ಫ್ರೆಡರಿಕ್ ಮೆಷಿಲೆಮ್ ಮೀಯರ್ ವೀಸನ್‌ಫ್ರಾಂಡ್. ಹಾಗೆ ಹೇಳಿದರೆ ಈತ ಯಾರೆಂದು ಯಾರಿಗೂ ತಿಳಿಯಲಿಕ್ಕಿಲ್ಲ. ಆತ ಪಾಲ್ ಮುನಿ ಎಂಬ ಹೆಸರಿಂದಲೇ ಪ್ರಸಿದ್ಧ. 20ನೆಯ ಶತಮಾನದ ಮೊದಲ ಮೂರ್ನಾಲ್ಕು ದಶಕಗಳಲ್ಲಿ ಪ್ರವರ್ಧಮಾನಕ್ಕೆ ಬಂದ ನಟ. ಮೂಲತಃ ಹಂಗೆರಿಯವನು.
ಭವ್ಯ ಕನಸುಗಳ ಮೂಟೆ ಹೊತ್ತು ಅಮೆರಿಕೆಯ ನೆಲಕ್ಕೆ ಬಂದಿಳಿದ ಸಾವಿರಾರು ವಲಸಿಗರಲ್ಲಿ ಆತನೂ ಒಬ್ಬ. ನಟನೆಯೆಂಬುದು ಮುನಿಗೆ ರಕ್ತಗತ. ಯಾವುದೇ ಭಾವವನ್ನು ತಟ್ಟನೆ ಪ್ರಕಟಿಸ ಬೇಕೆಂದರೆ ತಾನು ನಿಂತಲ್ಲೇ, ಉಟ್ಟಬಟ್ಟೆಯಲ್ಲೇ ಅಭಿನಯಿಸಿ ಎದುರಿದ್ದವರಲ್ಲಿ ಸೈ ಎನ್ನಿಸಿಕೊಳ್ಳುತ್ತಿದ್ದ ಅದ್ಭುತ ಪ್ರತಿಭೆ ಪಾಲ್‌ನದು. ನಾಟಕಗಳಲ್ಲಿ ನಟಿಸುವ ಮೂಲಕ ವೃತ್ತಿ ಪ್ರಾರಂಭಿಸಿ, ಅಲ್ಲಿ ಅಪಾರ ಯಶಸ್ಸು ಗಳಿಸಿ, ನಂತರ ಸಿನೆಮಾಗಳಲ್ಲಿ ನಟಿಸಿ, ಅಲ್ಲೂ ದೊಡ್ಡ ಯಶಸ್ಸು ಕಂಡು, ಐದು ಬಾರಿ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡು, ಅವುಗಳಲ್ಲೊಮ್ಮೆ ಅತ್ಯುತ್ತಮ ನಟನೆಂದು ಪ್ರಶಸ್ತಿ ಗೆದ್ದವನಾತ.ಪಾಲ್‌ನ ನಟನಾ ಕೌಶಲದ ಬಗ್ಗೆ ಇರುವ ಕಥೆಯಿದು.
ತನ್ನ ವೃತ್ತಿಜೀವನದ ಪ್ರಾರಂಭದಲ್ಲಿ ಅವನು ಯಹೂದಿ ನಾಟಕ ಕಂಪನಿಯಲ್ಲಿ ನಟನಾಗಿ ಕೆಲಸ ಮಾಡುತ್ತಿದ್ದ. ಅವರಾಡಿಸುತ್ತಿದ್ದ ನಾಟಕವೊಂದರಲ್ಲಿ ಅವನಿಗೆ ಗಣಿಕಾರ್ಮಿಕನ ಪಾತ್ರ. ಆ ಗಣಿ ಕಾರ್ಮಿಕ ತನ್ನ ಓರಗೆಯವರೆಲ್ಲರ ಪರವಾಗಿ ಗಣಿ ಮಾಲೀಕನ ಬಳಿ ಬಂದು ಸಂಬಳ ಹೆಚ್ಚಿಸಿ ಎಂದು ಕೇಳುವ ದೃಶ್ಯವೊಂದು ನಾಟಕದಲ್ಲಿತ್ತು. ಹಾಗೆ ಆತ ಮಾಲೀಕನಲ್ಲಿ ಕೇಳುವ ಎರಡು ಸಂದರ್ಭಗಳು ನಾಟಕದಲ್ಲಿದ್ದವು. ಒಮ್ಮೆ ಎರಡನೇ ಅಂಕದಲ್ಲಿ; ಇನ್ನೊಮ್ಮೆ ಮೂರನೇ ಅಂಕದ ಕೊನೆಯಲ್ಲಿ. ಎರಡನೇ ಅಂಕದಲ್ಲಿ ಗಣಿ ಮಾಲೀಕ, ಆ ಕಾರ್ಮಿಕನನ್ನು ಬಯ್ದು ಹೊಡೆದು ಓಡಿಸುತ್ತಾನೆ. ಮೂರನೇ ಅಂಕದಲ್ಲಿ,ವೇತನ ಹೆಚ್ಚಿಸಲು ಒಪ್ಪುತ್ತಾನೆ. ಅದೊಂದು ದಿನ ಪಾಲ್ ಮನೆಮಂದಿಯೆಲ್ಲ ನಾಟಕ ನೋಡಲು ಸಭಾಗೃಹಕ್ಕೆ ಬಂದಿದ್ದರು. ಪಾಲ್ ಪ್ರತಿ ಪ್ರದರ್ಶನದಲ್ಲೂ ಅತ್ಯದ್ಭುತವಾಗಿ ನಟಿಸುತ್ತಿದ್ದರೂ ಈ ಸಲ ಮಾತ್ರ ತನ್ನ ಸರ್ವಶಕ್ತಿಯನ್ನೂ ಬಸಿದು ಅಭಿನಯಿಸಿದ. ಗಣಿ ಕಾರ್ಮಿಕರ ಕಷ್ಟಪರಂಪರೆಯನ್ನು ಅವನು ಅದೆಷ್ಟು ಆವೇಶಪೂರ್ಣವಾಗಿ ಭಾವನಾತ್ಮಕವಾಗಿ ಹೇಳಿದನೆಂದರೆ ಗಣಿಮಾಲೀಕನ ಪಾತ್ರದಲ್ಲಿದ್ದ ವ್ಯಕ್ತಿ ತನ್ನನ್ನೇ ಮರೆತು ಕಣ್ಣೀರು ಹಾಕಿ ನಿನಗೆ ಈಗಿಂದೀಗ ಸಂಬಳ ಹೆಚ್ಚಿಸಿದ್ದೇನೆ, ತಗೋ! ಎಂದೇಬಿಟ್ಟ! ಆಗಿನ್ನೂ ಎರಡನೇ ಅಂಕ ನಡೆಯುತ್ತಿತ್ತಷ್ಟೇ!
ಕಾರ್ಮಿಕನನ್ನು ಬಯ್ದು ಹೊಡೆದು ಓಡಿಸಬೇಕಿದ್ದವನು ಹೀಗೆ ಕಣ್ಣೀರಾಗಿ ಕೂತುಬಿಟ್ಟದ್ದನ್ನು ನೋಡಿ ಕೂಡಕೂಡಲೇ ಪರದೆ ಎಳೆಯಬೇಕಾಯಿತು!ನಾಟಕ ಕಂಪೆನಿಯ ಮುಖ್ಯಸ್ಥ ಸಭಾಸದರ ಎದುರು ಬಂದು, ಗಣಿ ಮಾಲೀಕ ಈಗ ಮತ್ತೆ ಮನಸ್ಸು ಬದಲಾಯಿಸಿದ್ದಾನೆ. ಮೂರನೇ ಅಂಕದ ನಂತರವೇ ಅವನು ವೇತನ ಹೆಚ್ಚುಮಾಡಲು ಒಪ್ಪಿಕೊಳ್ಳಲಿದ್ದಾನೆ ಎಂದು ವಿವರಣೆ ಕೊಡಬೇಕಾಯಿತು!
– ರೋಹಿತ್ ಚಕ್ರತೀರ್ಥ