ನವದೆಹಲಿ: ಪಶ್ಚಿಮಬಂಗಾಳದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಅಲ್ಪ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು ಎಂದು ಮಾಧ್ಯಮಗಳು, ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿದ್ದು, ಇದೀಗ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಬಿಜೆಪಿಯ ಸುವೇಂದು ಅಧಿಕಾರಿ 1622 ಮತಗಳಿಂದ ಪರಾಜಯಗೊಳಿಸಿರುವುದಾಗಿ ವರದಿಯಾಗಿದೆ.
ಮಮತಾ ಬ್ಯಾನರ್ಜಿ ಅವರು 1,200ಮತಗಳಿಂದ ಜಯ ಸಾಧಿಸಿದ ಸುದ್ದಿ ಹೊರಬಿದ್ದ ನಂತರ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಶಿವಸೇನೆ, ಲಾಲುಪ್ರಸಾದ್ ಯಾದವ್, ಜೆಡಿಎಸ್ ಮುಖಂಡ ಕುಮಾರಸ್ವಾಮಿ ಸೇರಿದಂತೆ ಹಲವು ಮುಖಂಡರು ಶುಭಾಶಯಗಳನ್ನು ತಿಳಿಸಿ ಟ್ವೀಟ್ ಮಾಡಿದ್ದರು.
ಜಿದ್ದಾಜಿದ್ದಿನ ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿ ಮಮತಾ ಮತ್ತು ಅಧಿಕಾರಿ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಕೊನೆಯ ಹಂತದಲ್ಲಿ ಮಮತಾ ಬ್ಯಾನರ್ಜಿ ಆರು ಮತಗಳ ಅಂತರದ ಹಿನ್ನಡೆ ಅನುಭವಿಸಿದ್ದರು. ನಂತರದ ಸುತ್ತಿನಲ್ಲಿ 850 ಮತಗಳ ಅಂತರ ಕಾಯ್ದುಕೊಂಡಿರುವುದಾಗಿ ವರದಿಯಾಗಿತ್ತು. ಕೊನೆಗೆ 1,200 ಮತಗಳ ಅಂತರದಲ್ಲಿ ಗೆಲುವು ಸಾಧಿಸಿರುವುದಾಗಿ ವರದಿಯಾಗಿತ್ತು.
ಪಶ್ಚಿಮಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ 213 ಸ್ಥಾನಗಳಲ್ಲಿ ಭರ್ಜರಿ ಮುನ್ನಡೆ ಸಾಧಿಸಿದ್ದು, ಭಾರತೀಯ ಜನತಾ ಪಕ್ಷ 78 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸತತ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಏರುವಲ್ಲಿ ಯಶಸ್ವಿಯಾಗಿದೆ.
ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗೆಲುವಿನ ಕುರಿತು ಗೊಂದಲ ಮುಂದುವರಿದಿರುವ ನಡುವೆಯೇ ಮಮತಾ ಅವರು, ನಾವು ಬಂಗಾಳದಲ್ಲಿ ಜಯ ಸಾಧಿಸಿದ್ದೇವೆ. ನಂದಿಗ್ರಾಮದ ಜನರು ಯಾವುದೇ ತೀರ್ಪು ನೀಡಿದರು ಅದನ್ನು ಸ್ವೀಕರಿಸುವುದಾಗಿ ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.