ವಿಜಯಪುರ: ಶಾಲೆಗೆ ಹೋಗುವ ಮಾತಿರಲಿ ಅಕ್ಷರ ದರ್ಶನವೂ ಆಗಿರದ ಆಕೆಯದ್ದು ಹಳ್ಳಿ ನಾಟಕಗಳಲ್ಲಿ ದೊಡ್ಡ ದನಿ. ಇಂಥ ಅಪರೂಪದ ವಿಜಯಪುರ ಜಿಲ್ಲೆಯ ರಂಗ ಪ್ರತಿಭೆಗೆ ಈ ಬಾರಿ ನಾಟಕ ಅಕಾಡೆಮಿ ಪ್ರಶಸ್ತಿ ಹುಡುಕಿಕೊಂಡು ಬಂದಿದೆ.
ಇಂಡಿ ತಾಲೂಕಿನ ಚವಡಿಹಾಳ ಮೂಲದ ಲಲಿತಾಬಾಯಿ ಲಾಲಪ್ಪ ದಶವಂತ ಎಂಬ ಗ್ರಾಮೀಣ ರಂಗಕರ್ಮಿಯೇ ಈ ಬಾರಿ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾದವರು. ಅನಕ್ಷರಸ್ಥೆಯಾಗಿರುವ ಲಲಿತಾಬಾಯಿ ಒಮ್ಮೆ ಕೇಳಿದ ರಂಗಭೂಮಿಯ ಮಾತುಗಳನ್ನು ಎಂದಿಗೂ ಮರೆಯದ ವಿಶೇಷ ಜ್ಞಾನದ ಖಣಿ ಎನಿಸಿದ್ದಾರೆ.
ಕಳೆದ ಮೂರು ದಶಕಗಳಿಂದ ವಿಜಯಪುರ ಗ್ರಾಮೀಣ ನಾಟಕ ಪರಿಸರದಲ್ಲಿ ಸಾತ್ವಿಕ ಪಾತ್ರಗಳ ಮನೋಜ್ಞ ಅಭಿನಯ ಕಂಡು ಪ್ರೇಕ್ಷಕ ಬೆರಗಾಗುತ್ತಿದ್ದ. ನಾಟಕಗಳಲ್ಲಿ ತಾವು ಅಭಿನಯಿಸಿದ ಸಾತ್ವಿಕ ಪಾತ್ರಗಳಿಗೆ ಜೀವ ತುಂಬುವ ಜೊತೆಗೆ ಹಳ್ಳಿಗಳಲ್ಲಿ ಪ್ರದರ್ಶನಗೊಳ್ಳುವ ನಾಟಕಗಳಲ್ಲಿ ಚಿತ್ರಗೀತೆಗಳು, ಜಾನಪದ ಗೀತೆಗಳಿಗೆ ಧ್ವನಿ ಅಗಿದ್ದರಿಂದಲೇ ಹೆಚ್ಚು ಜನಪ್ರಿಯತೆ ಗಳಿಸಿದವರು.
ತಬಲಾ ಕಲಾವಿದರಾಗಿದ್ದ ತಂದೆ ಲಾಲಪ್ಪ ಬಾಲ್ಯದಲ್ಲೇ ಮಗಳಲ್ಲಿದ್ದ ಗಾನ ಹಾಗೂ ನಟನಾ ಕೌಶಲ್ಯ ಪ್ರತಿಭೆ ಗುರುತಿಸಿದ್ದರು. ಹೀಗಾಗಿ 9ನೇ ವಯದಲ್ಲಿದ್ದ ಲಲಿತಾಬಾಯಿ ಅವರನ್ನು ಸೋದರ ಮಾವ ದೇವಪ್ಪ ಅವರ ಪಾರಿಜಾತ ನಾಟಕ ಕಂಪನಿಯ ಸಣ್ಣಾಟದಲ್ಲಿ ನಾರದ, ರುಕ್ಮಿಣಿ, ದರ್ಶನಿ ಪಾತ್ರ ಅಭಿನಯಿಸುವ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. ಜೊತೆಗೆ ಕನ್ನಡ ಚಲನಚಿತ್ರ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದ ಲಲಿತಾಬಾಯಿ ಆ ಕಾಲದಲ್ಲೇ ಕನ್ನಡ ರಂಗಭೂಮಿಯ ಲತಾ ಮಂಗೇಶ್ಕರ್ ಅಂತೆಲ್ಲ ಪ್ರೇಕ್ಷಕರಿಂದ ಹೊಗಳಿಸಿಕೊಂಡಿದ್ದರು.
ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರ ಗಡಿನಾಡು ಕನ್ನಡ ಗ್ರಾಮಗಳಲ್ಲಿ ಇವರು ಹವ್ಯಾಸಿ ನಾಟಕಗಳಲ್ಲಿನ ಅಭಿನಯ, ಹಿನ್ನೆಲೆ ಗಾಯನ ರಂಗಭೂಮಿ ಪ್ರೇಕ್ಷಕರನ್ನು ಸೆರೆ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಇಂಥ ಅಪರೂಪದ ಅನಕ್ಷರಸ್ಥ ರಂಗಕರ್ಮಿ ಲಲಿತಾಬಾಯಿ ಅವರನ್ನು ಅರಸಿಕೊಂಡು ಬಂದಿರುವ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ತನ್ನ ಗೌರವ ಹೆಚ್ಚಿಸಿಕೊಂಡಿದೆ ಎಂಬುದು ಹೆಚ್ಚು ಸೂಕಕಲಾವಿದರಾಗಿದ್ದ ನಮ್ಮ ತಂದೆ ನನ್ನಲ್ಲಿದ್ದ ಕಲಾ ಪ್ರತಿಭೆ ಗುರುತಿಸಿದ್ದು, ಅವರೇ ನನ್ನ ಮೊದಲ ಗುರು.
ಪಾರಿಜಾತ ಕಲಾ ತಂಡ ಹೊಂದಿದ್ದ ಸೋದರ ಮಾವ ದೇವಪ್ಪ ಅವರ ಬಳಿ ಪಡೆದ ಜ್ಞಾನ ಇಂದು ನನ್ನನ್ನು ಪ್ರಶಸ್ತಿ ಮಟ್ಟಕ್ಕೆ ತಂದು ನಿಲ್ಲಿಸಿದೆ. ನನ್ನನ್ನು ಬೆಳೆಸಿದ ಎಲ್ಲ ಪ್ರೇಕ್ಷಕ, ಕಲಾಭಿಮಾನಿಗಳಿಗೆ ನಾನು ಋಣಿಯಾಗಿದ್ದೇನೆ
. -ಲಲಿತಾಬಾಯಿ ದಶವಂತ, ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತೆ, ರಂಗಕರ್ಮಿ
ಇಂಡಿ ಭಾಗದ ಹಳ್ಳಿಗಳಲ್ಲಿ ಪ್ರದರ್ಶನ ಕಾಣುವ ನಾಟಕಗಳಲ್ಲಿ ಲಲಿತಾಬಾಯಿ ಅಭಿನಯ, ಹಾಡುವ ಧ್ವನಿ ಹೆಚ್ಚು ಚಿರಪರಿಚಿತ. ಶಾಲೆಯ ಮುಖವನ್ನೇ ನೋಡದ ಆಕೆಯ ಪ್ರತಿಭೆಗೆ ಪ್ರಶಸ್ತಿ ಧಕ್ಕಿರುವುದು ಹೆಚ್ಚು ಸೂಕ್ತ.
-ಎಲ್.ಬಿ. ಶೇಖ್ ಮಾಸ್ತರ, ಮಾಜಿ ಅಧ್ಯಕ್ಷರು, ಕರ್ನಾಟಕ ನಾಟಕ ಅಕಾಡೆಮಿ, ವಿಜಯಪುರ