“ಮೊದಲು ಸ್ಕ್ರಿಪ್ಟ್ ನನಗೆ ತೃಪ್ತಿ ಕೊಡಬೇಕು. ಒಮ್ಮೆ ಸ್ಕ್ರಿಪ್ಟ್ ಫೈನಲ್ ಆದರೆ, ಮಿಕ್ಕೆಲ್ಲವೂ ಸಲೀಸು…’ – ಹೀಗೆ ಹೇಳಿ ಸಣ್ಣ ನಗೆ ಬೀರಿದರು ರಕ್ಷಿತ್ ಶೆಟ್ಟಿ (Rakshit Shetty). ಅದಕ್ಕೆ ಕಾರಣ “ರಿಚರ್ಡ್ ಆ್ಯಂಟನಿ’ (Richard Anthony). ಇದು ರಕ್ಷಿತ್ ಶೆಟ್ಟಿ ನಟನೆ, ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾ. ಸದ್ಯ ರಕ್ಷಿತ್ ಆ ಸಿನಿಮಾ ಕೆಲಸದಲ್ಲೇ ಬಿಝಿ. ಆದರೆ, ತಡವಾಗುತ್ತಾ ಹೋಗುತ್ತಿದೆ. ಸಿನಿಮಾ ಪ್ರೇಮಿಗಳಲ್ಲಿ ಪ್ರಶ್ನೆ ಮೂಡುತ್ತಿದೆ. ತಡ ಯಾಕೆ? ಈ ಪ್ರಶ್ನೆಗೆ ರಕ್ಷಿತ್ ಉತ್ತರಿಸಿದ್ದಾರೆ.
“ದೊಡ್ಡ ಕನಸಿಗೆ ಸ್ವಲ್ಪ ಹೆಚ್ಚೇ ಸಮಯ ಬೇಕಾಗುತ್ತದೆ. ನನಗೇನು ಅವಸರವಿಲ್ಲ. ಈಗ ಸ್ಕ್ರಿಪ್ಟ್ ಕೆಲಸದಲ್ಲಿದ್ದೇನೆ. ಬಹುತೇಕ ಫೈನಲ್ ಆಗಿದೆ. ಈಗಾಗಲೇ ದುಬೈಗೆ ಹೋಗಿ ಲೊಕೇಶನ್ ನೋಡಿಕೊಂಡು ಬಂದಿದ್ದೇನೆ. ಸೆಪ್ಟೆಂಬರ್ ನಲ್ಲಿ ಯುಎಸ್‌ಎಗೆ ಲೊಕೇಶನ್ ನೋಡಲು ಹೋಗಬೇಕು. ಸಿನಿಮಾದಲ್ಲಿ ಸುಮಾರು 20 ನಿಮಿಷ ವಿದೇಶ ಭಾಗ ಬರುತ್ತದೆ. ನನ್ನ ಪ್ರತಿ ಸಿನಿಮಾದ ಸ್ಕ್ರಿಪ್ಟ್ ಒಂದೂವರೆ ವರ್ಷ ತೆಗೆದುಕೊಳ್ಳುತ್ತದೆ. ಈ ಬಾರಿ “ರಿಚರ್ಡ್ ಆ್ಯಂಟನಿ’, “ಮಿಡ್ ವೇ ಟು ಮೋಕ್ಷ’ ಹಾಗೂ “ಪುಣ್ಯಕೋಟಿ-1,2’ರ ಸ್ಕ್ರಿಪ್ಟ್ ಜೊತೆ ಜೊತೆಗೆ ಬರೆಯುತ್ತಿದ್ದೇನೆ. ಈ ಮೂರು ಸಿನಿಮಾಗಳು ನನ್ನೊಳಗೆ ರೆಡಿ ಇವೆ. ಒಂದರ ಹಿಂದೊಂದರಂತೆ ಬರಲಿವೆ. ಈ ವರ್ಷಾಂತ್ಯದಲ್ಲಿ “ರಿಚರ್ಡ್ ಆ್ಯಂಟನಿ’ ಶುರು ಆಗಲಿದೆ. ಮುಂದಿನ ವರ್ಷಾಂತ್ಯ ಬಿಡುಗಡೆ. ಒಂದು ವೇಳೆ ತಪ್ಪಿದರೆ ಅದರಾಚಿನ ವರ್ಷ ನನ್ನ ಎರಡು ಸಿನಿಮಾಗಳು ಬಿಡುಗಡೆಯಾಗಲಿವೆ. ರಿಚರ್ಡ್ ಮುಗಿಸಿಕೊಂಡು “ಮೋಕ್ಷ’ ಆರಂಭವಾಗುತ್ತದೆ’ ಎಂದು ಸಿನಿಮಾ ವಿವರ ಕೊಟ್ಟರು ರಕ್ಷಿತ್.
ನನ್ನ ನಿರ್ದೇಶನ, ನಟನೆಗೇ ಮೊದಲ ಆದ್ಯತೆ ರಕ್ಷಿತ್ ಶೆಟ್ಟಿಗೆ ನಟನೆಗಿಂತ ಹೆಚ್ಚು ಖುಷಿಕೊಡುವುದು ನಿರ್ದೇಶನ. ಅದೇ ಕಾರಣದಿಂದ ಅವರ ತುಡಿತ ಆ ಕಡೆ.ಮುಂದೆ ಬರುವ ಬಹುತೇಕ ಸಿನಿಮಾಗಳು ಅವರದ್ದೇ ನಿರ್ದೇಶನದಲ್ಲಿ ಇರಲಿವೆ. “ನನಗೆ ನನ್ನ ನಿರ್ದೇಶನದಲ್ಲೇ ನಟನೆ ಮಾಡಲು ಇಷ್ಟ. ಅದು ನನಗೆ ತುಂಬಾ ಕಂಫರ್ಟ್ ಕೂಡಾ. ಕೇವಲ ನಟನಾಗಿ ಶೂಟಿಂಗ್ ಮುಗಿಸಿಕೊಂಡು ಕ್ಯಾರ್‌ವ್ಯಾನ್‌ನಲ್ಲಿ ಕೂರಲು ಆಸಕ್ತಿ ಇಲ್ಲ. ಮುಂದೆ ಬಹುತೇಕ ನನ್ನ ನಿರ್ದೇಶನದಲ್ಲೇ ನಟನೆ ಮಾಡುತ್ತೇನೆ’ ಎನ್ನುತ್ತಾರೆ ರಕ್ಷಿತ್ ಶೆಟ್ಟಿ.
ಹೊಸಬರ ಒಳ್ಳೆ ಸಿನಿಮಾ ಬರುತ್ತಲೇ ಇರಬೇಕು
ಹೊಸಬರ ಸಿನಿಮಾಗಳಿಗೆ ಮಾರುಕಟ್ಟೆ ಬರಬೇಕಾದರೆ ಸತತವಾಗಿ ತಿಂಗಳಿಗೊಂದರಂತೆ ಒಳ್ಳೆಯ ಸಿನಿಮಾಗಳು ಬರಬೇಕು ಎನ್ನುವುದು ರಕ್ಷಿತ್ ಮಾತು. “ಆರು ತಿಂಗಳಿಗೊಂದು ಸಿನಿಮಾ ಬಂದು ಗೆದ್ದರೆ ಅದರಿಂದ ಲಾಭವಿಲ್ಲ. ಸತತವಾಗಿ ತಿಂಗಳಿಗೊಂದರಂತೆ ಹೊಸಬರ ಸಿನಿಮಾ ಬಂದು ಗೆದ್ದಾಗ ಜನ ಕೂಡಾ ಮುಂದೆ ಯಾವುದು ಎಂದು ಕಾಯುತ್ತಾರೆ. ಆಗ ಮಾತ್ರ ಮಾರ್ಕೇಟ್ ಬೆಳೆಯಲು ಸಾಧ್ಯ’ ಎನ್ನುತ್ತಾರೆ.
ಕಾಪಿರೈಟ್ ಕುರಿತು ಕಾನೂನು ಹೋರಾಟ
ತಮ್ಮ ನಿರ್ಮಾಣದ ಸಿನಿಮಾದ ಮೇಲಿನ ಕಾಪಿರೈಟ್ ಬಗ್ಗೆ ಮಾತನಾಡುವ ರಕ್ಷಿತ್, “ಕಾಪಿರೈಟ್ ಬಗ್ಗೆ ನಾನು ಕಲಿಯಬೇಕಿದೆ. ಅದು ಹೇಗೆ ವರ್ಕ್ ಆಗುತ್ತೆ, ಎಷ್ಟು ಹಣ ಕಟ್ಟಬೇಕು ಎಂದು. ಕೋರ್ಟ್‌ನಲ್ಲಿ 20 ಲಕ್ಷ ರೂಪಾಯಿ ಠೇವಣಿ ಇಡಲು ಕೋರ್ಟ್ ಹೇಳಿದೆ. ನಾವು ಬೇಕಾದರೆ 20 ಆಗಲ್ಲ, 5 ಲಕ್ಷ ಇಡು ತ್ತೇವೆ ಎಂದು ಹೇಳಬಹುದು. ಈ ಹಿಂದೆ ಕಿರಿಕ್ ಪಾರ್ಟಿಗೂ 10 ಲಕ್ಷ ಇಟ್ಟಿದ್ದೆವು. ಅದರಾಚೆ ಕೋರ್ಟ್‌ನಲ್ಲೇ ನಾವು ಹೋರಾಡುತ್ತೇವೆ’ ಎನ್ನುತ್ತಾರೆ.
100 ಕೋಟಿ ಬಂಡವಾಳ 160 ಕೋಟಿ ಲಾಭ
ರಕ್ಷಿತ್ ಶೆಟ್ಟಿ ತಮ್ಮ ಪರಂವ ಸ್ಟುಡಿಯೋಸ್ ಬ್ಯಾನರ್‌ನಡಿ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡಿದ್ದಾರೆ. ಈ 8 ವರ್ಷದಲ್ಲಿ 12 ಸಿನಿಮಾ ನಿರ್ಮಾಣವಾಗಿದೆ. ಅದರಲ್ಲಿ ಅನೇಕ ಸಿನಿಮಾಗಳು ಗೆದ್ದಿವೆ, ಇನ್ನು ಕೆಲವು ಸೋತಿವೆ. ಆದರೂ ನಿರ್ಮಾಣ ಮುಂದುವರೆದಿದೆ. ಇದನ್ನು ಹೇಗೆ ಬ್ಯಾಲೆನ್ಸ್ ಮಾಡುತ್ತಾರೆ ಎಂಬ ಪ್ರಶ್ನೆ ಸಹಜ.
“ನಮ್ಮ ಪರಂವದಲ್ಲಿ ಕಳೆದ 8 ವರ್ಷದಲ್ಲಿ 12 ಸಿನಿಮಾ ನಿರ್ಮಾಣ ಮಾಡಿದ್ದೇವೆ. ಈ ಹನ್ನೆರಡು ಸಿನಿಮಾಗಳಿಗೆ ಸುಮಾರು 100 ಕೋಟಿ ರೂಪಾಯಿ ಇನ್ವೆಸ್ಟ್ ಮಾಡಿದ್ದು, 160 ಕೋಟಿಗೂ ಹೆಚ್ಚು ದುಡಿದಿದ್ದೇವೆ. ಪರಂವ ಸ್ಟುಡಿಯೋ ದಿಂದ ಬಂದ ಹಣವನ್ನು ನಾನು ಮುಟ್ಟಲ್ಲ. ಅದನ್ನು ಸಿನಿಮಾಕ್ಕಷ್ಟೇ ಬಳಸುತ್ತೇನೆ. ನನ್ನ ನಟನೆಯ ದುಡ್ಡಷ್ಟೇ ನನ್ನದು. ವರ್ಷಕ್ಕೆ 10 ಸಿನಿಮಾ ಮಾಡಬೇಕು ಎಂಬುದು ನನ್ನ ಉದ್ದೇಶ. ಎಲ್ಲವೂ ಒಳ್ಳೆಯ ಸಿನಿಮಾಗಳೇ ಆಗಿರಬೇಕು. ಒಂದು ವೇಳೆ ಈ 10ರಲ್ಲಿ ಐದು ಹಿಟ್ ಆಗಿ, ಇನ್ನು 5 ಆ್ಯವರೇಜ್ ಆದರೂ ಆರ್ಥಿಕವಾಗಿ ಬ್ಯಾಲೆನ್ಸ್ ಮಾಡಲಾಗುತ್ತದೆ’ ಎಂದು ತಮ್ಮ ನಿರ್ಮಾಣದ ಬಗ್ಗೆ ಹೇಳುತ್ತಾರೆ. ಜೊತೆಗೆ ಇವತ್ತು ಓಟಿಟಿಯನ್ನು ನಂಬಿಕೊಂಡು ಸಿನಿಮಾ ಮಾಡುವಂತಿಲ್ಲ. ಸಿನಿಮಾ ಹಿಟ್ ಆದರೆ ಮಾತ್ರ ಬಿಝಿನೆಸ್ ಆಗುತ್ತದೆ ಎನ್ನಲು ಮರೆಯುವುದಿಲ್ಲ. ಅಂದಹಾಗೆ, ರಕ್ಷಿತ್ ನಿರ್ಮಾಣದ “ಮಿಥ್ಯ’, “ಸ್ಟ್ರಾಬೆರಿ’, “ಅಬ್ರಕಡಬ್ರ’ ಚಿತ್ರಗಳು ಬಿಡುಗಡೆಗೆ ಬಂದಿವೆ.
ಆರ್.ಪಿ.ರೈ