ಬೆಂಗಳೂರು: ಆದಾಯಕ್ಕೂ ಮೀರಿ ಆಸ್ತಿಗಳಿಸಿದ ಆರೋಪ ಸಂಬಂಧ ಬಿಡಿಎ ಎಂಜಿನಿಯರ್ ಎನ್.ಜಿ.ಗೌಡಯ್ಯ, ಇವರ ಪತ್ನಿ ಹಾಗೂ ಕೆಐಎಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಸ್ವಾಮಿ ಪುತ್ರ ಮಂಗಳವಾರ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ವಿಚಾರಣೆಗೆ ಹಾಜರಾಗಿದ್ದರು.
ಬೆಳಗ್ಗೆ ಎಸಿಬಿ ಕಚೇರಿಗೆ ಆಗಮಿಸಿದ ಗೌಡಯ್ಯ ಮತ್ತು ಪತ್ನಿಯನ್ನು ಕೆಲ ಹೊತ್ತು ವಿಚಾರಣೆ ನಡೆಸಿದ ತನಿಖಾಧಿಕಾರಿಗಳು, ಮಧ್ಯಾಹ್ನ ಅರಮನೆ ರಸ್ತೆಯಲ್ಲಿರುವ ಬಿಡಿಎ ಕಚೇರಿಗೆ ಕರೆದೊಯ್ದು ಗೌಡಯ್ಯ ಸಮ್ಮುಖದಲ್ಲೇ ಮೂರು ಲಾಕರ್‌ಗಳು ಹಾಗೂ ಇತರೆಡೆ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಎರಡು ಫ್ಲ್ಯಾಟ್‌ಗಳ ಕುರಿತ ದಾಖಲೆ, ಹತ್ತಾರು ಎಕರೆ ಕೃಷಿ ಜಮೀನಿಗೆ ಸೇರಿದ ಪತ್ರಗಳು ಹಾಗೂ ಸಹಕಾರ ಸಂಘವೊಂದಕ್ಕೆ 60-70 ಲಕ್ಷ ರೂ. ಹೂಡಿಕೆ ಮಾಡಿರುವ ದಾಖಲೆಗಳು ಲಭ್ಯವಾಗಿವೆ. ಈ ಹಿನ್ನೆಲೆಯಲ್ಲಿ ಮತ್ತೂಮ್ಮೆ ಎಸಿಬಿ ಕಚೇರಿಗೆ ಕರೆತಂದ ಅಧಿಕಾರಿಗಳು ಬ್ಯಾಂಕ್‌ಅಕೌಂಟ್, ಲಾಕರ್‌ಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.
ಸ್ವಾಮಿಗೆ ಅನಾರೋಗ್ಯ: ಕೆಐಎಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಸ್ವಾಮಿಗೆ ಈಗಾಗಲೇ ಎರಡು ಬಾರಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಆದರೂ ಸ್ವಾಮಿ ಗೈರಾಗಿದ್ದಾರೆ. ಅನಾರೋಗ್ಯ ಕಾರಣ ನೀಡಿ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ, ಶಸ್ತ್ರ ಚಿಕಿತ್ಸೆ ಕೂಡ ನಡೆಯಲಿದೆ ಎಂದು ಹೇಳಿದ್ದಾರೆ. ಹೀಗಾಗಿ ಮಂಗಳವಾರ ಅವರ ಪುತ್ರ ವಿಚಾರಣೆಗೆ ಹಾಜರಾಗಿದ್ದರು ಎಂದು ಎಸಿಬಿ ಮೂಲಗಳು ತಿಳಿಸಿವೆ.
ಎಸಿಬಿಯಿಂದ ಸರ್ಕಾರಕ್ಕೆ ಪತ್ರ: ಆದಾಯಕ್ಕೂ ಮೀರಿ ಆಸ್ತಿಗಳಿಸಿದ ಆರೋಪ ಸಂಬಂಧ ಎನ್.ಜಿ.ಗೌಡಯ್ಯ ಹಾಗೂ ಸ್ವಾಮಿ ಅವರನ್ನು ಅಮಾನತು ಮಾಡುವಂತೆ ಎಸಿಬಿ ಅಧಿಕಾರಿಗಳು ಸಂಬಂಧಿಸಿದ ಇಲಾಖೆಗಳಿಗೆ ಈಗಾಗಲೇ ಪತ್ರ ಬರೆದಿದ್ದಾರೆ.
ಆದರೆ, ಸರ್ಕಾರದಿಂದ ಇದುವರೆಗೂ ಈ ಕುರಿತು ಯಾವುದೇ ಅಧಿಕೃತ ಆದೇಶ ಹೊರಬಂದಿಲ್ಲ. ಮತ್ತೂಂದೆಡೆ ಕೆಲ ದಿನಗಳಲ್ಲಿ ಪ್ರಕರಣದ ವಿಚಾರಣೆ ಮುಕ್ತಾಯಗೊಳ್ಳುತ್ತಿದ್ದಂತೆ ಜಾರಿ ನಿರ್ದೆಶನಾಲಯ (ಇಡಿ) ಮತ್ತು ಆದಾಯ ತೆರಿಗೆ ಇಲಾಖೆ(ಐಟಿ)ಗೆ ಪತ್ರದ ಮೂಲಕ ಪ್ರಕರಣದ ತನಿಖೆ ನಡೆಸುವಂತೆ ಪತ್ರ ಬರೆಯಲಾಗುವುದು ಎಂದು ಎಸಿಬಿ¿ ಮೂಲಗಳು ತಿಳಿಸಿವೆ.