ರಾಮನಗರ: ಕೋವಿಡ್-19 ಸೋಂಕು ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸ್ಥಾಪಿಸಿರುವ ಸ್ಥಾಂಸ್ಥಿಕ ಕ್ವಾರಂಟೈನ್‌ಗಳಲ್ಲಿರುವ ನಾಗರಿಕರು ಅಲ್ಲಿನ ಅವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳಪೆ ಆಹಾರ, ಕಾಟಾಚಾರದ ವೈದ್ಯಕೀಯ ಉಪಚಾರ, ಅಶುಚಿಯ ಶೌಚಾಲಯ, ನೀರು ಅಲಭ್ಯ ಇತ್ಯಾದಿ ಬಗ್ಗೆ ದೂರು ವ್ಯಾಪಕವಾಗಿ ಕೇಳಿ ಬರುತ್ತಿದೆ. ರಾಮನಗರ ತಾಲೂಕಿನ ಮಾಯಗಾನಹಳ್ಳಿಯ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರದ ಅವ್ಯವಸ್ಥೆಗೆ ರೋಸಿ ಹೋದ ನಿವಾಸಿಗಳು ಶನಿವಾರ ಸಂಜೆ ಪ್ರತಿಭಟನೆ ಹಾದಿ ತುಳಿದಿದ್ದರು.
ಇದು ನರಕ: ಕನಕಪುರದ ಮೊರಾರ್ಜಿ ವಸತಿ ಶಾಲೆ ಪರಿವರ್ತಿತ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರುವ ಹೆಸರು ಹೇಳಲಿಚ್ಛಿಸದ ವ್ಯಕ್ತಿಯೊಬ್ಬರು ಪತ್ರಿಕೆಯೊಡನೆ ಮಾತ ನಾಡಿ, ಇದೊಂದು ನರಕ ಎಂದು ಬಣ್ಣಿಸಿದ್ದಾರೆ. ತಮ್ಮ ಹತ್ತಿರದ ಸಂಬಂಧಿಯೊಬ್ಬರಿಗೆ ಸೋಂಕು ಕಾಣಿಸಿಕೊಂಡಿ ದ್ದರಿಂದ ತಾವೇ ಸ್ವಯಂ ಪೇರಿತರಾಗಿ ಗಂಟಲು ದ್ರವ ಪರೀಕ್ಷಿಸಿಕೊಂಡಿದ್ದಾಗಿ, ಕ್ವಾರಂಟೈನ್‌ಗೆ ಒಳಗಾಗಿರುವು ದಾಗಿ ತಿಳಿಸಿದರು. ಕ್ವಾರಂಟೈನಲ್ಲಿ ತಮ್ಮ ಪೈಕಿ ಒಬ್ಬರಿಗೆ ಗಂಟಲು ದ್ರವ ಪರೀಕ್ಷೆಯ ಪಾಸಿಟಿವ್ ಬಂದಿದೆ. ತಕ್ಷಣ ಆತನನ್ನು ಪ್ರತ್ಯೇಕವಾಗಿ ಇರಿಸಲಿಲ್ಲ. ಸುಮಾರು ಮುಕ್ಕಾಲು ದಿನ ಆತ ಇತರರೊಂದಿಗೆ ಇದ್ದರು. ಹೀಗಾಗಿ ಉಳಿದವರಿಗೆಲ್ಲ ಆತಂಕ ಆರಂಭವಾಗಿದೆ ಎಂದರು.
ಮನೆಯಲ್ಲಿದ್ರೆ ಸೋಂಕಿನ ಭಯ ಇರಲಿಲ್ಲ: ಕ್ವಾರಂಟೈನ್‌ನಲ್ಲಿ ಒಂದೇ ಶೌಚಾಲಯ, ಪದೆ ಪದೇ ಶುಚಿಗೊಳಿಸುವುದಿಲ್ಲ. ಹೀಗಾಗಿ ಸೋಂಕು ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆ ಹೆಚ್ಚು, ಮೇಲಾಗಿ ತಿಂಡಿ, ಊಟ ತೃಪ್ತಿಕರವಾಗಿಲ್ಲ. ತಾವು ಮನೆಯಲ್ಲೇ ಇದ್ದರೆ ಬಹುಶಃ ತಮಗೆ ಸೋಂಕಿನ ಭಯವೇ ಇರುತ್ತಿರಲಿಲ್ಲ. ಇಲ್ಲಿಗೆ ಬಂದು ಭಯ ಆರಂಭವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೋವಿಡ್-19 ಆಸ್ಪತ್ರೆಯಲ್ಲಿ ನೀರಿಲ್ಲ: ರಾಮನಗರ ಜಿಲ್ಲಾ ಕೇಂದ್ರದಲ್ಲಿರುವ ಕಂದಾಯ ಭವನವನ್ನೇ ಕೋವಿಡ್-19 ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ. ಈ ಭವನದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಇದ್ದಾಗಲೂ ಇಲ್ಲಿನ ಶೌಚಾಲಯಗಳಲ್ಲಿ ನೀರು ಸರಿಯಾಗಿ ಬರುತ್ತಿರಲಿಲ್ಲ. ಈಗಲೂ ಅದೇ ಸಮಸ್ಯೆಯಿದೆ ಎಂದು ಅಲ್ಲಿರುವ ಸೋಂಕಿತರೊಬ್ಬರ ಸಂಬಂಧಿಕರು ದೂರಿದ್ದಾರೆ.
ಪೇಯ್ಡ್ ಕ್ಯಾರಂಟೈನ್‌ಗೆ ಸಲಹೆ: ಸಾಂಸ್ಥಿಕ ಕ್ವಾರಂಟೈನ್‌ಗಳಲ್ಲಿನ ಅವ್ಯವಸ್ಥೆಯ ಬಗ್ಗೆ ವ್ಯಾಪಕ ದೂರು ಕೇಳಿ ಬರುತ್ತಿದ್ದು, ಪೇಯ್ಡ್ ಕ್ವಾರಂಟೈನ್ (ಶುಲ್ಕ ಸಹಿತ ಕ್ವಾರಂಟೈನ್) ಕ್ವಾರಂಟೈನ್ ಗೆ ಕೆಲವರು ಸಲಹೆ ನೀಡಿದ್ದಾರೆ. ಈ ವಿಚಾರದಲ್ಲಿ ಮಾಗಡಿ ಶಾಸಕ ಎ.ಮಂಜು ಇತ್ತಿಚೆಗೆ ನಡೆದ ಕೆಡಿಪಿ ಸಭೆಯಲ್ಲಿ ದನಿ ಎತ್ತಿದ್ದರು. ಶುಲ್ಕ ಪಾವತಿಸುವ ಶಕ್ತಿ ಉಳ್ಳವರಿಗೆ ಪೇಯ್ಡ್ ಕ್ವಾರಂಟೈನ್ ವ್ಯವಸ್ಥೆ ಜಾರಿಗೆ ತನ್ನಿ ಎಂದು ಆಗ್ರಹಿಸಿದ್ದಾರೆ. ಜಿಲ್ಲಾಡಳಿತ ಈ ಬಗ್ಗೆ ಇನ್ನಷ್ಟೇ ಗಮನ ಹರಿಸಬೇಕಾಗಿದೆ.