ಬೆಂಗಳೂರು: ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿ ಐದು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ರಾಜಗೋಪಾಲ ನಗರ ಠಾಣೆ ಪೊಲೀಸರು, ಬೆರಳಚ್ಚು ಮುದ್ರೆ ಪರಿಶೀಲನೆ (ಎಂ-ಸಿಸಿಟಿಎನ್‌ಎಸ್) ಮೂಲಕ ಬಂಧಿಸಿದ್ದಾರೆ.
ಮಂಡ್ಯ ಮೂಲದ ವಸಂತ್ ಬಂಧಿತ.
ರಾಜಗೋಪಾಲನಗರ ಠಾಣೆ ಎಎಸ್‌ಐ ರವಿಕುಮಾರ್ ಮತ್ತು ಸಿಬ್ಬಂದಿ ಡಿ.5ರ ರಾತ್ರಿ ಹೊಯ್ಸಳ ವಾಹನದಲ್ಲಿ ಗಸ್ತಿನಲ್ಲಿದ್ದಾಗ ಯುರೋ ಫಾರಂ ಜಂಕ್ಷನ್‌ನಲ್ಲಿ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಓಡಾಡುತ್ತಿರುವುದನ್ನು ಗಮನಿಸಿದ್ದಾರೆ. ಅನುಮಾನಗೊಂಡು ಆತನನ್ನು ವಿಚಾರಣೆ ನಡೆಸಿ, ಎಂ-ಸಿಸಿಟಿಎನ್ ಎಸ್ ಮೊಬೈಲ್ ಆ್ಯಪ್ ಮೂಲಕ ಡಿವೈಸ್ ಬಳಸಿಕೊಂಡು ಆ ವ್ಯಕ್ತಿಯ ಬೆರಳು ಮುದ್ರೆ ಪರಿಶೀಲಿಸಿದ್ದಾರೆ.
ಆಗ ಆರೋಪಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿರುವುದು ಪತ್ತೆಯಾಗಿದೆ. ನಂತರ ಆತನನ್ನು ಠಾಣೆಗೆ ಕರೆತಂದು ಕೂಲಂಕುಷವಾಗಿ ವಿಚಾರಣೆ ಮತ್ತು ಪೊಲೀಸರ ದತ್ತಾಂಶದಲ್ಲಿ ಪರಿಶೀಲಿಸಿದಾಗ ಆರೋಪಿ ಮಂಡ್ಯ ಜಿಲ್ಲೆಯ ಕೆ.ಆರ್. ಎಸ್ ಪೊಲೀಸ್ ಠಾಣೆಯ ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ.
ಆರೋಪಿಯು ಕೆಲ ವರ್ಷಗಳಿಂದ ಬೆಂಗಳೂರಿನ ಲಗ್ಗೆರೆಯ ಭೈರವೇಶ್ವರನಗರದಲ್ಲಿ ವಾಸವಾಗಿದ್ದು, ಆಟೋ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. ಪ್ರಕರಣವೊಂದರಲ್ಲಿ ಆರೋಪಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಬಂದು 2017ರಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಸುಮಾರು 5 ವರ್ಷಗಳಿಂದ ತಲೆಮರೆಸಿಕೊಂಡಿರುವುದು ಪತ್ತೆಯಾಗಿದೆ.
ಈ ಮಧ್ಯೆ ನ್ಯಾಯಾಲಯ ಆರೋಪಿ ವಿರುದ್ಧ ಉದ್ಘೋಷಣೆ ಮತ್ತು ಅರೆಸ್ಟ್ ವಾರೆಂಟ್ ಹೊರಡಿಸಿರುವುದರಿಂದ ಮುಂದಿನ ವಿಚಾರಣೆ/ತನಿಖೆಗಾಗಿ ಮಂಡ್ಯ ಜಿಲ್ಲೆಯ ಕೆ.ಆರ್.ಎಸ್ ಪೊಲೀಸ್ ಠಾಣೆ ಅಧಿಕಾರಿಗಳಿಗೆ ಆರೋಪಿಯನ್ನು ಒಪ್ಪಿಸಲಾ ಗಿದೆ ಎಂದು ಪೊಲೀಸರು ತಿಳಿಸಿದರು.
ಪ್ರತಿ ಪೊಲೀಸ್ ಠಾಣೆಯಲ್ಲೂ ಬೆರಳು ಮುದ್ರೆ ಪರಿಶೀಲನೆ ಇತ್ತೀಚೆಗೆ ಎಲ್ಲ ಪೊಲೀಸ್ ಠಾಣೆಗಳಿಗೂ ಎಂ-ಸಿಸಿಟಿಎನ್ ಮೊಬೈಲ್ ಆ್ಯಪ್ ಮೂಲಕ ಬೆರಳು ಮುದ್ರೆ ಪರಿಶೀಲನೆಗಾಗಿ ಚಿಕ್ಕ ಬೆರಳು ಮುದ್ರೆ ಡಿವೈಸ್ ವಿತರಿಸಲಾಗಿದೆ.
ಈ ಡಿವೈಸ್ ಉಪಯೋಗಿಸಿಕೊಂಡು ಮೊಬೈಲ್ ಅಪ್ಲಿಕೇಷನ್ ಮೂಲಕ ಅನುಮಾನಾಸ್ಪದ ವ್ಯಕ್ತಿಗಳ ಬೆರಳು ಮುದ್ರೆ ಪರಿಶೀಲಿಸಿದರೆ ಆ ವ್ಯಕ್ತಿ ಈ ಹಿಂದೆ ಯಾವುದಾದರೂ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆಯೇ? ಎಂಬ ಮಾಹಿತಿ ಲಭ್ಯವಾಗುತ್ತದೆ.