ಕೋಲ್ಕತಾ: ಕಾಮನ್ವೆಲ್ತ್ ಗೇಮ್ಸ್‌ನ 73 ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಪಶ್ಚಿಮ ಬಂಗಾಲದ ಅಚಿಂತ ಶಿಯುಲಿ ಚಿನ್ನ ಗೆದ್ದು ಅದ್ಭುತ ಸಾಧನೆ ಮಾಡಿದ್ದಾರೆ. ಇವರಿಗೆ ಈಗ ಕೇವಲ 20 ವರ್ಷ. ಹೌರಾ ಜಿಲ್ಲೆಯ ದೇವಲಪುರ ಎಂಬ ಹಳ್ಳಿಯವರು. ಇಂತಹ ಸಂಭ್ರಮದ ಹೊತ್ತಿನಲ್ಲೂ ಅಚಿಂತ ಕುಟುಂಬದಲ್ಲಿ ಬೇಸರದ ವಾತಾವರಣವಿದೆ. ಕಾರಣವೇನು ಗೊತ್ತೇ? ಪಶ್ಚಿಮ ಬಂಗಾಲ ಸರಕಾರದ ನಿರ್ಲಕ್ಷ್ಯ!
ಅಚಿಂತ ಚಿನ್ನ ಗೆದ್ದ ಅನಂತರ ಪ್ರತಿಕ್ರಿಯಿಸಿರುವ ಸಹೋದರ ಆಲೋಕ್, “ಇಂತಹ ಪುಟ್ಟ ಹಳ್ಳಿಯೊಂದರ ಹುಡುಗ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ ಎನ್ನುವುದೇ ಪಶ್ಚಿಮ ಬಂಗಾಲ ಸರಕಾರಕ್ಕೆ ಗೊತ್ತಿಲ್ಲ. ರಾಜ್ಯದ ಕ್ರೀಡಾ ಸಚಿವರಿಗೂ ಈ ವಿಷಯ ಗೊತ್ತಿದ್ದಂತಿಲ್ಲ. ನಮಗೆ ತುರ್ತಾಗಿ ನೆರವು ಬೇಕಾಗಿದೆ. ಸರಕಾರ ಎಷ್ಟು ಆರ್ಥಿಕ ನೆರವು ನೀಡುತ್ತದೆ ಎಂಬುದನ್ನು ನೋಡೋಣ’ ಎಂದಿದ್ದಾರೆ.
ಬೇರೆ ರಾಜ್ಯಕ್ಕೆ ವಲಸೆ:
ಈ ನಿರ್ಲಕ್ಷ್ಯದ ಬಗ್ಗೆ 2020ರಲ್ಲೇ “ಟೆಲಿಗ್ರಾಫ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಸ್ವತಃ ಅಚಿಂತ ಬೇಸರ ವ್ಯಕ್ತಪಡಿಸಿದ್ದರು. “ಬೇರೆ ರಾಜ್ಯಗಳಲ್ಲಿ ವೇಟ್‌ಲಿಫ್ಟರ್‌ಗಳಿಗೆ ಆಯಾ ರಾಜ್ಯ ಸರಕಾರಗಳು ಬೆಂಬಲ ನೀಡುತ್ತವೆ. ನಮ್ಮ ರಾಜ್ಯದಲ್ಲಿ ಆ ಪರಿಸ್ಥಿತಿಯಿಲ್ಲ. ಹೀಗೆಯೇ ಆದರೆ ನಾನು ಬೇರೆ ರಾಜ್ಯಗಳಿಗೆ ವಲಸೆ ಹೋಗಬೇಕಾಗುತ್ತದೆ. ಹರ್ಯಾಣ, ಅರುಣಾಚಲಪ್ರದೇಶ, ಮಣಿಪುರಗಳ ಪೈಕಿ ಒಂದನ್ನು ಆಯ್ಕೆ ಮಾಡುವ ಬಗ್ಗೆ ಯೋಚಿಸುತ್ತಿದ್ದೇನೆ’ ಎಂದಿದ್ದರು. ಆದರೆ ಅವರು ಇಲ್ಲಿಯ ತನಕ ಈ ಕೆಲಸ ಮಾಡಿಲ್ಲ.
ಅಚಿಂತ ಶಿಯುಲಿ ಮತ್ತವರ ಕುಟುಂಬ ಬಹಿರಂಗವಾಗಿ ಬೇಸರ ವ್ಯಕ್ತಪಡಿಸಿದ್ದರೂ ಸರಕಾರ ಇದುವರೆಗೆ ಆರ್ಥಿಕ ನೆರವನ್ನು ಘೋಷಿಸಿಲ್ಲ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟರ್ ಮೂಲಕ ಶುಭಾಶಯ ಕೋರಿ ಸುಮ್ಮನಾಗಿದ್ದಾರೆ. ಅಲ್ಲಿನ ಕ್ರೀಡಾ ಸಚಿವ ಮನೋಜ್ ತಿವಾರಿ ಒಬ್ಬ ಕ್ರಿಕೆಟಿಗನಾಗಿದ್ದರೂ ಈವರೆಗೆ ವಿಶೇಷ ಘೋಷಣೆಗಳೇನೂ ಆಗದಿರುವುದೊಂದು ಅಚ್ಚರಿ.