ಬೀದರ: ಮನೆಯಲ್ಲಿ ಹೊದ್ದು ಮಲಗಿದ ಬಡತನ. ಲಾರಿ ಚಾಲನೆಯಿಂದ ಕುಟುಂಬಕ್ಕೆ ಆಧಾರವಾಗಿದ್ದ ತಂದೆಯೂ ಪಾರ್ಶ್ವವಾಯು ಪೀಡಿತ. ಕಡು ಬಡತನವನ್ನೇ ಮೆಟ್ಟಿ ನಿಂತು ದ್ವಿತೀಯ ಪಿಯುಸಿಯಲ್ಲಿ ಸಾಧನೆ ಮಾಡಿದ್ದ ವಿದ್ಯಾರ್ಥಿ ಈಗ ಕೆ-ಸಿಇಟಿಯಲ್ಲಿ ರಾಜ್ಯಕ್ಕೆ ರ್‍ಯಾಂಕ್ ಪಡೆಯುವ ಮೂಲಕ ಅಮೋಘ ಸಾಧನೆ ಮಾಡಿದ್ದಾನೆ.
ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣದ ಅರ್ಬಾಜ್ ಅಹಮ್ಮದ್ ಸಲಿಮುದ್ದೀನ್ ಪಶು ವೈದ್ಯಕೀಯ ವಿಭಾಗ 6, ಬಿ ಫಾರ್ಮಾ- ಡಿ ಫಾರ್ಮಾ ವಿಭಾಗ 9ನೇ ರ್‍ಯಾಂಕ್ ಗಳಿಸಿದ್ದರೆ ಬಿಎಸ್‌ಸಿ (ಕೃಷಿ) ವಿಭಾಗದಲ್ಲಿ ರಾಜ್ಯಕ್ಕೆ 53ನೇ ರ್‍ಯಾಂಕ್ ಪಡೆದು ಗಮನ ಸೆಳೆದಿದ್ದಾನೆ. ಶಾಹೀನ್ ಕಾಲೇಜು ವಿದ್ಯಾರ್ಥಿಯಾಗಿರುವ ಅರ್ಬಾಜ್ ಸರ್ಕಾರದ ಶಿಷ್ಯ ವೇತನ, ಶಾಹೀನ್ ಸಂಸ್ಥೆಯ ಸಹಾಯದಿಂದಲೇ ಶೈಕ್ಷಣಿಕ ಸಾಧನೆಯಲ್ಲಿ ತನ್ನ ಹೆಜ್ಜೆ ಗುರುತು ಮೂಡಿಸಿದ್ದಾನೆ.
ಎಸ್ಸೆಸ್ಸೆಲ್ಸಿಯಲ್ಲಿ ಶೇ. 97 ಅಂಕದೊಂದಿಗೆ ಆಗ್ರ ಶ್ರೇಣಿ ಪಡೆದಿದ್ದ ಅರ್ಬಾಜ್‌ಗೆ ಶಾಹೀನ್ ಸಂಸ್ಥೆ ಪಿಯುಸಿಗೆ ಉಚಿತ ಶಿಕ್ಷಣ ನೀಡಿದೆ. ಅದರ ಸದ್ಬಳಕೆ ಮಾಡಿಕೊಂಡ ವಿದ್ಯಾರ್ಥಿ ದ್ವಿತೀಯ ಪಿಯುಸಿಯಲ್ಲಿ ಶೇ. 95.5ರಷ್ಟು ಒಟ್ಟಾರೆ ಅಂಕ ಪಡೆದಿದ್ದ. ಈಗ ಸಿಇಟಿಯಲ್ಲಿ 173 ಅಂಕ (ಭೌತಶಾಸ್ತ್ರ 55, ರಸಾಯನಶಾಸ್ತ್ರ 58 ಮತ್ತು ಜೀವಶಾಸ್ತ್ರ 60) ಗಳಿಸಿದ್ದಾನೆ. ಇಂಜಿನಿಯರಿಂಗ್ ನಲ್ಲಿ 467ನೇ ರ್‍ಯಾಂಕ್ ಬಂದಿದೆ.
ಸದ್ಯ ನೀಟ್ ಪರೀಕ್ಷೆಯ ತಯ್ನಾರಿಯಲ್ಲಿರುವ ಅರ್ಬಾಜ್ ವೈದ್ಯಕೀಯ ವಿಭಾಗದಲ್ಲಿ ಉತ್ತಮ ರ್‍ಯಾಂಕ್ ಪಡೆದು, ಮುಂದೆ ವೈದ್ಯನಾಗಿ ಸೇವೆ ಸಲ್ಲಿಸುವ ಆಶಯ ಹೊಂದಿದ್ದಾನೆ. ಲಾರಿ ಚಾಲಕರಾಗಿದ್ದ ತಂದೆ ಸಲಿಮುದ್ದೀನ್ ಅಲ್ಪ ಆದಾಯದಲ್ಲೇ ಮಕ್ಕಳಿಗೆ ಉನ್ನತ ಶಿಕ್ಷಣ ಕಲ್ಪಿಸಿದ್ದಾರೆ. ಆದರೆ, ಕಳೆದ ಮೂರ್‍ನಾಲ್ಕು ವರ್ಷಗಳಿಂದ ಪಾರ್ಶ್ವವಾಯು ಪೀಡಿತರಾಗಿ ಬರುವ ಆದಾಯವೇ ನಿಂತಿದೆ. ಆದರೂ, ಬಡತನದ ಮಧ್ಯೆಯೂ ಸ್ಕಾಲರ್ ಶಿಪ್‌ನ ಸಹಾಯದಿಂದಲೇ ಮೊದಲ ಮಗ ಎಂ.ಟೆಕ್, 2ನೇ ಮಗ ಎಂಬಿಬಿಎಸ್ ಓದುತ್ತಿದ್ದರೇ ಇನ್ನೊಬ್ಬ ಬಿಡಿಎಸ್ ಶಿಕ್ಷಣ ಪಡೆಯುತ್ತಿದ್ದಾರೆ. ಕೊನೆಯ ಪುತ್ರ ಅರ್ಬಾಜ್ ಸಹ ತನ್ನ ಇತರ ಸಹೋದರರಂತೆ ಕಠಿಣ ಪರಿಶ್ರಮ, ಶ್ರದ್ಧೆಯಿಂದ ಈ ಸಾಧನೆ ಮಾಡಿದ್ದಾರೆ.
ಮನೆ ಆರ್ಥಿಕ ಸಂಕಷ್ಟ ಹಿನ್ನಲೆ ಶಿಷ್ಯ ವೇತನದ ಸಹಾಯದಿಂದಲೇ ಶಿಕ್ಷಣ ಪೂರೈಸುತ್ತಿದ್ದೇನೆ. ಶಾಹೀನ್ ಸಂಸ್ಥೆ ನನಗೆ ಪಿಯುಸಿ ಶಿಕ್ಷಣ ಕಲ್ಪಿಸಿಕೊಟ್ಟಿತ್ತು. ಥಿಯರಿ ಜತೆಗೆ ಸಾಮಾನ್ಯ ಪರೀಕ್ಷೆಗೂ ತಯಾರಿ ನಡೆಸಿದ್ದೆ. ಕಾಲೇಜಿನ ಗುಣಾತ್ಮಕ ಶಿಕ್ಷಣ, ಕಠಿಣ ಪರಿಶ್ರಮದಿಂದ ಕೆ-ಸಿಇಟಿಯಲ್ಲಿ ಉತ್ತಮ ರ್‍ಯಾಂಕ್ ಗಳಿಸಿದ್ದು, ನೀಟ್ ಪರೀಕ್ಷೆ ಎದುರು ನೋಡುತ್ತಿದ್ದೇನೆ. ವೈದ್ಯ ಶಿಕ್ಷಣ ಪಡೆದು ರೋಗಿಗಳ ಸೇವೆ ಮಾಡಬೇಕೆಂಬ ಆಶಯ ಹೊಂದಿದ್ದೇನೆ. –
ಅರ್ಬಾಜ್ ಅಹ್ಮದ್ ಸಲಿಮುದ್ದೀನ್, ಸಿಇಟಿ ರ್‍ಯಾಂಕ್ ವಿದ್ಯಾರ್ಥಿ.
-ಶಶಿಕಾಂತ ಬಂಬುಳಗೆ