ಗುಂಡ್ಲುಪೇಟೆ(ಚಾಮರಾಜನಗರ): ಚಿಕ್ಕಲ್ಲೂರು ಜಾತ್ರೆಗೆ ತೆರಳುತ್ತಿದ್ದ ಟಾಟಾ ಏಸ್ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿರುವ ಘಟನೆ ತಾಲೂಕಿನ ಲಕ್ಕೂರು ಗೇಟ್ ಬಳಿಯಲ್ಲಿ ನಡೆದಿದೆ.
ತಾಲೂಕಿನ ಹಂಗಳ ಗ್ರಾಮದ ಸಿದ್ದರಾಜು(33) ಸ್ಥಳದಲ್ಲೇ ಮೃತಪಟ್ಟ ದುರ್ದೈವಿ.
ನಾಗರಾಜು(18), ತೇಜಸ್(19) ಎಂಬ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಚಾಮರಾಜನಗರ ಸೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನಿಸಲಾಗಿದೆ. ಉಳಿದ ಸಿದ್ದರಾಜು(42) , ಸಿದ್ದಪ್ಪ (37) ಬಿನ್ ಹನುಮಯ್ಯ, ಜಗದೀಶ ಆಲಿಯಾಸ್ ಸಿದ್ದರಾಜು (37) ಬಿನ್ ಸಿದ್ದಯ್ಯ, ರೂಪೇಶ(42) ಬಿನ್ ಬಸವಯ್ಯ ,ಪ್ರಜ್ವಲ್(13) ಬಿನ್ ರೂಪೇಶ, ಪ್ರಶಾಂತ್ ಬಿನ್ ರಾಚಯ್ಯ ಇವರನ್ನು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ವಿವರ: ತಾಲೂಕಿನ ಹಂಗಳ ಗ್ರಾಮದ ಟಾಟಾ ಏಸ್ ನಲ್ಲಿ ಒಂಭತ್ತು ಮಂದಿ ಚಿಕ್ಕಲ್ಲೂರು ಜಾತ್ರೆಗೆ ತೆರಳುತ್ತಿದ್ದ ವೇಳೆ ಲಕ್ಕೂರು ಗೇಟ್ ಬಳಿ ಅತೀ ವೇಗದಿಂದ ಬಂದ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಟಾಟಾ ಏಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯಾದ ರಭಸಕ್ಕೆ ಟಾಟಾ ಏಸ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಬಸ್ ಮುಂಭಾಗಕ್ಕೂ ಕೂಡ ಜಖಂ ಆಗಿದೆ. ಬಸ್ ಚಾಲಕನಿಗೂ ಗಾಯಗಳಾಗಿದೆ ಎನ್ನಲಾಗುತ್ತಿದೆ.
ಮಾಹಿತಿ ಅರಿತ ತೆರಕಣಾಂಬಿ ಠಾಣೆ ಪೊಲೀಸರು ಕೂಡಲೇ ಸ್ಥಳಕ್ಕೆ ದೌಡಾಯಿಸಿ ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಟಾಟಾ ಏಸ್ ಹಾಗೂ ಬಸ್ ಎರಡು ಅತೀ ವೇಗದಿಂದ ಬಂದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ಸಂಬಂಧ ಟಾಟಾ ಏಸ್ ಹಾಗೂ ಕೆಎಸ್‌ಆರ್‌ಟಿಸಿ ಬಸ್ ಎರಡು ವಾಹನಗಳನ್ನು ವಶಕ್ಕೆ ಪಡೆದ ತೆರಕಣಾಂಬಿ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಅಪಘಾತದಿಂದ ಚಾಮರಾಜನಗರ ಗುಂಡ್ಲುಪೇಟೆ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಅರ್ಧ ಗಂಟೆಗೂ ಅಧಿಕ ಕಾಲ ಟ್ರಾಫಿಕ್ ಜಾಮ್ ಉಂಟಾಯಿತು. ನಂತರ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.