Advertisement
ತನ್ನ ಅತ್ಯುತ್ತಮ ಕಾರ್ಯನಿರ್ವಹಣೆ ಮೂಲಕ ಬಿಸನಾಳ ಸಂಘ ದೇಶಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ನ.26ರಂದು ಹೊಸದಿಲ್ಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಹಾಲು ದಿನಾಚರಣೆಯಲ್ಲಿ ಕೇಂದ್ರ ಸಚಿವ ರಾಜೀವ್ ರಂಜನ್ ಸಿಂಘ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ರಾಷ್ಟ್ರಾದ್ಯಂತ ಇರುವ ಹಾಲಿನ ಡೇರಿಗಳ ಕಾರ್ಯನಿರ್ವಹಣೆ, ಸಮಾಜಮುಖಿ ಕಾರ್ಯಗಳ ಆಧಾರದ ಮೇಲೆ ಕೇಂದ್ರ ಸರ್ಕಾರ ಈ ಪ್ರಶಸ್ತಿಗೆ ಆಯ್ಕೆ ಮಾಡುತ್ತದೆ. ಈ ವರ್ಷ ಬಿಸನಾಳ ಹಾಲು ಉತ್ಪಾದಕರ ಸಂಘ ಆಯ್ಕೆಯಾಗಿದ್ದು, ರಾಜ್ಯಕ್ಕೆ ಹೆಮ್ಮೆಯ ಗರಿ ಮೂಡಿಸಿದೆ.
ಮಹಾಲಿಂಗಪುರ ತಾಲೂಕಿನ ಕೆಸರಗೊಪ್ಪ ಗ್ರಾ.ಪಂ. ವ್ಯಾಪ್ತಿಯ ಬಿಸನಾಳ ಗ್ರಾಮದಿಂದ 2.5 ಕಿಮೀ ದೂರದ ತೋಟದಲ್ಲಿ 1993ರಲ್ಲಿ ಈ ಡೇರಿ ಸ್ಥಾಪನೆಯಾಗಿದೆ. ಆರಂಭದಲ್ಲಿ 50 ಸದಸ್ಯರಿಂದ ಪ್ರತಿನಿತ್ಯ 10 ಲೀಟರ್ ಹಾಲು ಸಂಗ್ರಹವಿತ್ತು. ಈಗ 250 ಸದಸ್ಯರಿಂದ ನಿತ್ಯ 2300 ಲೀಟರ್ ಹಾಲು ಸಂಗ್ರಹಿಸುತ್ತಿದೆ. ಸಮೂಹ ಸಂಘದಿಂದ 2,400 ಸೇರಿ ನಿತ್ಯ 4,700 ಲೀಟರ್ ಹಾಲಿನ ಸಂಗ್ರಹವಿದೆ. 2023-24ನೇ ಸಾಲಿನಲ್ಲಿ 9.56 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಸಂಘದ ನಿರ್ದೇಶಕ ಮಹಾದೇವ ಚಿನಗುಂಡಿ ಅವರ ತಂದೆ ಕಲ್ಲಪ್ಪ ಅವರ ಸ್ಮರಣಾರ್ಥ ದೇಣಿಗೆ ನೀಡಿದ ಜಾಗದಲ್ಲಿ ಸ್ವಂತ ಕಟ್ಟಡವನ್ನೂ ನಿರ್ಮಾಣವಾಗಿದೆ. ಪ್ರತಿ ವಾರ ಹಾಲಿನ ಬಿಲ್ ಆನ್ಲೈನ್ ಮೂಲಕ ನೇರವಾಗಿ ಹಾಲು ಉತ್ಪಾಾದಕರ ಖಾತೆಗೆ ಜಮಾ ಮಾಡಲಾಗುತ್ತಿದೆ.
Related Articles
ಬಿಸನಾಳ ಡೇರಿ ಕಟ್ಟಡದ ಮೇಲೆ 12.05 ಕೆವಿ ಸೋಲಾರ್ ಘಟಕ ಅಳವಡಿಸಿದೆ. ನಿತ್ಯ ಸಂಘದ ಕಚೇರಿ ಮತ್ತು ಶೀತಲೀಕರಣ ಘಟಕಕ್ಕೆ ಸುಮಾರು 70 ಯೂನಿಟ್ವರೆಗೆ ವಿದ್ಯುತ್ ಬೇಕಾಗುತ್ತದೆ. ಅದರಲ್ಲಿ 50 ಯೂನಿಟ್ ಸ್ವಂತ ಉತ್ಪಾದಿಸಿದರೆ, 20 ಯೂನಿಟ್ ವಿದ್ಯುತ್ ಇಲಾಖೆಯಿಂದ ಬಳಸಿಕೊಳ್ಳಲಾಗುತ್ತಿದೆ. 2021ರಲ್ಲಿಯೂ ಬಿಸನಾಳ ಸಹಕಾರಿ ಸಂಘಕ್ಕೆ ಅತ್ಯುತ್ತಮ ಸಹಕಾರಿ ಸಂಘ ರಾಷ್ಟ್ರೀಯ ಪ್ರಶಸ್ತಿ ಬಂದಿತ್ತು.
Advertisement
ಕೇವಲ ಲಾಭದಾಯಕವಾಗಿ ಮಾತ್ರ ಕಾರ್ಯನಿರ್ವಹಿಸದೆ ಸಮಾಜಮುಖಿ ಕಾರ್ಯಗಳಲ್ಲೂ ಸಂಘ ತೊಡಗಿಸಿಕೊಂಡಿದೆ. 2016ರಲ್ಲಿ ಬಾಗಲಕೋಟೆ-ವಿಜಯಪುರ ಜಿಲ್ಲೆ ಹಾಲು ಒಕ್ಕೂಟದಿಂದ 5 ಸಾವಿರ ಲೀಟರ್ ಸಾಮರ್ಥ್ಯದ ಹಾಲು ಶೀತಲೀಕರಣ ಘಟಕ ಸ್ಥಾಪಿಸಿದೆ. 2018-19ರನಲ್ಲಿ ಹಾಲಿನ ಶುದ್ಧತೆಗೆ ಎಲ್ಲ ಹಾಲು ಉತ್ಪಾದಕರಿಗೆ 1.29 ಲಕ್ಷ ರೂ. ವೆಚ್ಚದಲ್ಲಿ ಉಚಿತ ಸ್ಟೀಲ್ ಕ್ಯಾನ್ ವಿತರಿಸಿದೆ. 2019-20ರಲ್ಲಿ ನೆರೆ ಹಾವಳಿಯಿಂದ ಸಂಕಷ್ಟದಲ್ಲಿದ್ದ ಹಾಲು ಉತ್ಪಾದಕರ ಜಾನುವಾರುಗಳಿಗೆ 50 ಸಾವಿರ ವೆಚ್ಚದಲ್ಲಿ ಉಚಿತ ಪಶು ಆಹಾರ ವಿತರಿಸಿದೆ. ಪ್ರತಿ ವರ್ಷ ಹಾಲು ಉತ್ಪಾದಕರ ಪ್ರತಿಭಾವಂತ ಮಕ್ಕಳಿಗೆ 5 ಸಾವಿರ ಪ್ರೋೋತ್ಸಾಹಧನ ವಿತರಿಸುತ್ತಿದೆ. ಜಾನುವಾರುಗಳಿಗೆ ಕೃತಕ ಗರ್ಭಧಾರಣೆ ಸೌಲಭ್ಯವಿದೆ. ಸಂಘದ ಯಶಸ್ಸಿನ ರೂವಾರಿಗಳು
ಸಂಘದ ಅಧ್ಯಕ್ಷ ಶಿವಲಿಂಗಪ್ಪ ವಾಲಿ, ಉಪಾಧ್ಯಕ್ಷೆ ಯಲ್ಲವ್ವ ಚಿನಗುಂಡಿ, ನಿರ್ದೇಶಕರಾದ ಗಿರಿಮಲ್ಲಪ್ಪ ಚಿಂಚಲಿ, ಮುರಿಗೆಪ್ಪ ಶಿರೋಳ, ಶ್ರೀಶೈಲ ಮಹಾದೇವ ಅಂದಾನಿ, ಸುರೇಶ ನಿಂಗಪ್ಪ ಉಳ್ಳಾಗಡ್ಡಿ, ಬಾಳಪ್ಪ ಹುಕ್ಕೇರಿ, ಮಹಾದೇವ ಉಳ್ಳಾಗಡ್ಡಿ, ಶಿವಲಿಂಗಪ್ಪ ನಿಪನ್ಯಾಳ, ಮಲ್ಲಪ್ಪ ಗುರಾಣಿ, ವಿಠ್ಠಲ ತಳವಾರ, ಕಲ್ಳೋಳೆಪ್ಪ ವಡ್ಡರ, ಕಾಶವ್ವ ಹೊಸೂರ ಸಂಘದ ಯಶಸ್ವಿಗೆ ಶ್ರಮಿಸುತ್ತಿದ್ದಾರೆ. ʼವಿಜಯಪುರ-ಬಾಗಲಕೋಟೆ ಹಾಲು ಒಕ್ಕೂಟದ ಅಧ್ಯಕ್ಷ ಈರಣ್ಣ ಕರಿಗೌಡರ, ವ್ಯವಸ್ಥಾಪಕ ನಿರ್ದೇಶಕ ಡಿ.ಟಿ.ಶಿವಶಂಕರ, ವ್ಯವಸ್ಥಾಾಪಕ ಡಾಗಜರಾಜ ರನತೂರ, ಜಮಖಂಡಿ ಉಪವಿಭಾಗದ ಸಹಾಯಕ ವ್ಯವಸ್ಥಾಪಕ ಆರ್.ಎಸ್.ಚವ್ಹಾಣ, ವಿಸ್ತರಣಾಧಿಕಾರಿ ಎಸ್.ಎಸ್.ಶೆಟ್ಟೆನ್ನವರ ಸಹಕಾರ, ಮಾರ್ಗದರ್ಶನದಲ್ಲಿ ಸಂಘದ ನಿರ್ದೇಶಕರು, ಸಿಬ್ಬಂದಿ ದಕ್ಷ ಕಾರ್ಯಕ್ಕೆ ಪ್ರತಿಫಲವಾಗಿ ರಾಷ್ಟ್ರ ಪ್ರಶಸ್ತಿ ಲಭಿಸಿದ್ದು ಖುಷಿ ತಂದಿದೆ.ʼ – ಗಿರಿಮಲ್ಲಪ್ಪ ಸುಳ್ಳನವರ, ಸಿಇಒ, ಬಿಸನಾಳ ಡೇರಿ ʼಬಿಸನಾಳ ಡೇರಿಯ ಎಲ್ಲ ಪದಾಧಿಕಾರಿಗಳು, ಸಿಬ್ಬಂದಿಯ ಪ್ರಾಮಾಣಿಕ ಪ್ರಯತ್ನದಿಂದ ರಾಷ್ಟ್ರೀಯ ಗೋಪಾಲ ರತ್ನ ಪ್ರಶಸ್ತಿ ಲಭಿಸಿದೆ. ಎಲ್ಲ ಹಾಲು ಉತ್ಪಾದಕರಿಗೂ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು, ಸಿಬ್ಬಂದಿಗೆ ಅಭಿನಂದನೆಗಳು. ಇದು ಇತರ ಸಂಘಗಳಿಗೆ ಮಾದರಿಯಾಗಲಿ.ʼ -ಡಿ.ಟಿ.ಶಿವಶಂಕರ, ಎಂಡಿ, ವಿಜಯಪುರ-ಬಾಗಲಕೋಟೆ ಹಾಲು ಒಕ್ಕೂಟ
– ಚಂದ್ರಶೇಖರ ಮೋರೆ