Advertisement

ಅರ್ಧ ಆದಾಯ ಬೋರ್‌ವೆಲ್‌ ಪಾಲು!

12:01 PM Mar 18, 2017 | |

ಬೆಂಗಳೂರು: ಜಲಮಂಡಳಿಗೆ ಹರಿದು ಬರುವ ಆದಾಯದಲ್ಲಿ ಅರ್ಧದಷ್ಟು ಹಣವನ್ನು ನಗರದ ಕೊಳವೆಬಾವಿಗಳೇ ನುಂಗಿಹಾಕುತ್ತಿವೆ.ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಬೆಂಗಳೂರು ನಗರದಲ್ಲಿ ಬರುವ ಎಲ್ಲ ಕೊಳವೆಬಾವಿಗಳ ನಿರ್ವಹಣೆ ಮಾಡುತ್ತಿರುವ ಜಲಮಂಡಳಿ, ವಿದ್ಯುತ್‌ ಸಂಪರ್ಕ ವ್ಯವಸ್ಥೆ ಕಲ್ಪಿಸುವುದರ ಜತೆಗೆ ನೀರು ಮೇಲೆತ್ತಲು ತಗಲುವ ವಿದ್ಯುತ್‌ ವೆಚ್ಚ ಭರಿಸುತ್ತಿದೆ.

Advertisement

ಈ ವೆಚ್ಚವೇ ವರ್ಷಕ್ಕೆ 394.97 ಕೋಟಿ ರೂ. ಆಗುತ್ತಿದ್ದು, ಇದು ಜಲಮಂಡಳಿಯ ಆದಾಯದ ಅಂದಾಜು ಅರ್ಧದಷ್ಟಿದೆ. ಕರ್ನಾಟಕ ಆರ್ಥಿಕ ಸಮೀಕ್ಷೆ 2016-17ರಲ್ಲಿ ಈ ಅಂಶ ಬಹಿರಂಗವಾಗಿದೆ. ಈ ಆರ್ಥಿಕ ಹೊರೆಯಿಂದ ಸರ್ಕಾರಿ ಕೊಳವೆಬಾವಿಗಳು ಮಂಡಳಿಯ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿವೆ.

ಜತೆಗೆ ಕೊಳಾಯಿ (ಸಾರ್ವಜನಿಕ ನಲ್ಲಿ ಸಂಪರ್ಕ) ಮೂಲಕವೂ ಮಂಡಳಿ ನೀರು ಪೂರೈಸುತ್ತಿದ್ದು, ಇದರಿಂದಲೂ ಯಾವುದೇ ಆದಾಯ ಬರುವುದಿಲ್ಲ. ಈ ನೀರಿನ ಪೂರೈಕೆಗೆ ಪ್ರತಿಯಾಗಿ ಬಿಬಿಎಂಪಿ 154 ಕೋಟಿ ರೂ. ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದಿಂದ 8 ಕೋಟಿ ರೂ. ಬರಬೇಕಿದೆ. ಆದರೆ ಈ ಮೊತ್ತ ಕೂಡ ಸಂದಾಯವಾಗಿಲ್ಲ. ಇದು ಜಲಮಂಡಳಿಯ ಸಾಲದ ಹೊರೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. 

ಇನ್ನು ಸಮಾಜದ ಆರ್ಥಿಕ ದುರ್ಬಲ ವರ್ಗಗಳಿಗೆ ಉಚಿತವಾಗಿ ನೀರು ಪೂರೈಸಲಾಗುತ್ತಿದ್ದು, ಪ್ರಸ್ತುತ ಇರುವ ದರಗಳಿಂದ ನಿರ್ವಹಣಾ ವೆಚ್ಚವನ್ನು ಹೇಗೋ ಭರಿಸಬಹುದು. ಆದರೆ, ಮಂಡಳಿಗೆ ಸರ್ಕಾರದ ಆಯವ್ಯಯದಲ್ಲಿ ಯಾವುದೇ ಅನುದಾನ ಇಲ್ಲದಿರುವುದರಿಂದ ಮಂಡಳಿಗೆ ಸಾಲದ ಮರುಪಾವತಿ ಕಷ್ಟಸಾಧ್ಯವಾಗಿದೆ. ಸಾಲದ ವೆಚ್ಚವನ್ನು ಜನಸಾಮಾನ್ಯರಿಂದ ವಸೂಲಿ ಮಾಡದೆ, ಮರುಪಾವತಿ ಮಾಡುವುದು ಕಷ್ಟ ಎಂದೂ ಸಮೀಕ್ಷೆಯಲ್ಲಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಜಲಮಂಡಳಿಗೆ ಬರುವ ವಾರ್ಷಿಕ ಆದಾಯದ ಪ್ರಮಾಣ 1,228.21 ಕೋಟಿ ರೂ. ಸರ್ಕಾರಿ ಸಾಲದ ಅಸಲು ಮತ್ತು ಬಡ್ಡಿ ಮರುಪಾವತಿ ಸೇರಿದಂತೆ ವಾರ್ಷಿಕ ಕಂದಾಯ ವೆಚ್ಚ 1,665.07 ಕೋಟಿ ರೂ. ಆಗುತ್ತದೆ. ವಿದ್ಯುತ್‌ ದರ ಹೆಚ್ಚಳ, ನಿರ್ವಹಣಾ ವೆಚ್ಚ ಮತ್ತು ಇತರೆ ಆಡಳಿತಾತ್ಮಕ ವೆಚ್ಚಗಳೇ ಈ ಅಂತರಕ್ಕೆ ಕಾರಣ ಎಂದು ಹೇಳಲಾಗಿದೆ.

Advertisement

ಅರ್ಧದಷ್ಟೂ ಆಗಲ್ಲ: ಆದರೆ, ಈ ಅಂಕಿ-ಅಂಶವನ್ನು ಸ್ವತಃ ಜಲಮಂಡಳಿ ತಳ್ಳಿಹಾಕುತ್ತದೆ. “ನಗರ ವ್ಯಾಪ್ತಿಯಲ್ಲಿನ ಕೊಳವೆಬಾವಿಗಳ ನಿರ್ವಹಣೆ ಮತ್ತು ವಿದ್ಯುತ್‌ ವೆಚ್ಚ ಹೊರೆಯಾಗಿರುವುದು ನಿಜ. ಆದರೆ, ಅದರ ಮೊತ್ತ ಜಲಮಂಡಳಿ ಆದಾಯದ ಅರ್ಧದಷ್ಟು ಆಗುವುದಿಲ್ಲ. ಮಂಡಳಿ ವ್ಯಾಪ್ತಿಯಲ್ಲಿ ಸುಮಾರು 7,100 ಕೊಳವೆಬಾವಿಗಳಿವೆ.

ಅವುಗಳ ಮಾಸಿಕ ವಿದ್ಯುತ್‌ ಬಿಲ್‌ 2 ಕೋಟಿ ರೂ.ಗಳಿಗೂ ಹೆಚ್ಚು ಬರುತ್ತದೆ. ಇನ್ನು ಅವುಗಳ ನಿರ್ವಹಣೆಯನ್ನೂ ಪರಿಗಣಿಸಿದರೆ, ಹೆಚ್ಚು-ಕಡಿಮೆ ವಾರ್ಷಿಕ 50 ಕೋಟಿ ರೂ. ಆಗುತ್ತದೆ’ ಎಂದು ಜಲಮಂಡಳಿ ಮುಖ್ಯ ಎಂಜಿನಿಯರ್‌ (ಯೋಜನೆ) ಕೆ.ಆರ್‌. ಮಂಜುನಾಥ್‌ ಸ್ಪಷ್ಟಪಡಿಸಿದ್ದಾರೆ.

ವಿದ್ಯುತ್‌ ಬಿಲ್‌ ಸೇರಿದ್ರೆ ಆಗ್ಬಹುದು
ಜಲಮಂಡಳಿ ಮೂಲಗಳ ಪ್ರಕಾರ ನಗರ ವ್ಯಾಪ್ತಿಯಲ್ಲಿ ಖಾಸಗಿ ಮತ್ತು ಸರ್ಕಾರಿ ಸೇರಿದಂತೆ 4 ಲಕ್ಷ ಕೊಳವೆ ಬಾವಿಗಳಿವೆ. ಈ ಪೈಕಿ ಸರ್ಕಾರಿ ಕೊಳವೆಬಾವಿಗಳ ಸಂಖ್ಯೆ 7,923 ಇದ್ದು, ಪ್ರಸ್ತುತ 7,200 ಕಾರ್ಯನಿರ್ವಹಿಸುತ್ತಿವೆ. ಇವುಗಳಿಂದ ಸರಿಸುಮಾರು ಮೂರೂವರೆ ಲಕ್ಷ ಜನರಿಗೆ ನೀರು ಪೂರೈಸಲಾಗುತ್ತದೆ. ಅಂತರ್ಜಲ ಮಟ್ಟ ತೀವ್ರ ಕುಸಿದಿರುವುದರಿಂದ 1,000ದಿಂದ 1,200 ಅಡಿ ಆಳದಿಂದ ನೀರೆತ್ತಬೇಕಾಗಿದೆ. ಇದಕ್ಕಾಗಿ ಕನಿಷ್ಠ 5 ಎಚ್‌ಪಿಯಿಂದ 15 ಎಚ್‌ಪಿ ಸಾಮರ್ಥ್ಯದ ಮೋಟಾರ್‌ಗಳನ್ನು ಅಳವಡಿಸಲಾಗಿದೆ.

ಸಾಕಷ್ಟು ಆಳದಿಂದ ನೀರೆತ್ತಲು ವಿದ್ಯುತ್‌ ಹೆಚ್ಚು ವ್ಯಯವಾಗುತ್ತಿದೆ. ನಿತ್ಯ 30ರಿಂದ 40 ಕೊಳವೆಬಾವಿಗಳಿಗೆ ಸಂಬಂಧಿಸಿದ ದೂರುಗಳೂ ಇರುತ್ತವೆ. ಇದೆಲ್ಲದರ ವೆಚ್ಚ ವಾರ್ಷಿಕ 50ರಿಂದ 60 ಕೋಟಿ ರೂ. ಆಗುತ್ತದೆ. ನಗರಕ್ಕೆ ಕಾವೇರಿ ನೀರು ಪೂರೈಸಲು ತಗಲುವ ವಿದ್ಯುತ್‌ ವೆಚ್ಚ ಮಾಸಿಕ 30ರಿಂದ 40 ಕೋಟಿ ರೂ. ಆಗುತ್ತದೆ. ಅದನ್ನು ಸೇರಿಸಿ ಲೆಕ್ಕಹಾಕಿದರೆ, ವಾರ್ಷಿಕ 350ರಿಂದ 400 ಕೋಟಿ ರೂ. ಆಗುತ್ತದೆ. ಅದು ಒಟ್ಟಾರೆ ಆದಾಯದ ಅರ್ಧದಷ್ಟು ಎಂದು ಹೇಳಬಹುದು ಎಂದು ಜಲಮಂಡಳಿಯ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next