ಹುಬ್ಬಳ್ಳಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಮೂರು ಸಮೀಕ್ಷೆಗಳ ಪ್ರಕಾರ ಕಾಂಗ್ರೆಸ್ ಪಕ್ಷ ಸುಮಾರು 130 ಕ್ಷೇತ್ರಗಳಲ್ಲಿ ಮುಂದೆ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್ತು ಸದಸ್ಯ ಸಲೀಂ ಅಹ್ಮದ್ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರಕಾರದ ಭ್ರಷ್ಟಾಚಾರ, ಆಡಳಿತ ವೈಫಲ್ಯ, ದರ ಹೆಚ್ಚಳ, ದುರಾಡಳಿತದಿಂದ ಜನ ಬೇಸತ್ತಿದ್ದು ಕಾಂಗ್ರೆಸನ್ನು ಅಧಿಕಾರಕ್ಕೆ ತರಲು ತೀರ್ಮಾನಿಸಿದ್ದಾರೆ. ನಾವು 150 ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದರು.
ಬಿಜೆಪಿಯವರ ಆಂತರಿಕ ಸಮೀಕ್ಷೆ ಪ್ರಕಾರ ಅವರು ಕೇವಲ 65 ಸ್ಥಾನಗಳಲ್ಲಿ ಮುಂದೆ ಇದ್ದಾರೆ. ಜನವಿರೋಧಿ ಆಡಳಿತ, ಬೆಲೆ ಏರಿಕೆ, ಭ್ರಷ್ಟಾಚಾರದಲ್ಲಿ ತೊಡಗಿರುವ ಬಿಜೆಪಿಯವರು, ಜನಸಂಕಲ್ಪ ಯಾತ್ರೆ ಬದಲು ಜನರ ಕ್ಷಮೆಯಾಚನೆ ಯಾತ್ರೆ ನಡೆಸುವುದು ಸೂಕ್ತ ಎಂದರು.
ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ 9 ಲಕ್ಷ ಕೋಟಿ ರೂ. ಹೂಡಿಕೆ ಆಗಿದೆ ಎಂದು ಹೇಳುತ್ತಿದ್ದಾರೆ. ಬೆಂಗಳೂರು ಇನ್ನಿತರ ಕಡೆಯ ರಸ್ತೆ ಇನ್ನಿತರ ಸೌಲಭ್ಯ ಕಂಡು ಇದ್ದ ಉದ್ಯಮದಾರರೇ ಹೊರಹೋಗಲು ಮುಂದಾಗಿದ್ದಾರೆ. ವಿಧಾನಸಭೆ ಚುನಾವಣೆಗಾಗಿ ಕಾಂಗ್ರೆಸ್ ನಿಂದ ಸ್ಪರ್ಧಿಸಲು ಕೆಪಿಸಿಸಿಗೆ 1,000 ಅಧಿಕ ಅರ್ಜಿಗಳು ಬಂದಿವೆ. ಮುಂದಿನ ಚುನಾವಣೆ, ಬಿಜೆಪಿ ಸರಕಾರದ ದುರಾಡಳಿತ, ಬೆಲೆ ಏರಿಕೆ, ಭ್ರಷ್ಟಾಚಾರದ ವಿರುದ್ಧ 224 ಕ್ಷೇತ್ರಗಳಲ್ಕೂ ಬಸ್ ಯಾತ್ರೆ ಕೈಗೊಳ್ಳಲಾಗುತ್ತಿದೆ. ಎಲ್ಲ ನಾಯಕರು ಪಾಲ್ಗೊಳ್ಳಲಿದ್ದು, ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಎಂದರು.
ಮತದಾರರ ಹೆಸರು ತೆಗೆದು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಗಳ ಮಟ್ಟದ ತನಿಖೆ ನಡೆಯಬೇಕು. ಇದು ಕೇವಲ ಬೆಂಗಳೂರಿನಲ್ಲಿ ಅಷ್ಟೇ ಅಲ್ಲದೆ ರಾಜ್ಯದೆಲ್ಲಡೆಯಲ್ಲೂ ನಡೆದಿದ್ದು, ಸೋಲಿನ ಭೀತಿಯಿಂದ ಬಿಜೆಪಿಯವರು ಇಂತಹ ನೀಚ ಕೃತ್ಯಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.