Advertisement

ಕಟಪಾಡಿ: ರಸ್ತೆಯಲ್ಲಿ ದಿನನಿತ್ಯ ತಪ್ಪದ ಅವಘಡ

03:34 PM Sep 08, 2022 | Team Udayavani |

ಕಟಪಾಡಿ: ಲೋಕೋಪಯೋಗಿ ಇಲಾಖೆಯ ಕಟಪಾಡಿಯಿಂದ ಶಿರ್ವ ಸಂಪರ್ಕದ ರಾಜ್ಯ ಹೆದ್ದಾರಿಯಲ್ಲಿ ಗುಂಡಿಗಳು ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.

Advertisement

ಬೃಹತ್‌ ಗಾತ್ರದ ಮರದ ಅಡಿಭಾಗದಲ್ಲಿ ಪ್ರಮುಖ ರಸ್ತೆಯು ಗುಂಡಿ ಬಿದ್ದಿದ್ದು, ನೇರವಾಗಿ ಸಂಚರಿಸುವ ಮಂದಿಗೆ ನೆರಳಿನ ಕಾರಣದಿಂದ ಈ ಗುಂಡಿಯು ಪಕ್ಕನೆ ಗಮನಕ್ಕೆ ಬರುವುದಿಲ್ಲ. ಕತ್ತಲಾದಾಗ ಗಾಢ ಕತ್ತಲು ಆವರಿಸಿ ಗುಂಡಿಯು ಗಮನಕ್ಕೆ ಬರುತ್ತಿಲ್ಲ. ಗುಂಡಿಯಿಂದ ಎದ್ದಿರುವ ಜಲ್ಲಿ ರಾಶಿಯು ವಾಹನ ಸವಾರರನ್ನು ಧರೆಗುರುಳಿಸುತ್ತಿದೆ. ಗುಂಡಿಗೆ ಬಿದ್ದ ಲಘು ವಾಹನಗಳು, ಬಿಡಿಭಾಗ ಕಳಚುತ್ತಿದ್ದು ಮಾಲಕರನ್ನು ಕಂಗೆಡಿಸುತ್ತಿದೆ. ಚಾಲಕರಿಗೆ ಅಪಾಯಕಾರಿ ಚಾಲನ ಪ್ರದೇಶವಾಗಿ ಪರಿವರ್ತಿತವಾಗಿದೆ. ವಾಹನಗಳು ಎದುರು ಬದುರಾದಲ್ಲಿ ಗುಂಡಿ ತಪ್ಪಿಸುವ ಭರದಲ್ಲಿ ಮತ್ತಷ್ಟು ಹೆಚ್ಚಿನ ಅವಘಡ ಸಂಭವಿಸುವ ಸಾಧ್ಯತೆ ಇದ್ದು ಹೆಚ್ಚಿನ ಅಪಾಯಕ್ಕೆ ಎಡೆಮಾಡಿಕೊಡಲಿದೆ ಎಂದು ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.

ಹಗಲು ಹೊತ್ತಿನಲ್ಲಿ ನೆರಳಿನ ಪ್ರದೇಶವಾಗಿದ್ದು, ರಾತ್ರಿ ಹೊತ್ತಿನಲ್ಲಿ ಕತ್ತಲು ತುಂಬಿದ ಬಹಳಷ್ಟು ಸೆನ್ಸಿಟಿವ್‌ ಜಾಗದಲ್ಲಿಯೇ ಈ ಗುಂಡಿ ಸೃಷ್ಟಿಯಾಗಿದ್ದು, ಈ ಕೂಡಲೇ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಎಚ್ಚೆತ್ತು ಸದಾ ವಾಹನ ನಿಬಿಡ ಮತ್ತು ಜನದಟ್ಟಣೆಯಿಂದ ಕೂಡಿದ ಈ ಪ್ರದೇಶದ ರಾಜ್ಯ ಹೆದ್ದಾರಿಯ ಬಗ್ಗೆ ಹೆಚ್ಚಿನ ಗಮನ ಹರಿಸಿ ದೊಡ್ಡ ಮಟ್ಟದ ಅವಘಡಗಳು ನಡೆಯದಂತೆ ರಸ್ತೆಯನ್ನು ಸರಿಪಡಿಸಿ ವಾಹನ ಸವಾರರ ಸಂಚಾರಕ್ಕೆ ಸುವ್ಯವಸ್ಥೆಯನ್ನು ಕಲ್ಪಿಸುವಂತೆ ಜನರು ಆಗ್ರಹಿಸುತ್ತಿದ್ದಾರೆ.

ಕಟಪಾಡಿ ಜಂಕ್ಷನ್‌ನಿಂದ ಸುಮಾರು 150 ಮೀ ದೂರ ದಲ್ಲಿ ಕಂಡು ಬರುವ ಈ ಗುಂಡಿ ಯಲ್ಲಿ ಬೆರಳೆಣಿಕೆಯ ದಿನಗಳ ಅಂತರದಲ್ಲಿ ಹಲವು ವಾಹನ ಸವಾರರು ಬಿದ್ದು ರಕ್ತ ಗಾಯ ಗೊಂಡಿರುತ್ತಾರೆ. ಮಕ್ಕಳ ಸಮೇತ ವಾಗಿ ದಂಪತಿ ಬಿದ್ದಿದ್ದು, ಈ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ಬೇಸರ ವ್ಯಕ್ತವಾಗಿದೆ.

ಶೀಘ್ರ ಸರಿಪಡಿಸಿ: ಬಹಳಷ್ಟು ಅಪಾಯಕಾರಿ ಗುಂಡಿಯಾಗಿ ಪರಿಣಮಿಸಿದೆ. ಸ್ವಲ್ಪ ಏಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಈಗಾಗಲೇ ಬಿದ್ದು ಗಾಯಗೊಂಡವರು ಅವ್ಯವಸ್ಥೆಯ ಬಗ್ಗೆ ಬೈಯ್ಯುತ್ತಿದ್ದಾರೆ. ರಿಕ್ಷಾ ಸಂಚರಿಸುವಾಗ ಗುಂಡಿ ತಪ್ಪಿಸಲು ಯತ್ನಿಸಿದಲ್ಲಿ ಆಯತಪ್ಪಿದಲ್ಲಿ ಗಂಭೀರ ಸ್ವರೂಪದ ಅನಾಹುತ ಗ್ಯಾರಂಟಿ. ಕೂಡಲೇ ಇಲಾಖಾಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತು ವಾಹನಗಳ ಸುಗಮ ಸಂಚಾರಕ್ಕೆ ರಸ್ತೆ ಸರಿಪಡಿಸಲಿ. – ಸಚಿನ್‌ ಶೇರಿಗಾರ್‌, ರಿಕ್ಷಾ ಚಾಲಕ, ಕಟಪಾಡಿ

Advertisement

ನಿತ್ಯವೂ ಅವಘಡ: ದಿನನಿತ್ಯವೆಂಬಂತೆ ಅವಘಡಗಳು ಸಂಭವಿಸುತ್ತಿದ್ದರೂ ರಸ್ತೆ ಸರಿಪಡಿಸುತ್ತಿಲ್ಲ. ಕನಿಷ್ಠ ಎಚ್ಚರಿಕೆ ಫಲಕವನ್ನೂ ಅಳವಡಿಸಿಲ್ಲ. ದಾರಿ ದೀಪದ ವ್ಯವಸ್ಥೆಯನ್ನೂ ಕಲ್ಪಿಸಿಲ್ಲ. ಪ್ರಾಣಾಪಾಯ ಸಂಭವಿಸುವ ಮುನ್ನವೇ ಎಚ್ಚೆತ್ತು ಕೂಡಲೇ ರಸ್ತೆ ಸರಿಪಡಿಸಿ ಸಂಭಾವ್ಯ ಹೆಚ್ಚಿನ ಅಪಘಾತಗಳನ್ನು ತಪ್ಪಿಸಲಿ. – ಪ್ರಮೋದ್‌ ಸಾಲ್ಯಾನ್‌, ದ್ವಿಚಕ್ರ ವಾಹನ ಸವಾರ, ದುರ್ಗಾನಗರ

ಕೂಡಲೇ ಸೂಕ್ತ ಕ್ರಮ: ಎಂಜಿನಿಯರ್‌ ಗಮನಕ್ಕೆ ತಂದು ವಾಹನಗಳ ಸುಗಮ ಸಂಚಾರಕ್ಕೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. –ಜಗದೀಶ್‌ ಭಟ್‌, ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next