Advertisement

ಖಾತೆ ಬದಲಾವಣೆ ವಿಳಂಬ: ತಹಶೀಲ್ದಾರ್‌ಗೆ ಹೈ ಚಾಟಿ

06:10 AM Mar 01, 2019 | |

ಬೆಂಗಳೂರು: ವ್ಯಕ್ತಿಯೊಬ್ಬರ ಜಮೀನು ಖಾತೆ ಬದಲಾವಣೆ ಕುರಿತ ವಿವಾದಕ್ಕೆ ಸಂಬಂಧಿಸಿದಂತೆ ಕನಕಪುರ ತಹಶೀಲ್ದಾರ್‌ ಆನಂದಯ್ಯ ಗುರುವಾರ ಪುನಃ ಹೈಕೋರ್ಟ್‌ ಕೆಂಗಣ್ಣಿಗೆ ಗುರಿಯಾದರು. ಪ್ರಕರಣದ ಕುರಿತು ಪ್ರಮಾಣಪತ್ರ ಸಲ್ಲಿಸುವಂತೆ ಬುಧವಾರಷ್ಟೇ ಹೈಕೋರ್ಟ್‌ ತಾಕೀತು ಮಾಡಿತ್ತು.

Advertisement

ಅದರಂತೆ, ಗುರುವಾರ ಖುದ್ದು ಹಾಜರಾಗಿ ಪ್ರಮಾಣಪತ್ರ ಸಲ್ಲಿಸಿದ ತಹಶೀಲ್ದಾರ್‌ ಆನಂದಯ್ಯ, ನಾನು ಕನಕಪುರ ತಹಶೀಲ್ದಾರ್‌ ಆಗಿ ಅಧಿಕಾರ ವಹಿಸಿಕೊಳ್ಳುವ ಮೊದಲೇ ಆಗಿರುವ ತಪ್ಪು ಇದು, ಅಷ್ಟಕ್ಕೂ ನನಗೆ ಈಗ ಕೊಳ್ಳೆಗಾಲಕ್ಕೆ ವರ್ಗಾವಣೆಯಾಗಿದೆ’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಇದರಿಂದ ಕೆರಳಿದ ನ್ಯಾ. ಎಸ್‌.ಎನ್‌. ಸತ್ಯನಾರಾಯಣ, 24 ಗಂಟೆಗಳಲ್ಲಿ ಅದ್ಹೇಗೆ ವರ್ಗಾವಣೆ ಆಯಿತು. ಒಂದೇ ದಿನದಲ್ಲಿ ವರ್ಗಾವಣೆ ಆಗಿದೆ ಅಂದರೆ ಈ ಮನುಷ್ಯ (ತಹಶೀಲ್ದಾರ್‌) ಭಾರಿ ಪವರ್‌ಫ‌ುಲ್‌ ಆಗಿರಬೇಕು. ಈ ವರ್ಗಾವಣೆ ಹೇಗಾಯಿತು, ಇದರ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಾಗಬೇಕು.

ನಿಮ್ಮನ್ನು ಅಷ್ಟು ಸುಲಭವಾಗಿ ಕೊಳ್ಳೇಗಾಲಕ್ಕೆ ಹೋಗಲು ಬಿಡುವುದಿಲ್ಲ. ನೀವು ವರ್ಗಾವಣೆ ಮಾಡಿಸಿಕೊಂಡಿರಬಹುದು. ಆದರೆ, ಕೋರ್ಟ್‌ ಕೇಸ್‌ ಮುಗಿಬೇಕಲ್ಲ. ನಿಮ್ಮನ್ನು ಕೊಳ್ಳೇಗಾಲಕ್ಕೆ ಅಲ್ಲ, ಪರಪ್ಪನ ಅಗ್ರಹಾರಕ್ಕೆ ಕಳಿಸುವುದು ನನಗೆ ಗೊತ್ತು ಎಂದು ಕಿಡಿಕಾರಿದರು.

ಬುಧವಾರ ವಿಚಾರಣೆಗೆ ಹಾಜರಾಗಿ ಕೋರ್ಟ್‌ಗೆ ಸಲ್ಲಿಸಲಾದ ದಾಖಲೆಗಳಲ್ಲಿ ತಪ್ಪಾಗಿದೆ ಎಂದು ಒಪ್ಪಿಕೊಂಡು, ಮರು ದಿನ ಬಂದು ನನ್ನ ಅವಧಿಯಲ್ಲಿ ಆದ ಪ್ರಮಾದ ಅಲ್ಲ ಎಂದು ಪ್ರಮಾಣ ಪತ್ರ ಸಲ್ಲಿಸುತ್ತಿದ್ದೀರಿ, ಮೇಲಾಗಿ ಒಂದೇ ದಿನದಲ್ಲಿ ವರ್ಗಾವಣೆ ಸಹ ಆಗಿದ್ದೀರಿ.

Advertisement

ನಡೆದಿರುವ ತಪ್ಪನ್ನು ಮುಚ್ಚಿ ಹಾಕಲು ಪ್ರಯತ್ನ ಮಾಡುತ್ತಿರುವಂತಿದೆ. ಆದರೆ, ಅದು ಸಾಧ್ಯವಿಲ್ಲ. ಪ್ರಕರಣದ ಸಂಪೂರ್ಣ ದಾಖಲೆಳೊಂದಿಗೆ ಮಾರ್ಚ್‌ 6ರಂದು ಪುನಃ ಖುದ್ದು ಹಾಜರಾಗಿ ವಿವರಣೆ ಕೊಡಬೇಕು ಇಲ್ಲದಿದ್ದರೆ ಜೀಪ್‌ನಲ್ಲಿ ಕೋರ್ಟ್‌ಗೆ ಬರುವಂತೆ ಮಾಡುತ್ತೇನೆ ಎಂದು ನ್ಯಾಯಮೂರ್ತಿಗಳು ತಹಶೀಲ್ದಾರ್‌ಗೆ ಎಚ್ಚರಿಕೆ ನೀಡಿ ವಿಚಾರಣೆ ಮುಂದೂಡಿದರು.

ಪ್ರಕರಣವೇನು?: ಕನಕಪುರ ತಾಲೂಕಿನ ಹಾರೋಹಳ್ಳಿ ಹೋಬಳಿಯ ಹುಳುಗೊಂಡನಹಳ್ಳಿ ಸರ್ವೇ ನಂ-58ರಲ್ಲಿನ ಒಂದು ಎಕರೆ ಜಮೀನಿನ ಖಾತೆ ಮಾಡಿಕೊಡಲು ವೆಂಕಟೇಶ್‌ ಎಂಬುವರು 2017ರಲ್ಲಿ  ಸಲ್ಲಿಸಿದ್ದ ಮನವಿಗೆ ಕ್ರಮ ಕೈಗೊಳ್ಳಲು ವಿಳಂಬ ಮಾಡಿದ್ದಕ್ಕೆ ಬುಧವಾರಷ್ಟೇ ತಹಶೀಲ್ದಾರ್‌ ಆನಂದಯ್ಯ ಅವರನ್ನು ಬುಧವಾರ ಹೈಕೋರ್ಟ್‌ ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಹಾಗೆಯೇ, ಸೇವೆಯಿಂದ ಅಮಾನತುಪಡಿಸುವ ಎಚ್ಚರಿಕೆ ನೀಡಿ, ಕರ್ತವ್ಯಲೋಪ ಎಸಗಿದ್ದಕ್ಕೆ ವಿವರಣೆ ನೀಡಿ ಗುರುವಾರ ಪ್ರಮಾಣಪತ್ರ ಸಲ್ಲಿಸುವಂತೆ ಸೂಚಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next