ಮೂಡಿಗೆರೆ: ಭಾರೀ ಮಳೆಯಿಂದ ದಾರಿ ಕಾಣದೆ ವಾಹನಗಳ ಮಧ್ಯೆ ಸರಣಿ ಅಪಘಾತವಾಗಿ ನಾಲ್ವರು ಗಾಯಗೊಂಡಿದ್ದಾರೆ. ಮೂಡಿಗೆರೆ ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿಯ ಬಾರ್ಗಲ್ ಬಳಿ ಎರಡು ಕಾರು ಹಾಗೂ ಲಾರಿ ಮಧ್ಯೆ ಅಪಘಾತವಾಗಿದೆ.
ಒಂದೇ ಸಮನೆ ಮಳೆ ಸುರಿಯುತ್ತಿದ್ದುದರಿಂದ ರಸ್ತೆ ಕಾಣದೆ ವಾಹನ ಚಲಾಯಿಸೋದು ಕಷ್ಟವಾಗಿತ್ತು. ಇಂತಹ ಸಂದರ್ಭದಲ್ಲಿ ಲಾರಿ ಹಾಗೂ ಆಲ್ಟೋ ಕಾರಿನ ಮಧ್ಯೆ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಕಾರು ರಸ್ತೆ ಬದಿ ಹೋಗಿ ನಿಂತಿದೆ. ಕೆಲವೇ ಕ್ಷಣದಲ್ಲಿ ಸಫಾರಿ ವಾಹನವೊಂದು ಲಾರಿಗೆ ಡಿಕ್ಕಿ ಹೊಡೆದು ನಂತರ ಕಾರಿಗೆ ಡಿಕ್ಕಿಯಾಗಿದೆ.
ಮೊದಲು ಲಾರಿಗೆ ಡಿಕ್ಕಿ ಹೊಡೆದು ನಂತರ ರಸ್ತೆ ಬದಿ ಇದ್ದ ಆಲ್ಟೋ ಕಾರಿಗೆ ಸಫಾರಿ ವಾಹನ ಅಪ್ಪಳಿಸಿದ ಪರಿಣಾಮ ಇದರಲ್ಲಿದ್ದ ಒಂದೇ ಕುಟುಂಬದ ನಾಲ್ವರಿಗೆ ಗಂಭೀರ ಗಾಯಗಳಾಗಿವೆ. ಅಪಘಾತದ ರಭಸಕ್ಕೆ ಕಾರಿನ ಚಾಲಕ ಕಾರಿನ ಒಳಗೆ ಸಿಲುಕಿಕೊಂಡು ಅವರನ್ನು ಹೊರತೆಗೆಯಲು ಗ್ರಾಮಸ್ಥರು ಹರಸಾಹಸ ಪಟ್ಟಿದ್ದಾರೆ.
ಅಪಘಾತದಲ್ಲಿ ಚಿಕ್ಕಮಗಳೂರಿನ ಗಾಂಧಿ ನಗರ ಬಡಾವಣೆಯ ಸರ್ದಾರ್ (55), ಗೌಸ್ (60) ಶಬನಮ್ (45) ಶಿಫಾ(17) ಗಾಯಗೊಂಡಿದ್ದಾರೆ. ಇವರನ್ನು ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರಿಗೆ ತೆರಳಿದ್ದ ಇವರು ವಾಪಸ್ ಚಿಕ್ಕಮಗಳೂರಿಗೆ ಬರುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಅಫಘಾತದಿಂದಾಗಿ ಕೆಲ ಕಾಲ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ರಸ್ತೆ ಇಕ್ಕೆಲಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಆಲ್ದೂರು ಪಿಎಸ್‌ಐ ರಮೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಸರಣಿ ಅಪಘಾತ ಸಂಭವಿಸುತ್ತಿದ್ದಂತೆ ಗ್ರಾಮಸ್ಥರು ಸ್ಥಳಕ್ಕಾಗಮಿಸಿ ಪೋಲೀಸರಿಗೆ ಸಹಕರಿಸಿದರು. ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.