ಕಲಬುರಗಿ: ತಾಲೂಕು ಶಿಕ್ಷಕರ ಪತ್ತಿನ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂದು ನಿಕಟಪೂರ್ವ ಅಧ್ಯಕ್ಷ ಮಹೇಶ ಹೂಗಾರ ಹಾಗೂ ಪ್ರಭಾರಿ ಅಧ್ಯಕ್ಷ ಮಹಾದೇವ ಓಕಳಿ ದೂರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದಲ್ಲಿ 2,870 ಸದಸ್ಯ ಶಿಕ್ಷಕರಿದ್ದು, ಆಡಳಿತ ಮಂಡಳಿಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು, 17 ನಿರ್ದೇಶಕರು ಇದ್ದಾರೆ. ಆದರೆ, 2015ರ ಏಪ್ರಿಲ್ 4ರಿಂದ 2020ರ ಏಪ್ರಿಲ್ 1ರವರೆಗೆ ಅಕ್ರಮ ನಡೆದಿದ್ದು, 2019-20 ಮತ್ತು 2020-21ನೇ ಸಾಲಿನ ಲೆಕ್ಕ ಪರಿಶೋಧನೆ ವರದಿಯಲ್ಲಿ ಇದು ಬಯಲಿಗೆ ಬಂದಿದೆ ಎಂದು ದೂರಿದರು.
ಈ ಅಕ್ರಮದಲ್ಲಿ ಪ್ರಮುಖ ಆರೋಪಿತರ ಜತೆ ಜಂಟಿ ಖಾತೆ ಇರುವುದರಿಂದ ಆಗಿನ ಅಧ್ಯಕ್ಷರುಗಳ ವಿರುದ್ಧವೂ 2020ರ ಜುಲೈ 23ರಂದೇ ಸೆನ್ (ಸೈಬರ್ ಆರ್ಥಿಕ ಮತ್ತು ನಾರ್ಕೋಟಿಕ್ ಅಪರಾಧ) ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ಆದರೆ ಈವರೆಗೂ ಚಾರ್ಜ್‍ಶೀಟ್ ದಾಖಲಿಸಿಲ್ಲ. ಅವ್ಯವಹಾರಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕಾರ್ಯದರ್ಶಿ ಹುದ್ದೆಯಿಂದ ಆರೋಪಿತನನ್ನು ಅಮಾನತು ಮಾಡಲಾಗಿದೆ ಎಂದರು.
ಖಣದಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ತಾವು ಡಿ.22ರಂದು ಸಂಜೆ ಕರ್ತವ್ಯ ಮುಗಿಸಿ ಮನೆಗೆ ಬರುತ್ತಿದ್ದಾಗ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು, ಈ ಬಗ್ಗೆ ಫರಹತಾಬಾದ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಮಹೇಶ ಹೂಗಾರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ನಿರ್ದೇಶಕರಾದ ಅಶೋಕ ಸೊನ್ನ, ಈಶ್ವರ ಗೌಡ ಪಾಟೀಲ, ಉಮಾ ಚವ್ಹಾಣ, ಭಾನುಕುಮಾರ ಗಿರೆಗೋಳ ಇದ್ದರು.