ನವದೆಹಲಿ: ಪತಂಜಲಿ ಗ್ರೂಪ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಯೋಗ ಗುರು ಬಾಬಾ ರಾಮದೇವ್ ನಿಕಟವರ್ತಿ ಆಚಾರ್ಯ ಬಾಲಕೃಷ್ಣ ಅವರು ರುಚಿ ಸೋಯಾ ಇಂಡಸ್ಟ್ರೀಸ್ ನ ಮ್ಯಾನೇಜಿಂಗ್ ಡೈರೆಕ್ಟರ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅಲ್ಲದೇ 2020ರ ಆಗಸ್ಟ್ 19ರಿಂದ ಅನ್ವಯವಾಗುವಂತೆ ಕಾರ್ಯನಿರ್ವಾಹಕೇತರ ಸ್ವತಂತ್ರರಹಿತ ನಿರ್ದೇಶಕ ಎಂದು ನಿಯೋಜಿಸಲಾಗಿದೆ ಎಂಬುದಾಗಿ ವರದಿ ಹೇಳಿದೆ.
ಆಚಾರ್ಯ ಬಾಲಕೃಷ್ಣ ಅವರು ಆಡಳಿತ ನಿರ್ದೆಶಕ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇತರ ಕೆಲಸಗಳ ಒತ್ತಡದಿಂದ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ರುಚಿ ಕಂಪನಿಯ ಆಡಳಿತ ಮಂಡಳಿ ನಿರ್ದೇಶಕರು ರಾಜೀನಾಮೆಯನ್ನು ಸ್ವೀಕರಿಸಿದ್ದು, ಕಂಪನಿಯ ಆಡಳಿತ ಮಂಡಳಿ ಜವಾಬ್ದಾರಿಯಿಂದ ಬಿಡುಗಡೆ ನೀಡಲಾಗಿದೆ ಎಂದು ರುಚಿ ಸೋಯಾ ಕಂಪನಿ ತಿಳಿಸಿದೆ.
ಕಂಪನಿಯ ಪೂರ್ಣಪ್ರಮಾಣದ ನಿರ್ದೇಶಕರನ್ನಾಗಿ ಭರತ್ ರಾಮ್ ಅವರನ್ನು ನೇಮಕ ಮಾಡಲಾಗಿದೆ. ನಿವೃತ್ತಿ ಹಾಗೂ ಇತರ ಷರತ್ತುಗಳನ್ನು ಕಂಪನಿ ಇತರ ಆಡಳಿತ ಮಂಡಳಿ ನಿರ್ದೇಶಕರ ಅನುಮತಿ ಮೇರೆಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ರುಚಿ ಸೋಯಾ ವಿವರಿಸಿದೆ.
ಸಿಇಒ ಆಗಿ ಸಂಜೀವ್ ಅಸ್ತಾನಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕಂಪನಿ ಹೇಳಿದೆ. ಅಸ್ತಾನಾ ಅವರು ಈಗಾಗಲೇ ಬ್ರಿಟಾನಿಯ, ಐಟಿಸಿ, ರಿಲಯನ್ಸ್ ರಿಟೈಲ್ ಸೇರಿದಂತೆ ಪ್ರತಿಷ್ಠಿತ ಕಂಪನಿಗಳಲ್ಲಿ ಸೇವೆ ಸಲ್ಲಿಸಿದ್ದರು.
ಭಾರೀ ನಷ್ಟ ರಾಜೀನಾಮೆಗೆ ಕಾರಣ?
ಪತಂಜಲಿ ಗ್ರೂಪ್ ನ ರುಚಿ ಸೋಯಾ ಸಂಸ್ಥೆಯ ಲಾಭದಲ್ಲಿ ಶೇ.13ರಷ್ಟು ಇಳಿಕೆಯಾಗಿದೆ. ಜೂನ್ 30ರ ತ್ರೈಮಾಸಿಕ ವರದಿಯ ಪ್ರಕಾರ ಕಂಪನಿ ಕೇವಲ 12,25 ಕೋಟಿ ರೂಪಾಯಿ ಮಾತ್ರ ಲಾಭ ಗಳಿಸಿತ್ತು. 2019ರಲ್ಲಿ ಇದೇ ಸಮಯದಲ್ಲಿ ಕಂಪನಿ 14.01 ಕೋಟಿ ರೂಪಾಯಿ ಲಾಭ ಕಂಡಿತ್ತು. ಕಂಪನಿಗೆ ಒಟ್ಟಾರೆ 3,057.15 ಕೋಟಿ ರೂಪಾಯಿ ಇಳಿಕೆಯಾಗಿದೆ. 2019ರ ಜೂನ್ ನಲ್ಲಿ 3,125.65 ಕೋಟಿ ರೂಪಾಯಿ ಲಾಭವಾಗಿತ್ತು ಎಂದು ವರದಿ ತಿಳಿಸಿದೆ.
ಯಾರೀದು ಬಾಲಕೃಷ್ಣ ಆಚಾರ್ಯ:
ಪತಂಜಲಿ ಆಯುರ್ವೇದ ಗ್ರೂಪ್ ನ ಆಡಳಿತ ನಿರ್ದೇಶಕ ಹಾಗೂ ಸಿಇಒ. ಫೋರ್ಬ್ಸ್ ಪತ್ರಿಕೆಯ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಆಚಾರ್ಯ ಕೂಡಾ ಸ್ಥಾನ ಪಡೆದಿದ್ದರು. ಬಾಲಕೃಷ್ಣ ಅಲಿಯಾಸ್ ಆಚಾರ್ಯ ಬಾಲಕೃಷ್ಣ ಆಗಸ್ಟ್ 4, 1973ರಂದು ಉತ್ತರಾಖಂಡದ ಹರಿದ್ವಾರದಲ್ಲಿ ಜನಿಸಿದ್ದರು. ತಂದೆ, ತಾಯಿ ನೇಪಾಳ ಮೂಲದ ವಲಸಿಗರಾಗಿದ್ದರು. ತಂದೆ ಜಯ್ ವಲ್ಲಭ್, ತಾಯಿ ಸುಮಿತ್ರಾ ದೇವಿ.
1995ರಲ್ಲಿ ಬಾಲಕೃಷ್ಣ ಮತ್ತು ರಾಮ್ ದೇವ್ ದಿವ್ಯ ಯೋಗ ಪಾರ್ಮಸಿಯನ್ನು ಹರಿದ್ವಾರದಲ್ಲಿ ಸ್ಥಾಪಿಸಿದ್ದರು. 2006ರಲ್ಲಿ ಪತಂಜಲಿ ಆಯುರ್ವೇದವನ್ನು ಹುಟ್ಟುಹಾಕಿದ್ದರು. ಅತೀ ಹೆಚ್ಚು ಗ್ರಾಹಕ ಬಳಕೆಯ ವಸ್ತುಗಳನ್ನು (ಎಫ್ ಎಂಸಿಜಿ) ಉತ್ಪಾದಿಸುವ ಮತ್ತು ವ್ಯಾಪಾರ ಕೆಲಸದಲ್ಲಿ ಕಂಪನಿ ತೊಡಗಿತ್ತು. ಇದರಲ್ಲಿ ಗಿಡಮೂಲಿಕೆ ಮತ್ತು ಆಯುರ್ವೇದ ಉತ್ಪನ್ನ ಸೇರಿತ್ತು. ವಿದೇಶದಲ್ಲಿರುವ ರಾಮ್ ದೇವ್ ಅವರ ಅನುಯಾಯಿಯಾದ ಸುನೀತಾ ಮತ್ತು ಸರವನ್ ಪೊದ್ದಾರ್ ವ್ಯವಹಾರ ಆರಂಭಿಸಲು ಸಾಲ ನೀಡಿದ್ದರು. ತನ್ನ ಹೆಸರಿನಲ್ಲಿ ಬ್ಯಾಂಕ್ ಖಾತೆ ಇಲ್ಲದ ಹಿನ್ನೆಲೆಯಲ್ಲಿ ಆಚಾರ್ಯ ಬಾಲಕೃಷ್ಣ ಅಂದು ಪೊದ್ದಾರ್ ದಂಪತಿಯಿಂದ 50ರಿಂದ 60 ಕೋಟಿ ರೂಪಾಯಿ ಸಾಲ ಪಡೆದಿದ್ದರು. 2012ರ ಹೊತ್ತಿಗೆ ಪತಂಜಲಿ ಕಂಪನಿಯ ವಹಿವಾಟು 450 ಕೋಟಿ ರೂಪಾಯಿ ಆಗಿತ್ತು. 2015-16ರಲ್ಲಿ 5000 ಸಾವಿರ ಕೋಟಿಯ ಬೃಹತ್ ವಹಿವಾಟಿನ ಕಂಪನಿಯಾಗಿ ಬೆಳೆದಿತ್ತು.
ಪತಂಜಲಿ ಆಯುರ್ವೇದದಲ್ಲಿ ಬಾಬಾ ರಾಮ್ ದೇವ್ ಅವರು ಯಾವುದೇ ಶೇರು ಬಂಡವಾಳದ ಪಾಲುದಾರಿಕೆ ಹೊಂದಿಲ್ಲ. ಬಾಬಾ ರಾಮ್ ದೇವ್ ಪತಂಜಲಿ ಉತ್ಪನ್ನ ಮಾರಾಟವಾಗಲು ತಮ್ಮ ಅನುಯಾಯಿಗಳ ಹಾಗೂ ಯೋಗ ಕ್ಯಾಂಪ್, ಟೆಲಿವಿಷನ್ ಕಾರ್ಯಕ್ರಮದ ಮೂಲಕ ಪ್ರಚಾರ ನಡೆಸುವುದಷ್ಟೇ ಕೆಲಸವಾಗಿದೆ. ಪತಂಜಲಿ ಕಂಪನಿಯಲ್ಲಿ ಬಾಲಕೃಷ್ಣ ಶೇ.98.6ರಷ್ಟು ಶೇರು ಹೊಂದಿದ್ದು, ಆಡಳಿತ ಮಂಡಳಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಾಬಾ ರಾಮ್ ದೇವ್ ಅವರ ನಿಕಟವರ್ತಿ ಆಚಾರ್ಯ ಬಾಲಕೃಷ್ಣ.
ಅವಿವಾಹಿತ ಆಚಾರ್ಯ ಬಾಲಕೃಷ್ಣ:
ಆಚಾರ್ಯ ಬಾಲಕೃಷ್ಣ(48ವರ್ಷ) ಅವಿವಾಹಿತರಾಗಿದ್ದು, ಈಗಾಗಲೇ ಯೋಗ ಹಾಗೂ ಆಯುರ್ವೇದದ ಬಗ್ಗೆ 120ಕ್ಕೂ ಅಧಿಕ ಪುಸ್ತಕ ಬರೆದಿದ್ದಾರೆ. ಅಷ್ಟೇ ಅಲ್ಲ ಆಚಾರ್ಯ ನೂರಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.