನ್ನಡ ಸಾಹಿತ್ಯ ಸುವರ್ಣ ಸಭಾಂಗಣದಲ್ಲಿ ಬುಧವಾರ ನಡೆದ ದುಂಡು ಮೇಜಿನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಭೆಗೆ ಸಚಿವರು, ಮಾಜಿ ಸಚಿವರು, ಶಾಸಕರು ಭಾಗವಹಿಸದೆ ರೈತರ ಕಡೆಗಣಿಸುವ ಪರಿಸ್ಥಿತಿ ಗಮನಿಸಿದರೆ ಅವರಿಗೆ ರೈತಪರ ಕಾಳಜಿ ಇಲ್ಲ ಎಂದು ಅರ್ಥವಾಗುತ್ತಿದೆ ಎಂದ‌ು ಬೇಸರಿಸಿದರು.

Advertisement

ಹಲವು ಹೋರಾಟಗಳ ಪ್ರತಿಫ‌ಲವಾಗಿ “ಉಳುವವನೇ ಭೂಮಿಯ ಒಡೆಯ’ ಘೋಷಣೆ ಬಂದಿದ್ದರೂ “ದುಡ್ಡಿದ್ದವನೇ ಭೂಮಿಯ ಒಡೆಯ’ ಎಂಬ ಸ್ಥಿತಿ ನಿರ್ಮಾಣವಾಗುತ್ತಿದೆ. ಕೈಗಾರಿಕೆ, ರೈಲ್ವೆ, ವಿದ್ಯುತ್‌, ವಿಮಾನ ನಿಲ್ದಾಣಗಳ ರಿಯಲ್‌ ಎಸ್ಟೇಟ್‌ ಕಾರಿಡಾರ್‌ ಇತ್ಯಾದಿ ಅಭಿವೃದ್ಧಿ ಹೆಸರಿನಲ್ಲಿ ಹತ್ತಾರು ಸಾವಿರ ಎಕರೆ ಭೂಮಿ ರೈತರ ಒಪ್ಪಿಗೆ ಇಲ್ಲದೆ ಸ್ವಾಧೀನಪಡಿಸಿಕೊಳ್ಳುತ್ತಿರುವುದು ವಿಷಾದನೀಯ ಎಂದರು.

ಭೂಮಿ ಕಂಪನಿಗಳ ಪಾಲು: ರೈತ ವಿರೋಧಿ ಸರ್ಕಾರಗಳ ವಿರುದ್ಧ ಹಲವು ಹೋರಾಟಗಳು ದೇಶಾದ್ಯಂತ ನಡೆಯುತ್ತಿರುವಾಗಲೇ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಗುತ್ತಿಗೆ ಆಧಾರದಲ್ಲಿ ಕಂಪನಿಗಳಿಗೆ ಭೂಮಿ ಕೊಡಲು ಸರ್ಕಾರಗಳು ತುದಿಗಾಲಲ್ಲಿ ನಿಂತಿದ್ದರಿಂದ ಭೂಮಿಗಳು ಕಂಪನಿಗಳ ಪಾಲಾಗಿದೆ. ಇಂತಹ ಸ್ಥಿತಿಯಲ್ಲಿ ದೇಶಕ್ಕೆ ಅನ್ನ ಹಾಕುವ ಅನ್ನದಾನ ಪರ ನಿಲ್ಲಬೇಕಾದದ್ದು ಎಲ್ಲಾ ಕಾರ್ಮಿಕ, ದಲಿತ, ರೈತ ಸಂಘಟನೆಗಳ, ಜನಸಾಮಾನ್ಯರ ಆದ್ಯ ಕರ್ತವ್ಯ ಎಂದರು.

ಈ ಸಾಲಿನ ಬಜೆಟ್‌ನಲ್ಲಿ ಕಾಲಮಿತಿಯೊಳಗೆ ಬಗರ್‌ಹುಕುಂ ಸಾಗುವಳಿದಾರರ ಸಮಸ್ಯೆ ಇತ್ಯರ್ಥಪಡಿಸಿ ಪಹಣಿಯಲ್ಲಿನ ಪೈಕಿ (ಪಿ) ನಂಬರ್‌ನೂ° ಬಜೆಟ್‌ನಲ್ಲಿ ಮುಖ್ಯಮಂತ್ರಿಗಳಿಂದ ಘೋಷಣೆ ಮಾಡಿಸಿ ಇದಕ್ಕೆ ಅಗತ್ಯವಾಗಿರುವ ಮಾನವ ಸಂಪನ್ಮೂಲ ಮತ್ತು ಹಣಕಾಸು ಒದಗಿಸಲು ಮುಂದಾಗಬೇಕೆಂದು ಆಗ್ರಹಿಸಿದರು.

ಪ್ರಗತಿಪರ ಚಿಂತಕ ಕೆ.ದೊರೈರಾಜ್‌ ಮಾತನಾಡಿ, ಸರ್ಕಾರ ರಚನೆಯಾದ ಮೇಲೆ ನಿಯಂತ್ರಣ ಮಾಡುವ ಅಧಿಕಾರ ಮಾತ್ರ ಜನರ ಕೈಯಲ್ಲಿಲ್ಲ. ಸಮಸ್ಯೆ ಇತ್ಯರ್ಥಪಡಿಸದೆ ಭೂಕಬಳಿಕೆಗಷ್ಟೇ ಕಾನೂನು ದುರ್ಬಳಕೆಯಾಗುತ್ತಿವೆ. ಆದ್ದರಿಂದ ಹೋರಾಟಗಳಿಂದಷ್ಟೇ ರೈತರಿಗೆ ಭೂಮಿ ಸಿಗುವಂತೆ ಮಾಡಲಿವೆ ಎಂದರು.

Advertisement

ಎಲ್ಲಾ ಸಚಿವರು, ಶಾಸಕರಿಗೂ ಮನವಿ ಸಲ್ಲಿಸಿ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸುವುದು. ಫೆಬ್ರವರಿ 25ರಂದು ಗಂಗಯ್ಯನಪಾಳ್ಯದಿಂದ ಆರಂಭವಾಗುವ ರೈತ ಪಾದಯಾತ್ರೆ ಯಶಸ್ವಿಗೊಳಿಸಲು ತೀರ್ಮಾನಿಸಲಾಯಿತು. ರಾಜ್ಯ ರೈತ ಸಂಘದ ರಂಗಹನುಮಯ್ಯ, ಎಐಕೆಎಸ್‌ನ ಗಿರೀಶ್‌, ಸಿಐಟಿಯುನ ಎನ್‌.ಕೆ.ಸುಬ್ರಹ್ಮಣ್ಯ ಮೊದಲಾದವರು ಪ್ರತಿಕ್ರಿಯಿಸಿದರು.

ಎಐಟಿಯುಸಿ ಗಿರೀಶ್‌, ಪ್ರಾಂತ ರೈತ ಸಂಘದ ದೊಡ್ಡನಂಜಯ್ಯ, ಬಗರ್‌ಹುಕುಂ ಸಾಗವಳಿದಾರರ ಹೋರಾಟ ಸಮಿತಿಯ ನರಸಿಂಹಮೂರ್ತಿ, ರಾಚಪ್ಪ, ಆರ್‌.ಎಸ್‌.ಚನ್ನಬಸವಣ್ಣ, ಕರಿಬಸವಯ್ಯ, ಸಿದ್ದನಂಜಯ್ಯ, ಲೋಕೇಶ್‌, ಪ್ರಾಂತ ರೈತ ಸಂಘದ ಸಂಚಾಲಕ ಸಿ.ಅಜ್ಜಪ್ಪ, ಸಹ ಸಂಚಾಲಕ ಬಿ.ಉಮೇಶ್‌ ಇದ್ದರು.

ಬಗರ್‌ಹುಕುಂ ಸಾಗುವಳಿ ಸಮಸ್ಯೆ ದೀರ್ಘ‌ವಾಗಿ ಬೆಳೆದು ಬಂದಿದೆ. ಸಮಸ್ಯೆ ಪೂರ್ಣ ಪರಿಹಾರಕ್ಕೆ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಇದೆ. ಇಂತಹ ಸಮಸ್ಯೆ ಪರಿಹಾರ ಸರ್ಕಾರದ ಕೈಯಲ್ಲಿದೆ. ಇಂತಹ ಸರ್ಕಾರ ರಚಿಸುವ ಶಾಸಕರ ಆಯ್ಕೆ ಮಾಡುವ ಹಕ್ಕು ಮತ್ತು ಶಕ್ತಿ ರೈತರಲ್ಲಿದೆ.
-ಕೆ.ದೊರೈರಾಜ್‌, ಪ್ರಗತಿಪರ ಚಿಂತಕ

ವಿಶಾಲ ತಳಹದಿಯ ಪಕ್ಷಾತೀತ ಹೋರಾಟ ರಾಜ್ಯಮಟ್ಟದಲ್ಲಿ ನಡೆಯಬೇಕು. ಫೆ.25ರಂದು ಗುಬ್ಬಿ ತಾಲೂಕು ಚೇಳೂರಿನ ಗಂಗಯ್ಯನಪಾಳ್ಯದಿಂದ ಹೊರಡುವ ರೈತ ಪಾದಯಾತ್ರೆ ಯಶಸ್ವಿಗೊಳಿಸಲು ಮುಂದಾಗಬೇಕು.
-ಸಿ.ಯತಿರಾಜು, ಪರಿಸರ ಹೋರಾಟಗಾರ

Advertisement

Udayavani is now on Telegram. Click here to join our channel and stay updated with the latest news.

Next