Advertisement

Desi Swara: ಶುದ್ಧಿಯನ್ನು ಸಾಧಿಸುವುದು ಅಸಾಧ್ಯವಲ್ಲ ಆದರೆ…

03:32 PM Oct 07, 2023 | Team Udayavani |

ಮೊದಲಿಗೆ ಈ ಪಂಚಶುದ್ಧಿಗಳು ಯಾವುವು ಎಂದು ನೋಡೋಣ. ಕೆಲವೊಂದು ವಿಚಾರಗಳ ಪ್ರಕಾರ ಪಂಚಶುದ್ಧಿಗಳು ಎಂದರೆ ಮನಃಶುದ್ಧಿ, ಕರ್ಮಶುದ್ಧಿ, ಭಾಂಡಶುದ್ಧಿ, ದೇಹಶುದ್ಧಿ, ವಾಕ್ಸುದ್ಧಿ. ಮತ್ತೂ ಕೆಲವು ವಿಚಾರಗಳ ಪ್ರಕಾರ ಸತ್ಯ ಶುದ್ಧಿ, ಜ್ಞಾನ ಶುದ್ಧಿ, ತಪೋ ಶುದ್ಧಿ, ಸರ್ವಭೂತ ದಯಾ ಶುದ್ಧಿ ಮತ್ತು ಜಲ ಶುದ್ಧಿ. ಇವುಗಳಲ್ಲಿ ಯಾವುದು ಸರಿ? ಯಾವುದು ತಪ್ಪು? ಎಂಬುದು ವಿಚಾರವಲ್ಲ ಬದಲಿಗೆ ಯಾವ ಸಂದರ್ಭದಲ್ಲಿ ಯಾವುದು ಸಲ್ಲುತ್ತದೆ ಎಂಬುದೇ ಅರಿಯಬೇಕಾದ ವಿಚಾರ.

Advertisement

ಶುದ್ಧಿ ಎಂದರೆ ಶುಚಿತ್ವ ಕಾಪಾಡಿಕೊಳ್ಳುವುದು ಎಂದರ್ಥ. ದಿನನಿತ್ಯದ ವ್ಯವಹಾರದಲ್ಲಿ ನಾವು ನಾನಾ ರೀತಿಯಲ್ಲಿ ಅಶುಚಿಯಾಗುತ್ತೇವೆ. ಕೆಲವೊಮ್ಮೆ ದಿನದಾರಂಭದಲ್ಲಿ ಶುಚಿಯಾಗಬೇಕು, ಕೆಲವೊಮ್ಮೆ ದಿನದಾಂತ್ಯದಲ್ಲಿ ಶುಚಿಯಾಗಬೇಕು. ಹಲವೊಮ್ಮೆ ದಿನದಲ್ಲಿನ ಹಲವು ಸಂದರ್ಭಗಳಲ್ಲಿ ಶುಚಿಯಾಗಬೇಕು. ಮುಖ್ಯವಾಗಿ ಶುಚಿತ್ವ ಎಂಬುದು ಪ್ರತೀ ಕ್ಷಣದ ಮಂತ್ರವೂ ಆಗಬೇಕು.

ದಿನದಲ್ಲಿನ ಎಲ್ಲ ಕೆಲಸದಲ್ಲೂ ಶ್ರದ್ಧೆಯಿರಬೇಕು ಎಂಬುದು ಸತ್ಯ ಆದರೆ ಆ ಶ್ರದ್ಧೆಯು ಶುದ್ಧ ಮನದಿಂದ ಬಂದಿರಬೇಕು. ದಿನದ ಪ್ರತೀ ಕ್ಷಣವೂ ಒಂದಲ್ಲ ಒಂದು ಕಡೆ ಉತ್ತಮ ಕೆಲಸಗಳು ನಡೆಯುತ್ತಲೇ ಇರುತ್ತದೆ ಆದರೆ ಬಹುತೇಕ ಸ್ಥಳಗಳಲ್ಲಿ ನಡೆಯುತ್ತಿರುವುದೇ ದುರುದ್ದೇಶಭರಿತ ಕೆಲಸಗಳು. ಮನಸ್ಸನ್ನು ಶುದ್ಧವಾಗಿರಿಸಿಕೊಳ್ಳುವುದು ಮೊದಲ ಶುದ್ಧಿ. ಈ ಹಾದಿಯಲ್ಲಿ ಹೂವಿನರಾಶಿ ಖಂಡಿತ ಇರುವುದಿಲ್ಲ. ಈ ಹಾದಿ ಬಲು ದುಸ್ತರ.

ಹಾಗಾಗಿಯೇ ಮಂದಿ ಸುಲಭವಾದ ವಾಮಮಾರ್ಗ ಹಿಡಿಯೋದು. ಮನಸ್ಸು ಶುದ್ಧವಾಗಿದ್ದರೆ ಮಾಡುವ ಕೆಲಸಗಳೂ ಶುದ್ಧವೇ. ಮನಸ್ಸಿನಲ್ಲಿ ಕ್ರೋಧ, ಮತ್ಸರಗಳೇ ತುಂಬಿದ್ದರೆ ಮಾಡುವ ಕೆಲಸಗಳೂ ಕೇಡು ತುಂಬಿದ್ದೇ ಆಗಿರುತ್ತದೆ. ಇದರಲ್ಲೇನು ವಿಶೇಷ ಎಂದರೆ ಅರ್ಥೈಸಿಕೊಳ್ಳುವ ಬಗೆ. ಒಬ್ಬನ ಮನಸ್ಸು ಪರಿಶುದ್ಧ ಎಂದುಕೊಂಡರೂ ಅವನು ಮಾಡುವ ಕೆಲಸ ಕೊಳಚೆ ನಿರ್ಮೂಲನೆ ಎಂದುಕೊಳ್ಳಿ. ಇದು ಕರ್ಮಶುದ್ಧಿಯೋ? ಅಲ್ಲವೋ? ಮಾಡುವ ಕರ್ಮವು ಶುದ್ಧವಾಗಿರಬೇಕು ಎಂಬುದು ಎಷ್ಟು ಸತ್ಯವೋ ಅಷ್ಟೇ ಸತ್ಯ ಶುದ್ಧ ಮಾಡುವ ಕರ್ಮಗಳೂ ಕರ್ಮಶುದ್ಧಿ ಎಂಬುದು.

ಭಾಂಡಶುದ್ದಿ ಎಂಬುದು ಆಹಾರ ಪದ್ಧತಿಗೆ ಸಲ್ಲುವಂತಾ ಶುದ್ಧತೆ. ಮಾಡುವ ಅಡುಗೆಯು ದೈವಸಮಾನ. ಅದನ್ನು ತಯಾರಿಸುವ ಭಾಂಡ ಅಥವಾ ಪಾತ್ರೆಯನ್ನು ಶುದ್ಧವಾಗಿರಿಸಿಕೊಳ್ಳಬೇಕು. ಪಾತ್ರೆಯು ಹೊರಗಿನಿಂದ ಲಕಲಕ ಎಂದು ಹೊಳೆಯಬೇಕಿದೆಯೋ ಇಲ್ಲವೋ ಆದರೆ ಆ ಪಾತ್ರೆಯ ಒಳಭಾಗವಂತೂ ಶುದ್ಧವಾಗಿರಲೇಬೇಕು. ಕನಕದಾಸರ ಮಾತಿನಂತೆ ಈ ಭಾಂಡವು ಮಾನವ ದೇಹವೂ ಆಗಿರಬಹುದು. ಹೊರಮೈ ಶುದ್ಧವಾಗಿರದಿದ್ದರೂ, ಒಳಮೈ ಶುದ್ಧವಾಗಿರಬೇಕು. ಬಹಿರಂಗವೂ ಮುಖ್ಯ ಆದರೆ ಅಂತರಂಗಕ್ಕಿಂತಾ ಮುಖ್ಯವಲ್ಲ.

Advertisement

ಈ ಮಾತುಗಳು ಮುಂದಿನ ವಿಷಯ ಎಂದರೆ “ದೇಹಶುದ್ದಿ’ಯ ಬಗ್ಗೆ ಹೇಳಲು ಪೀಠಿಕೆಯಾಗಿದೆ. ನಿತ್ಯಕರ್ಮಗಳ ಒಂದು ಭಾಗವೇ ದೇಹಶುದ್ದಿ. ಇದನ್ನು “ಸ್ನಾನಾದಿ ನಿತ್ಯಕರ್ಮಗಳು’ ಎನ್ನುತ್ತಾರೆ. ಅಶುದ್ಧ ಬಾಹ್ಯದಿಂದ ಅಡುಗೆಯ ಕೆಲಸವಾಗಲಿ, ಪೂಜೆ ಪುನಸ್ಕಾರವಾಗಲಿ ಮಾಡಕೂಡದು ಎನ್ನಲಾಗಿದೆ. ಅಶುದ್ಧಿ ಎಂಬುದು ರೋಗರುಜಿನಗಳ ಮೂಲ. ನಮಗೆ ಕಾಯಿಲೆ ಬೇಡ ಎಂದರೆ ಅದನ್ನು ಮತ್ತೂಬ್ಬರಿಗೆ ನೀಡುವುದೂ ಬೇಡ ಅಲ್ಲವೇ? ಹಾಗಾಗಿ ಶುಚಿತ್ವ ಕಾಪಾಡಿಕೊಳ್ಳುವುದು ಬಲು ಮುಖ್ಯ. ಇದನ್ನು ಶುಚಿತ್ವ ಎನ್ನಿ, ಮಡಿ ಎನ್ನಿ, ಎಂಜಲು, ಮುಸುರೆ ಎನ್ನಿ ಅಥವಾ ಬೇರಾವುದೇ ಹೆಸರಿಂದ ಕರೆದರೂ ಎಲ್ಲವೂ ಒಂದೇ “ಶುದ್ದಿ’. ಇದೆಲ್ಲದರ ಅರ್ಥವನ್ನು ಜಗತ್ತಿಗೆ ಕೊರೋನ ಎಂಬ ಸೂಕ್ಷಾಣು ಕಲಿಸಿ ಹೋಗಿದೆ.

ಕೊನೆಯದಾಗಿ ವಾಕ್‌ ಶುದ್ದಿ. ವಾಕ್‌ ಎಂದರೆ ಶಾರದೆ, ಸರಸ್ವತಿ, ಕಲೆ, ಸಂಸ್ಕೃತಿ. ಬಾಯಿಬಿಟ್ಟರೆ ಕಟು ನುಡಿಗಳೇ ಹೊರಹೊಮ್ಮಿದಲ್ಲಿ, ಕೆಟ್ಟ ನುಡಿಗಳೇ ಬಂದಲ್ಲಿ, ಕೊಳಕು ಪದಗಳನ್ನೇ ನುಡಿದರೆ ಅಂಥವರಿಂದ ಪರಿಸರವೂ ಹಾಳು. ಒಂದು ಮನೆಯಲ್ಲಿ ಇಂಥಾ ವಾತಾವರಣವಿದ್ದರೆ ಅಲ್ಲಿ ಬೆಳೆಯುವ ಮಕ್ಕಳ ಮೇಲೆ ಪರಿಣಾಮ ಖಂಡಿತ. ಇಂಥಾ ಮನೆಯವರಿಂದ ಸುತ್ತಮುತ್ತಲಿನ ಮನೆಯವರಿಗೂ ಕಿರಿಕಿರಿ ಮತ್ತು ಅಸಮಾಧಾನ. ಇಂಥವರ ಕೆಳಗೆ ಕೆಲಸ ಮಾಡುವವರು ಇದ್ದರೆ, ಅಂಥವರ ದಿನನಿತ್ಯದ ಜೀವನವೇ ಗೋಳು. ಸಜ್ಜನರ ಸಹವಾಸ ಹೆಜ್ಜೆàನು ಸವಿದಂತೆ. ದುರ್ಜನರ ಸಹವಾಸ ಹೆಜ್ಜೆàನು ಕಡಿದಂತೆ. ಸಜ್ಜನರ ಗುಣಗಳಲ್ಲಿ ಒಂದು “ಶುದ್ಧವಾದ ವಾಕ್‌’.

ಪೂಜೆಪುನಸ್ಕಾರಗಳ ವಿಷಯಕ್ಕೆ ಬಂದರೆ ಅಲ್ಲಿ ವರುಣದೇವನ ಆರಾಧನೆ ಅಥವಾ ಪೂಜೆಗೆ ಮಹತ್ವವಿದೆ. ಪಂಚಶುದ್ಧಿಗಳಲ್ಲಿ ನೀರು ಎಂಬುದು ಪಂಚಮ ಶುದ್ಧಿ. ಮೊದಲ ನಾಲ್ಕು ಶುದ್ಧಿಗಳನ್ನು ಸಾಧಿಸಲಾಗದೆ ಹೋದಲ್ಲಿ ಕನಿಷ್ಠ ಪಕ್ಷ ಐದನೇಯದಾದರೂ ಪಾಲಿಸಿ. ಐದನೇಯ ಶುದ್ಧಿಯನ್ನು ತಪ್ಪಿಸದೇ ಸಾಧಿಸಲು ಅನುವು ಮಾಡಿಕೊಟ್ಟಿರುವ ವರುಣನೇ ನಿನಗೆ ವಂದನೆಗಳು.

ಸದಾ ಸತ್ಯವನ್ನೇ ನುಡಿಯುವುದು ಸತ್ಯ ಶುದ್ಧಿ. ಇಂದಿಗೂ ಸತ್ಯ ಎಂಬುದಕ್ಕೆ ಒಂದು ಹೆಸರನ್ನು ಜೋಡಿಸಲು ಯತ್ನಿಸಿದರೆ ನಮ್ಮಲ್ಲಿ ಮೂಡುವುದೇ ಹರಿಶ್ಚಂದ್ರ. ಎರಡನೇಯ ಹೆಸರು ಯಾರದ್ದು ಎಂದರೆ ತಲೆ ಕೆರೆದುಕೊಳ್ಳುವಂತೆ ಆಗೋದು ಸಹಜ. “ಸತ್ಯಂ ವದ’ ಎಂದು ಹೇಳಿರುವುದರಲ್ಲಿ ಸತ್ಯವನ್ನೇ ಹೇಳು ಎಂಬುದಾಗಿ ಕಂಡರೂ ಇದೊಂದು ಸನ್ನಿವೇಶ ಅಷ್ಟೇ. ಮಾತು ಬಾರದ ಮೂಕರೆಲ್ಲ ಸತ್ಯವಂತರೇ? ಮೌನವ್ರತ ಮಾಡುವವರೆಲ್ಲ ಸತ್ಯವಂತರೇ? ಯೋಚಿಸಿ ಹೇಳಿ. ಬಾಸ್‌ ಫೋನ್‌ ಬಂದು “ಎಲಿÅà ಇದ್ದೀರಾ?’ ಎಂದ ಕೂಡಲೇ “ಟ್ರಾಫಿಕ್‌ನಲ್ಲಿ ಸಿಕ್ಕಿಕೊಂಡಿದ್ದೇನೆ ಸರ್‌’ ಎಂದು ಹೇಳುವುದು ಸತ್ಯ ಶುದ್ಧಿ ಅಲ್ಲ. ಸಖತ್‌ ಬ್ಯುಸಿ, ಟೈಮೇ ಇಲ್ಲ, ಸಾರಿ ಕಣೋ ಕೈಲಿ ದುಡ್ಡಿಲ್ಲ ಎಂಬುದೆಲ್ಲ ಉದಾಹರಣೆಗಳು.

ಜ್ಞಾನಶುದ್ಧಿ ಎಂದರೆ ಜ್ಞಾನದ ಬಗೆಗಿನ ಶುದ್ಧ ಮನ. ಜ್ಞಾನ ಎಂಬುದು ಸಾಗರ ಎನ್ನುತ್ತೇವೆ. ಸಾಮಾನ್ಯ ಅರಿವು ಎಂದರೆ ನಮಗಿನ್ನೆಷ್ಟು ಅರಿವಿದ್ದರೂ ಆ ಸಾಗರದ ಒಂದೆರಡು ಗುಟುಕಿನಷ್ಟು ಮಾತ್ರ ಎಂಬುದು. ಹೀಗಿದ್ದರೂ ಒಂದಷ್ಟು ಅರಿತ ಮನ ಅಥವಾ ಇತರರಿಗಿಂತ ಕೊಂಚ ಹೆಚ್ಚು ಅರಿತ ಮನಕ್ಕೆ ಮೂಡುವ ವಿಚಾರವೇ “ತನಗೆಲ್ಲಾ ಗೊತ್ತು’ ಎಂಬುದು. ಒಮ್ಮೆ ಈ ಅಹಂಕಾರ ತಗಲಿಕೊಂಡಿತು ಎಂದರೆ ಮನವು ಅಶುದ್ಧವಾಯಿತು ಎಂದೇ ಅರ್ಥ. ಜ್ಞಾನಶುದ್ಧಿ ಹೊಂದುವುದು ದುಸ್ತರ.

ತಪೋ ಶುದ್ಧಿ ಎಂದರೆ ತಪಸ್ಸಿನಿಂದ ಗಳಿಸಿದ್ದನ್ನು ಕಾಯ್ದುಕೊಳ್ಳುವ ಶುದ್ಧಿ. ಈ ಮಾತನ್ನು ಒಂದೆರಡು ಭಿನ್ನ ಕಿಟಕಿಗಳಿಂದ ನೋಡಬಹುದು. ಒಂದು ಕಾಲವಿತ್ತು ಮುನಿವರ್ಯರು, ಯೋಗಿಗಳು, ಸಿದ್ದರು ತಪಸ್ಸನ್ನು ಆಚರಿಸಿ ಸಿದ್ದಿ ಪಡೆಯುತ್ತಿದ್ದರು. ಅದನ್ನು ಲೋಕಕಲ್ಯಾಣಕ್ಕೆ ಬಳಸಿಕೊಳ್ಳುತ್ತಿದ್ದರು. ದೇವಾನುದೇವತೆಗಳೂ ತಪಸ್ಸನ್ನು ಆಚರಿಸಿದ್ದ ಕಥೆಗಳನ್ನು ಕೇಳಿದ್ದೇವೆ. ರಕ್ಕಸರೂ ತಪಸ್ಸನ್ನು ಆಚರಿಸಿದ್ದ ಕಥೆಗಳು ನಮಗೆ ಅರಿವಿದೆ. ಹೆಚ್ಚಿನ ವೇಳೆ ರಕ್ಕಸರು ಆಚರಿಸಿದ ತಪೋಬಲದಿಂದ ಲೋಕಕಂಟರಾಗಿ ಪರಿವರ್ತಿತರಾಗಿ ದುಷ್ಕೃತ್ಯಕ್ಕೆ ಬಳಸಿಕೊಂಡಿದ್ದಾ ರೆ.

ಈ ತಪೋಬಲವು ಇಂದಿನ ಕಾಲಕ್ಕೆ ಅಧಿಕಾರ ಎಂದುಕೊಳ್ಳೋಣ. ವಿದ್ಯೆಯ ಬಲದಿಂದ ಅಥವಾ ಪ್ರಭಾವೀ ವ್ಯಕ್ತಿಗಳ ಬಲದಿಂದ ಗಳಿಸಿದ ಸ್ಥಾನದಿಂದ ಗಳಿಸಿದ ಅಧಿಕಾರವು ಸ್ವಂತ ಕೆಲಸಕ್ಕೆ ಬಳಸಿಕೊಳ್ಳುವ ಪ್ರಬಲವೇ ವ್ಯರ್ಥವಾದ ತಪೋಬಲ. ಒಂದಷ್ಟು ಅಧಿಕಾರ ಕೈಗೆ ಬಂದ ಕೂಡಲೇ ಸರ್ವಾಧಿಕಾರಿ ಅಥವಾ ಸರ್ವಾಧಿಕಾರಿಣಿಯಂತಾಡುವುದೇ ಈ ತಪೋಬಲದ ಅಶುದ್ಧತೆ. ಈ ಹಂತದಲ್ಲೂ ಶುದ್ಧತೆ ಕಾಪಾಡಿಕೊಳ್ಳುವುದು ಕಷ್ಟ.

ಸರ್ವಭೂತ ದಯಾ ಶುದ್ಧಿ ಎಂಬುದು ಸರ್ವರಲ್ಲೂ ಒಂದೇ ಬಗೆಯ ಪ್ರೀತಿ, ಆದರ ತೋರುವುದು. ಇವರನ್ನು ಕಂಡರೆ ಸಹಿಸುವುದು ಮತ್ತೂಬ್ಬರನ್ನು ಕಂಡರೆ ಅಸಹನೆ ಎಂಬ ಈ ಕಾಲದಲ್ಲಿ ಸರ್ವಭೂತದಲ್ಲೂ ದಯೆ ಹೇಗೆ ಕಂಡೀತು? ದಿನನಿತ್ಯದಲ್ಲಿ ಕನ್ನಡಿಯ ಮುಂದೆ ನಿಂತಾಗ ನಮ್ಮನ್ನು ಕಂಡರೆ ನಾವೇ ಅಸಹನೆ ವ್ಯಕ್ತಪಡಿಸುವ ಸನ್ನಿವೇಶಗಳಲ್ಲಿ ಸರ್ವಭೂತ ದಯಾ ಶುದ್ಧಿ ಪಾಲಿಸುವುದಾದರೂ ಹೇಗೆ? ಇಂಥಾ ಶುದ್ಧತೆ ಕಾಪಾಡಿಕೊಳ್ಳುವುದು ಕಷ್ಟಸಾಧ್ಯ.

ಜಲಶುದ್ಧಿಯೊಂದೇ ಸಾಧಿಸಲು ಸಾಧ್ಯ ಆದರೆ ಇದಕ್ಕೂ ಪ್ರಮುಖವಾಗಿ ಜಲ ಇರಬೇಕು. ಜಲವೂ ಇದೆ ಎಂದುಕೊಂಡರೆ ಮೊದಲಿಗೆ ವರುಣನನ್ನು ಸ್ಮರಿಸಿ ಮಿಕ್ಕ ಶುದ್ಧತೆಯನ್ನು ಕಾಯ್ದುಕೊಳ್ಳಬೇಕು. ಕೊರೋನ ಸಮಯದ್ದೇ ಉದಾಹರಣೆ ನೀಡಿದರೆ ಕೈ ತೊಳೆಯಬೇಕು ಎಂಬುದು ಮಂತ್ರವೇ ಆಗಿತ್ತು. ದಿನನಿತ್ಯದಲ್ಲಿ ಸ್ನಾನಾದಿಗಳು, ಬಳಸುವ ಪಾತ್ರೆಗಳನ್ನು ತೊಳೆದು ಇಡುವುದು, ಬಟ್ಟೆಗಳನ್ನು ಒಗೆದು ಬಳಸುವುದು ಇತ್ಯಾದಿಗಳನ್ನು ಪಾಲಿಸುತ್ತ ಶುಚಿತ್ವ ಕಾಪಾಡಿಕೊಳ್ಳುವುದು ಜಲಶುದ್ಧಿ. ಮಿಕ್ಕ ನಾಲ್ಕೂ ಶುದ್ಧಿಗಳನ್ನು ಪಾಲಿಸಲು ಸಾಧ್ಯವೋ ಅಥವಾ ದುಸ್ತರವೋ ಜಲಶುದ್ಧಿಯಂತೂ ಪಾಲಿಸಬಹುದಾದುದು.ಯಾವುದೇ ಶುದ್ಧಿಯನ್ನು ಸಾಧಿಸುವುದು ಅಸಾಧ್ಯವಲ್ಲ ಆದರೆ ಕಷ್ಟಸಾಧ್ಯ. ನಿಮ್ಮ ನೆಚ್ಚಿನ ಶುದ್ಧಿ ಯಾವುದು?

*ಶ್ರೀನಾಥ ಭಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next