Advertisement

ಸಾಧನೆಯ ಹಾದಿಯಲ್ಲಿ ದಿಗ್ಗಜರ ಸಮಾಗಮ

02:44 PM Jul 08, 2018 | Team Udayavani |

ಬೆಂಗಳೂರು: ಸುದೀರ್ಘ‌ 37 ವರ್ಷ ಸರ್ಕಾರಿ ಸೇವೆ ಸಲ್ಲಿಸಿ ಮುಖ್ಯ ಕಾರ್ಯದರ್ಶಿಯಂತಹ ಉನ್ನತ ಹುದ್ದೆಯಿಂದ ನಿವೃತ್ತರಾದ ಮಹಿಳಾ ಅಧಿಕಾರಿಯ ಆಡಳಿತದ ಮೆಲುಕು, ಮೈಲುಗಲ್ಲುಗಳು ಅಕ್ಷರ ರೂಪದಲ್ಲಿ “ಸಾಧನೆಯ ಹಾದಿಯಲ್ಲಿ’ ಕೃತಿಯಾಗಿ ಮೂಡಿ ಬಂದಿದೆ.

Advertisement

ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅವರ “”ಕ್ರಾನಿಕಲ್ಸ್‌ ಆಫ್ ಆ್ಯನ್‌ ಎಸಿ ಸಾಬ್‌’ (ಸಾಧನೆಯ ಹಾದಿಯಲ್ಲಿ) ಕೃತಿಯನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಶನಿವಾರ ಬಿಡುಗಡೆಗೊಳಿಸಿ ನೌಕರಶಾಹಿಯ ಕೊಡುಗೆಯನ್ನು ಕೊಂಡಾಡಿದರೆ,  ನಿರ್ಗಮಿತ ಹಿರಿಯ ಸಹೋದ್ಯೋಗಿಯ ಚೊಚ್ಚಲ ಕೃತಿಗೆ ಹಿರಿಯ, ಕಿರಿಯ ಅಧಿಕಾರಿ ವರ್ಗ ಸಾಕ್ಷಿಯಾಯಿತು.

“ಎಸಿ ಸಾಬ್‌’ ಕೊಡುಗೆ ಸ್ಮರಿಸಿ ಬೀದರ್‌ ಬಳಗ ಭಾವುಕರಾದರು. ಇಂತದ್ದೊಂದು ಅಪೂರ್ವ ಸಂದರ್ಭವನ್ನು ಕೃತಿ ಬಿಡುಗಡೆ ಸಮಾರಂಭ ಸೃಷ್ಟಿಸಿತ್ತು. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿ, ರತ್ನಪ್ರಭಾ ಅವರನ್ನು ಸರ್ಕಾರಿ ಸೇವೆಯಲ್ಲಿ ಬಳಸಿಕೊಳ್ಳಲಾಗುವುದು ಎಂದರು. ಸರ್ಕಾರದ ಖ್ಯಾತಿ, ಅಪಖ್ಯಾತಿ ಅಧಿಕಾರಿಗಳ ಕೈಯಲ್ಲಿದೆ.

ರಾಜ್ಯ, ರಾಷ್ಟ್ರದ ಅಭಿವೃದ್ಧಿಗೆ ಅಧಿಕಾರಶಾಹಿಯ ಕೊಡುಗೆ ಅಪಾರ. ಅಂದಿನ ಕಾಲದಲ್ಲಿ ಮಹಿಳಾ ಅಧಿಕಾರಿಣಿಯೊಬ್ಬರು ಕೆಲಸ ಮಾಡುವುದು ಸುಲಭದ ಮಾತಾಗಿರಲಿಲ್ಲ. ಮಾತೃ ಹೃದಯದಿಂದ ಕಾರ್ಯ ನಿರ್ವಹಿಸಿದ ಅವರಿಗೆ ತಮ್ಮ ಕರ್ತವ್ಯ ನಿರ್ವಹಣೆ ತೃಪ್ತಿ ತಂದಿದೆ ಎಂದು ಭಾವಿಸಿದ್ದೇನೆ ಎಂದರು.

ಮಾಜಿ ಸಚಿವ ಪಿ.ಜಿ.ಆರ್‌.ಸಿಂಧ್ಯ, ಸಮ್ಮಿಶ್ರ ಸರ್ಕಾರ ನಡೆಸುವುದು ಬಹಳ ಕಷ್ಟ. ವಿರೋಧಿಗಳು ಸ್ನೇಹಿತರಾಗಿ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಅಂತಹ ಜವಾಬ್ದಾರಿಯನ್ನು ರತ್ನಪ್ರಭಾ ಅವರು ನಿರ್ವಹಿಸಿದ್ದು, ಸಮರ್ಥ ನಾಯಕರೆನಿಸಿದ್ದಾರೆ ಎಂದರು.

Advertisement

ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್‌, ರತ್ನಪ್ರಭಾ ಅವರು ಹೆಚ್ಚು ಕೃತಿಗಳನ್ನು ರಚಿಸಿದರೆ ಯುವ ಅಧಿಕಾರಿಗಳಿಗೆ ದಾರಿದೀಪವಾಗಲಿದೆ ಎಂದು ಆಶಿಸಿದರು. ರತ್ನಪ್ರಭಾ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಐಎಎಸ್‌ ಅಧಿಕಾರಿಗಳಾದ ಪಿ.ಡಿ.ಶೆಣೈ, ಎಸ್‌.ವಿ.ರಂಗನಾಥ್‌, ಸಪ್ನ ಬುಕ್‌ಹೌಸ್‌ನ ನಿತಿನ್‌ ಶಾ, ಕೃತಿಯನ್ನು ಕನ್ನಡಕ್ಕೆ ಭಾಷಾಂತರಿಸಿರುವ ಜಿ.ಎನ್‌.ರಾಜಶೇಖರ್‌ ನಾಯ್ಡು ಗುಡಿಬಂಡೆ, ನೀರಜ್‌ ಬನ್ಸಾಲ್‌, ಎ.ವಿದ್ಯಾ ಸಾಗರ್‌ ಇತರರು ಉಪಸ್ಥಿತರಿದ್ದರು.

ರತ್ನಪ್ರಭಾ ಮನದಾಳದ ಮಾತು: ಔರಾದ್‌ನಿಂದ ಬರುತ್ತಿದ್ದ ಯುವಕನೊಬ್ಬ ತಮ್ಮೂರಿಗೆ ಬಂದು ಜನರ ಸಮಸ್ಯೆ ಆಲಿಸುವಂತೆ ಒತ್ತಾಯಿಸುತ್ತಿದ್ದ. ಒಮ್ಮೆ ತೀವ್ರ ಕಿರಿಕಿರಿ ಎನಿಸಿ ಅವನನ್ನು ಹೊರಕ್ಕೆ ಕಳುಹಿಸುವಂತೆ ಸಹಾಯಕರಿಗೆ ಸೂಚಿಸಿದೆ. ನನ್ನನ್ನು ನಿಂದಿಸುತ್ತಾ ಆತ ಹೊರ ಹೋದ.

ನಂತರ ನನಗೆ ಪತ್ರ ಬರೆದ ಆತ, “ಬ್ರಿಟೀಷರು ದೇಶ ಬಿಟ್ಟು ಹೋದರೂ ಅವರ ಅಹಂಕಾರವನ್ನು ನಿಮ್ಮಂತಹ ಐಎಎಸ್‌ ಅಧಿಕಾರಿಗಳಲ್ಲಿ ಬಿಟ್ಟು ಹೋಗಿದ್ದಾರೆ’ ಎಂದು ದೂರಿದ್ದ. ಒಂದು ದಿನ ಆತ ಹೇಳಿದ ಪ್ರದೇಶದಲ್ಲೇ ಜನಸಂಪರ್ಕ ದಿನ ಆಯೋಜಿಸಲು ಸೂಚಿಸಿದ್ದೆ. ಆ ದಿನ ಜೀಪ್‌ನಲ್ಲಿ ಹೋಗುವಾಗ ಸಾಕಷ್ಟು ಜನ ನಡೆದು ಹೋಗುತ್ತಿದ್ದರು.

ಆ ಬಗ್ಗೆ ಪ್ರಶ್ನಿಸಿದಾಗ ಅವರೆಲ್ಲಾ ಜನಸಂಪರ್ಕ ಸಭೆಯಲ್ಲಿ ಪಾಲ್ಗೊಳ್ಳಲು ಹೋಗುತ್ತಿರುವ ವಿಚಾರ ತಿಳಿದು ಅಚ್ಚರಿಯಾಯಿತು. ಸಂಜೆ 5.30ರವರೆಗೆ ಜನರ ಸಮಸ್ಯೆಗಳನ್ನು ಆಲಿಸಿ ಸ್ಫಂದಿಸಿದ ಬಳಿಕ ಆ ಯುವಕ ಮರದ ಹಿಂದೆ ನಿಂತಿರುವುದು ಕಂಡು ಸಮಾಧಾನವಾಯಿತು. ತಿಂಗಳ ಬಳಿಕ ನನಗೆ ಚಿಕ್ಕಮಗಳೂರಿಗೆ ವರ್ಗಾವಾಯಿತು. ನಂತರ ಒಂದು ದಿನ ಆ ಯುವಕ ರಾಥೋಡ್‌ನಿಂದ ಪತ್ರ ಬಂದಿತ್ತು. ತನ್ನಿಂದ ತಪ್ಪಾಗಿದ್ದು, ಕ್ಷಮೆ ಕೇಳಿದ್ದರು. ನಾನು ಪತ್ರ ಬರೆದು ಕ್ಷಮೆ ಕೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next