Advertisement

Mangaluru ಎಲ್ಲ ಪೊಲೀಸ್‌ ಸಿಬಂದಿಗೂ ವಸತಿ: ಡಾ| ಪರಮೇಶ್ವರ್‌

11:23 PM Oct 29, 2023 | |

ಮಂಗಳೂರು: ಅಗತ್ಯವಿರುವ ಎಲ್ಲ ಪೊಲೀಸರಿಗೂ ಮನೆ ಒದಗಿಸಲಾಗುವುದು ಎಂದು ಗೃಹ ಸಚಿವ ಡಾ| ಜಿ.ಪರಮೇಶ್ವರ್‌ ಹೇಳಿದ್ದಾರೆ.

Advertisement

ರವಿವಾರ ವಾಮಂಜೂರಿನಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.2015ರಲ್ಲಿ ಮೊದಲ ಬಾರಿ ಗೃಹ ಸಚಿವನಾಗಿದ್ದಾಗ ಪೊಲೀಸ್‌ ಗೃಹ ಯೋಜನೆ ಆರಂಭಿಸಿದ್ದು ಅದರಂತೆ 13,000 ವಸತಿಗಳನ್ನು ನಿರ್ಮಿಸಿಕೊಡಲಾಗಿದ್ದು ಉಳಿದವರಿಗೂ ಮನೆ ನಿರ್ಮಿಸಿಕೊಡಲಾಗುವುದು. ಎಲ್ಲ ಠಾಣೆಗಳಿಗೂ ಹೊಸ ಕಟ್ಟಡ, ಇತರ ಮೂಲಸೌಕರ್ಯ ಒದಗಿಸಿಕೊಡಲಾಗುತ್ತಿದೆ. ರಾಜ್ಯದ ಪೊಲೀಸ್‌ ದೇಶದಲ್ಲೇ ಶಿಸ್ತಿನ, ಉತ್ತಮ ಪೊಲೀಸ್‌ ಎಂಬ ಹೆಸರು ಪಡೆದಿದೆ. ಪೊಲೀಸರು ಪ್ರಾಮಾಣಿಕವಾಗಿ ಶಿಸ್ತಿನಿಂದ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ಪೂರಕವಾದ ವಾತಾವರಣ ಸೃಷ್ಟಿ ಮಾಡಿಕೊಡಲಾಗಿದೆ ಎಂದು ಸಚಿವರು ತಿಳಿಸಿದರು.

ಶಾಂತಿ ಕಾಪಾಡುವ ಗುರಿ
ಪೊಲೀಸ್‌ ಅಧಿಕಾರಿಗಳಿಗೆ ದ.ಕ. ಜಿಲ್ಲೆಯಲ್ಲಿ ಶಾಂತಿ ಕಾಪಾಡುವ ಗುರಿ ನೀಡಲಾಗಿದೆ. ಒಂದು ವೇಳೆ ಶಾಂತಿ ಕಾಪಾಡದಿದ್ದರೆ ಅಧಿಕಾರಿಗಳನ್ನೇ ಗುರಿ ಮಾಡಲಾಗುವುದು ಎಂಬುದಾಗಿ ತಿಳಿಸಲಾಗಿದೆ ಎಂದವರು ಹೇಳಿದರು.

ಬಡತನ ವರದಿ ಮರುಪರಿಶೀಲನೆ
ರಾಜ್ಯ ಸರಕಾರ ಜನಪರವಾಗಿ ಕೆಲಸ ಮಾಡುತ್ತಿದೆ. ಇಡೀ ದೇಶದಲ್ಲಿ ಶೇ. 38 ಮಂದಿ ಬಡತನ ರೇಖೆಗಿಂತ ಕೆಳಗಿರುವ ಅಂಕಿ ಅಂಶ ಇದೆ. ಆದರೆ ರಾಜ್ಯದಲ್ಲಿ ಶೇ. 80ಕ್ಕೂ ಅಧಿಕ ಮಂದಿ ಬಡತನ ರೇಖೆಗಿಂತ ಕೆಳಗಿದ್ದಾರೆ ಎಂಬ ವರದಿಗಳಿವೆ. ಇದರ ಮರುಪರಿಶೀಲನೆಗೆ ಕ್ರಮ ಕೈಗೊಳ್ಳಲಾಗಿದೆ. ಕಾಂಗ್ರೆಸ್‌ ಸರಕಾರ ಕೇವಲ ಚುನಾವಣೆ ದೃಷ್ಟಿಯಿಂದ ಗ್ಯಾರಂಟಿ ಕೊಟ್ಟಿಲ್ಲ. ಆದರೆ ಬಡವರಿಗಾಗಿ ಸಾವಿರಾರು ಕೋ.ರೂ. ಖರ್ಚು ಮಾಡಲಾಗುತ್ತಿದೆ. ಹೆಣ್ಮಕ್ಕಳ ಸಶಕ್ತೀಕರಣ ನಡೆಯುತ್ತಿದೆ ಎಂದರು.

ಪ್ರಾಮಾಣಿಕತೆಯಿಂದ ನ್ಯಾಯ ಒದಗಿಸಿ
ವಿಧಾನಸಭೆಯ ಸ್ಪೀಕರ್‌ ಯು.ಟಿ. ಖಾದರ್‌ ಮಾತನಾಡಿ, ಪೊಲೀಸರು ಪ್ರಾಮಾಣಿಕತೆಯಿಂದ ನ್ಯಾಯಯುತವಾಗಿ ಕೆಲಸ ಮಾಡಬೇಕು. ನ್ಯಾಯ ಸಿಗುತ್ತದೆ ಎಂಬ ಭಾವನೆ ಜನರಲ್ಲಿ ಮೂಡಿದಾಗ ಸ್ವಸ್ಥ ಸಮಾಜ ನಿರ್ಮಾಣವಾಗುತ್ತದೆ. ಶೇ.10ರಷ್ಟು ಮಂದಿ ಪೊಲೀಸರು ಮಾಡುವ ತಪ್ಪಿಗೆ ಎಲ್ಲ ಪೊಲೀಸರ ಮೇಲೆ ದೋಷಾರೋಪಣೆ ಮಾಡುವಂತಾಗಬಾರದು. ಪ್ರಾಮಾಣಿಕ ಠಾಣಾಧಿಕಾರಿಯಿಂದ ಆ ಠಾಣೆಯ ವ್ಯಾಪ್ತಿಯಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯವಿದೆ ಎಂದು ಹೇಳಿದರು.

Advertisement

ಡ್ರಗ್ಸ್‌ ಮಟ್ಟ ಹಾಕಿ
ಅಧ್ಯಕ್ಷತೆ ವಹಿಸಿದ್ದ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ| ಭರತ್‌ ಶೆಟ್ಟಿ ಮಾತನಾಡಿ, ಮಂಗಳೂರಿನಲ್ಲಿ ಡ್ರಗ್ಸ್‌ ನಿರ್ಮೂಲನೆಗೆ ಇನ್ನಷ್ಟು ಕ್ರಮಗಳನ್ನು ತೆಗೆದುಕೊಳ್ಳಬೇಕು. ಪೊಲೀಸರಿಗೆ ಕಾರ್ಯಾಚರಣೆಗೆ ಮುಕ್ತ ವಾತಾವರಣವಿರಬೇಕು. ಕೆಲವು ಪೊಲೀಸ್‌ ಠಾಣೆಗಳಲ್ಲಿ ಸಿಬಂದಿ ಕೊರತೆ ನೀಗಿಸಬೇಕು. ಎಂದು ಗೃಹಸಚಿವರಿಗೆ ಮನವಿ ಮಾಡಿದರು.

ವಿಧಾನ ಪರಿಷತ್‌ ಸದಸ್ಯರಾದ ಹರೀಶ್‌ ಕುಮಾರ್‌, ಮಂಜುನಾಥ ಭಂಡಾರಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಹೌಸಿಂಗ್‌ ಬೋರ್ಡ್‌ನ ಮುಖ್ಯ ಎಂಜಿನಿಯರ್‌ ಮಂಜುನಾಥ್‌, ಡಿಸಿಪಿಗಳಾದ ಸಿದ್ದಾರ್ಥ್ ಗೋಯಲ್‌, ದಿನೇಶ್‌ ಕುಮಾರ್‌ ಬಿ.ಪಿ ಉಪಸ್ಥಿತರಿದ್ದರು. ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ಸ್ವಾಗತಿಸಿದರು. ಎಸಿಪಿ ಧನ್ಯಾ ಎನ್‌. ನಾಯಕ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next