ದಾವಣಗೆರೆ: ವಿದ್ಯಾರ್ಥಿ ಜೀವನದಲ್ಲಿ ಉತ್ಕೃಷ್ಠ ಸಾಧನೆ ಮಾಡುವ ಗುರಿಯ ಕನಸು ಕಟ್ಟಿಕೊಂಡು ಮುಂದುವರೆದರೆ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯೆ ವಿಜಯಲಕ್ಷ್ಮೀ ಎಚ್.ಹಿರೇಮಠ್ ತಿಳಿಸಿದರು.
ವಿಶ್ವ ವಿದ್ಯಾನಿಲಯ ದೃಶ್ಯಕಲಾ ಮಹಾವಿದ್ಯಾಲಯ ಸಭಾಂಗಣದಲ್ಲಿ ನಡೆದ 2021-2022ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಉದ್ಘಾಟನೆ ಮತ್ತು ನೂತನ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಕಲಾ ಸ್ಪರ್ಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಕನಸು ಮತ್ತು ಅದೃಷ್ಟದ ಬಲದೊಂದಿಗೆ ಅಸಾಧ್ಯವಾದುದನ್ನೂ ಸಹ ಸಾಧ್ಯವಾಗಿಸಬಹುದು ಎಂದರು.
ವಿದ್ಯಾರ್ಥಿ ಜೀವನ ಅದರಲ್ಲೂ ಕಾಲೇಜು ಜೀವನ ಆರಂಭಿಸುವ ವಿದ್ಯಾರ್ಥಿಗಳಿಗೆ ಏನಾದರೂ ಒಂದು ನಿರ್ದಿಷ್ಟ ಗುರಿ ಇರಬೇಕು. ಕೇವಲ ಗುಂಪಿನಲ್ಲಿ ಗೋವಿಂದ ಎನ್ನುವ ಮನೋಭಾವದಿಂದ ಪ್ರತಿಭೆಯನ್ನು ಯಾರೂ ಗುರುತಿಸುವಂತೆ ಆಗುವುದಿಲ್ಲ. ನಮ್ಮತನ ಇರಬೇಕು ಎಂದರು.
ಸಮಾಜದಲ್ಲಿ ನಾವು ಸುಮ್ಮನೆ ಇದ್ದರೆ ಯಾರೂ ನಮ್ಮನ್ನು ಗುರುತಿಸುವುದಿಲ್ಲ. ಕಂಡ ಕನಸನ್ನು ಸಾಧನೆ ಮಾಡಿದಾಗ ಮಾತ್ರ ಸಮಾಜ ಗುರುತಿಸುತ್ತದೆ. ಪ್ರತಿಯೊಬ್ಬರಲ್ಲೂ ಒಂದು ವಿಶೇಷತೆ, ವಿಭಿನ್ನತೆ ಇರುತ್ತದೆ. ಪರಿಶ್ರಮದ ಮೂಲಕ ಜಗತ್ತಿಗೆ ತೋರಿಸಬೇಕಿದೆ. ಆದರೆ, ದುರಂತವೆಂದರೆ ಎಲ್ಲರಂತೆ ವಿದ್ಯಾರ್ಥಿಗಳಿಗೆ ಅಭದ್ರತೆ, ಆತಂಕ ಕಾಡುತ್ತಿದೆ. ಕಾರಣ ತಯಾರಿಕೆ ಇಲ್ಲದೆ ಮುಂದುವರೆಯುವುದು ಎಲ್ಲ ಅಭದ್ರತೆಗೆ ಕಾರಣ ಎಂದು ತಿಳಿಸಿದರು.
ನಾವು ಏನಾದರೊಂದು ಸಾಧಿಸಬೇಕು. ಸಾಧನೆಗೆ ಯಾವುದೇ ಇತಿಮಿತಿ ಇಲ್ಲ. ಸಾಧಿಸಲು ಸಾಧ್ಯವೇ ಇಲ್ಲ ಎನ್ನುವ ಕೆಲಸವನ್ನೂ ಮಾಡಿ ತೋರಿಸಬೇಕು. ಅಂತಹ ಸಾಹಸದ ಕಿಚ್ಚು ವಿದ್ಯಾರ್ಥಿಗಳಲ್ಲಿ ಬರಬೇಕಿದೆ. ದುರ್ಬಲತೆಯನ್ನು ಮೀರಿ ಶಕ್ತಿಯನ್ನು ಹೊರಗೆಳೆದು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮುಂದುವರೆದಾಗ ಮಾತ್ರ ಯಾವುದೇ ಕ್ಷೇತ್ರದಲ್ಲಾದರೂ ಸಾಧನೆ ಮಾಡಲು ಸಾಧ್ಯ ಎಂದು ತಿಳಿಸಿದರು.
ದೃಶ್ಯಕಲಾ ಮಹಾವಿದ್ಯಾಲಯದ ಸಂಯೋಜನಾಧಿಕಾರಿ ಡಾ|ಸತೀಶ್ ಕುಮಾರ್ ಪಿ.ವಲ್ಲೇಪುರೆ ಅಧ್ಯಕ್ಷತೆ ವಹಿಸಿದ್ದರು. ಫ್ಯಾಷನ್ ಡಿಸೈನ್ ವಿಭಾಗದ ಸಂಯೋಜನಾಧಿಕಾರಿ ಡಾ| ಜೈರಾಜ್ ಎಂ.ಚಿಕ್ಕಪಾಟೀಲ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಿ.ಚಿರಂಜೀವಿ, ಬೋಧನಾ ಸಹಾಯಕರಾದ ಸುರೇಶ್ ಹರಿವಾಣ ಡಾ| ಎಂ.ಕೆ. ಗಿರೀಶ್ ಕುಮಾರ್, ಕೆ.ಆರ್.ರೇಷ್ಮಾರಾಣಿ, ಶಿವಶಂಕರ್ ಸುತಾರ್, ಎನ್. ಎಸ್. ಹೇಮಲತಾ, ದತ್ತಾತ್ರೇಯ ಭಟ್, ಹರೀಶ್ ಹೆಡ್ಡಣ್ಣನವರ್, ವಸಂತ ಕುಮಾರ್, ಸಿಂಡಿಕೇಟ್ ಸದಸ್ಯ ಟಿ.ಇನಾಯತುಲ್ಲಾ ಇತರರು ಇದ್ದರು.