Advertisement

ಅನುಭಾವದ ಸಾಹಿತ್ಯಕ್ಕೆ ಮನ್ನಣೆ: ಮಾತೋಶ್ರೀ

12:52 PM Oct 23, 2021 | Team Udayavani |

ಕಲಬುರಗಿ: ಲೇಖಕರ ಅನುಭಾವದಿಂದ ಹೊರ ಬರುವ ಸಾಹಿತ್ಯ ಹೆಚ್ಚು ಮೆಚ್ಚುಗೆ ಪಡೆಯಲು ಸಾಧ್ಯವಾಗುತ್ತದೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಸ್ಥೆ ಚೇರ್‌ಪರ್ಸನ್‌, ಮಾತೋಶ್ರೀ ಡಾ| ದಾಕ್ಷಾಯಿಣಿ ಎಸ್‌. ಅಪ್ಪ ಹೇಳಿದರು.

Advertisement

ನಗರದ ಕನ್ನಡ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಲೇಖಕಿ ಶಕುಂತಲಾ ಪಾಟೀಲ ಜಾವಳಿ ರಚಿಸಿದ “ಬೆಳಕು ಮೂಡಿದಾಗ’ ಕವನ ಸಂಕಲನ ಹಾಗೂ “ಆಧುನಿಕ ವಚನಗಳು’ ಕೃತಿಗಳ ಲೋಕಾರ್ಪಣೆ ಸಮಾರಂಭದ ನೇತೃತ್ವ ವಹಿಸಿ ಅವರು ಮಾತನಾಡಿದರು.

ಮನುಷ್ಯನ ಜೀವನದಲ್ಲಿ ಬದಲಾವಣೆ ಮುಖ್ಯ. ಇಂತಹ ಬದಲಾವಣೆ ಲೇಖಕಿ ಶಕುಂತಲಾ ಪಾಟೀಲ ಅವರಲ್ಲಿ ಕಾಣಬಹುದು. ತಮ್ಮ ಇಳಿ ವಯಸ್ಸಿನಲ್ಲೂ ಸಾಹಿತ್ಯ ಬರವಣಿಗೆಯಲ್ಲಿ ತೊಡಗಿದ್ದಾರೆ. ಏಕಕಾಲಕ್ಕೆ ಎರಡು ಪುಸ್ತಕಗಳ ಬಿಡುಗಡೆ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಪದವಿಗಳಿಗಿಂತ ಅನುಭಾವ ದೊಡ್ಡದು. ಇಂತಹ ಅನುಭಾವಗಳಿಂದ ಹೊಸೆದು ಬರೆದಾಗ ಸಾಹಿತ್ಯ ಕೃತಿಗಳಿಗೆ ಜನ ಮನ್ನಣೆ ಸಿಗುತ್ತದೆ. ಈ ದಿಸೆಯಲ್ಲಿ ಶಕುಂತಲಾ ಸಾಗಿದ್ದು, ಸಾಂಸಾರಿಕ ಒತ್ತಡಗಳನ್ನು ದಾಟಿ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಇವರು ಮಾದರಿಯಾಗಿದ್ದಾರೆ ಎಂದು ಹೇಳಿದರು.

“ಬೆಳಕು ಮೂಡಿದಾಗ’ ಕವನ ಸಂಕಲನ ಪರಿಚಯಿಸಿದ ಗೋದುತಾಯಿ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ನೀಲಾಂಬಿಕಾ ಪೊಲೀಸ್‌ ಪಾಟೀಲ, ಕವಯತ್ರಿ ತಾವು ಕಂಡ ಹಾಗೂ ಅನುಕರಿಸಿದ ಅನುಭವಗಳಿಗೆ ಅಕ್ಷರ ರೂಪ ನೀಡಿದ್ದಾರೆ. ಒಬ್ಬ ಗೃಹಿಣಿ ಮತ್ತು ಕವಯತ್ರಿಯೂ ಆಗಿ ಯಶಸ್ವಿಯಾಗುವುದಕ್ಕೆ ದೊಡ್ಡ ಸ್ಥೈ ರ್ಯ ಮತ್ತು ಆರೋಗ್ಯವಂತ ಆಲೋಚನೆ ಬೇಕಾಗುತ್ತವೆ. ಗೃಹಿಣಿಯ ಅನುಭವಗಳೇ ಗಟ್ಟಿ ಸಾಹಿತ್ಯವಾಗಬಲ್ಲದು. ಮೊಬೈಲ್‌, ಧಾರಾವಾಹಿಗಳನ್ನು ಬಿಟ್ಟು ಹೊರಬಂದರೆ ಸಾಹಿತ್ಯ ಕ್ಷೇತ್ರದಲ್ಲಿ ಬೆಳೆಯಬಹುದು ಎಂದರು.

Advertisement

“ಆಧುನಿಕ ವಚನಗಳು’ ಕೃತಿ ಪರಿಚಯಿಸಿದ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು ಪ್ರಾಧ್ಯಾಪಕಿ ಮಹಾದೇವಿ ಹೆಬ್ಟಾಳ, ಸರಳವಾಗಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ವಚನಗಳನ್ನು ಶಕುಂತಲಾ ಪಾಟೀಲ ಕಟ್ಟಿಕೊಟ್ಟಿದ್ದಾರೆ. “ಕಣ್ಣು ಚೆನ್ನಾಗಿದ್ದರೆ ನೀವು ಜಗತ್ತನ್ನು ನೋಡಬಹುದು, ನಾಲಿಗೆ ಚೆನ್ನಾಗಿದ್ದರೆ ಜಗತ್ತು ನಿಮ್ಮನ್ನು ನೋಡುತ್ತದೆ’ ಎನ್ನುವ ವಚನ ಸಾಹಿತ್ಯ ಸತ್ವದ ಪ್ರತೀಕವಾಗಿದೆ. ಅವರ ಜೀವನಾನುಭವ ಪ್ರತಿ ವಚನದಲ್ಲೂ ಪ್ರತಿಬಿಂಬಿಸಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಹಾರಕೂಡ ಸಂಸ್ಥಾನ ಹಿರೇಮಠದ ಡಾ| ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಹಿರಿಯ ಸಾಹಿತಿ ಸ್ವಾಮಿರಾವ್‌ ಕುಲಕರ್ಣಿ, ಶರಣಬಸಪ್ಪ ಪಾಟೀಲ ಜಾವಳಿ, ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ, ಡಾ| ರಾಜೇಶ್ವರಿ ಚಂದಾ, ಛಾಯಾ ಭರತನೂರ, ಕೆ.ಗಿರಿಮಲ್ಲ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next