ಹೊಸದಿಲ್ಲಿ : ಮುಷ್ಕರ ನಿರತ ಜೂನಿಯರ್ ಡಾಕ್ಟರ್‌ಗಳ ಬೇಡಿಕೆಯನ್ನು ಈಡೇರಿಸಲು ದಿಲ್ಲಿಯ ಏಮ್ಸ್ ಆಸ್ಪತ್ರೆಯ ನಿವಾಸಿ ವೈದ್ಯರು ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರಕಾರಕ್ಕೆ 48 ತಾಸುಗಳ ಗಡುವು ನೀಡಿದ್ದಾರೆ.
ಒಂದೊಮ್ಮೆ ಪಶ್ಚಿಮ ಬಂಗಾಲ ಸರಕಾರ ಜೂನಿಯರ್ ವೈದ್ಯರ ಬೇಡಿಕೆಯನ್ನು ಈ ಗಡುವಿನೊಳಗೆ ಈಡೇರಿಸದಿದ್ದರೆ ಅನಿರ್ದಿಷ್ಟಾವಧಿ ಮುಷ್ಕರ ಅನಿವಾರ್ಯವಾದೀತು ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.
ಜೂನಿಯರ್ ವೈದ್ಯರ ಮುಷ್ಕರದಿಂದ ಉಂಟಾಗಿರುವ ಗಂಭೀರ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಮಮತಾ ಬ್ಯಾನರ್ಜಿ ಇಂದು ಶನಿವಾರ ತಾನು ಮುಷ್ಕರ ನಿರತರನ್ನು ಕಂಡು ಚರ್ಚಿಸುವುದಾಗಿ ಹೇಳಿದ್ದಾರೆ.
ಆದರೆ ಮಮತಾ ಅವರ ಈ ಹೇಳಿಕೆಯ ಹೊರತಾಗಿಯೂ ಏಮ್ಸ್‌ನ ನಿವಾಸಿ ವೈದ್ಯರು “ಎಲ್ಲಕ್ಕಿಂತ ಮೊದಲು ಜೂನಿಯರ್ ವೈದ್ಯರ ಬೇಡಿಕೆಗಳನ್ನು ಪೂರೈಸಿ; ವೈದ್ಯ ಸಮುದಾಯದಲ್ಲಿ ಬೇಷರತ್ ಕ್ಷಮೆಯನ್ನು ಕೇಳಿ’ ಎಂದು ಪಟ್ಟು ಹಿಡಿದಿದ್ದಾರೆ.
ಮಮತಾ ಅವರನ್ನು ಭೇಟಿಯಾಗುವುದಕ್ಕೆ ಮುಷ್ಕರ ನಿರತ ವೈದ್ಯರು ನಿನ್ನೆ ಶುಕ್ರವಾರವೇ ನಿರಾಕರಿಸಿದ್ದರಲ್ಲದೆ “ಮಮತಾ ಬೇಷರತ್ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದ್ದರು.
ದೇಶಾದ್ಯಂತದ ವೈದ್ಯ ಸಮುದಾಯದ ಬೆಂಬಲದೊಂದಿಗೆ ವ್ಯಾಪಕವಾಗಿ ನಡೆಯುತ್ತಿರುವ ಮುಷ್ಕರವನ್ನು ಹಿಂಪಡೆಯಲು ಜೂನಿಯರ್ ವೈದ್ಯರು ಆರು ಶರತ್ತುಗಳನ್ನು ಪಶ್ಚಿಮ ಬಂಗಾಲ ಸರಕಾರಕ್ಕೆ ವಿಧಿಸಿದ್ದಾರೆ.