ಮೈಸೂರು: ಅಂಗವಿಕಲತೆಯನ್ನು ದೋಷವೆಂದು ಪರಿಗಣಿಸದೆ ಸವಾಲಾಗಿ ಸ್ವೀಕರಿಸುವ ಮೂಲಕ ಸಾಧನೆಯ ಹಾದಿಯತ್ತ ಮುನ್ನಡೆಯಬೇಕಿದೆ ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸಿಇಒ ಡಾ.ಎ.ಎಂ.ರಮೇಶ್ ಹೇಳಿದರು.
ನಗರದ ಜೆಎಸ್‌ಎಸ್ ಅಂಗವಿಕಲರ ಪಾಲಿಟೆಕ್ನಿಕ್ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ವತಿಯಿಂದ ಸೋಮವಾರ ಆಯೋಜಿಸಿದ್ದ ಸೈನ್ಸ್ ಎಕ್ಸ್‌ಪೋ ಫಾರ್ ಸ್ಟುಡೆಂಟ್ಸ್ ವಿಥ್ ಸ್ಪೆಷಲ್ ನೀಡ್ಸ್ ವಿಜ್ಞಾನ-ತಂತ್ರಜ್ಞಾನ ಮಾದರಿ ವಸ್ತುಪ್ರದರ್ಶನ ಮತ್ತು ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅನೇಕರು ಅಂಗವೈಕಲ್ಯ ಹೊಂದಿದ್ದರೂ ಇಡೀ ವಿಶ್ವವೇ ಸ್ಮರಿಸುವಂತಹ ಕೊಡುಗೆ ನೀಡಿದ್ದಾರೆ. ಪ್ರಮುಖವಾಗಿ ಥಾಮಸ್ ಆಲ್ವಾ ಎಡಿಸನ್, ಆಲ್ಬರ್ಟ್ ಐನ್‌ಸ್ಟಿàನ್, ಸ್ಟೀಫನ್ ಹಾಕಿಂಗ್ ಜತೆಗೆ ಭಾರತದ ಡಾ.ಸುರೇಶ್ ಅಡ್ವಾನಿ ಅವರು ಪೋಲಿಯೋ ಪೀಡಿತರಾಗಿದ್ದರೂ ವಿಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ತಮ್ಮದೇ ಕೊಡುಗೆ ನೀಡಿದ್ದು, ಇಂತಹ ಮಹನೀಯರನ್ನು ನೀವು ಸ್ಫೂರ್ತಿಯಾಗಿ ಸ್ವೀಕರಿಸುವ ಮೂಲಕ ಸಾಧನೆಯತ್ತ ಮುನ್ನಡೆಯಬೇಕಿದೆ. ಅಲ್ಲದೆ ವಿದ್ಯಾರ್ಥಿಗಳು ಕಿರಿಯ ವಯಸ್ಸಿನಲ್ಲೇ ಅದಮ್ಯ ಚೈತನ್ಯ ಬೆಳೆಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ವಿಶ್ರಾಂತ ಕುಲಪತಿ ಪೊ›.ಪಿ.ವೆಂಕಟರಾಮಯ್ಯ ಮಾತನಾಡಿ, ಅಂಗವಿಕಲತೆ ಕೊರತೆ ಆಗಬಾರದು. ಯಾರೂ ಅದನ್ನು ದೋಷ ಎಂದು ಭಾವಿಸದೇ ಸಿಗುವ ಅವಕಾಶಗಳನ್ನು ಬಳಸಿಕೊಂಡು ಮುನ್ನಡೆಯಬೇಕು. ಯಾರು ಹುಟ್ಟುತ್ತಲೇ ಅಂಗವಿಕಲರಾಗುವುದಿಲ್ಲ, ವಿವಿಧ ಕಾರಣಕ್ಕೆ ಆಕಸ್ಮಿಕವಾಗಿ ಇಂತಹ ಸಮಸ್ಯೆಗಳಿಗೆ ಸಿಲುಕುತ್ತಾರೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ಭರವಸೆ, ಸ್ವ-ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ವಿಜ್ಞಾನ ವಸ್ತುಪ್ರದರ್ಶನ ಎಲ್ಲರ ಗಮನ ಸೆಳೆಯಿತು. ವಿವಿಧ ಶಾಲೆ-ಕಾಲೇಜುಗಳ ಅಂಗವಿಕಲ ವಿದ್ಯಾರ್ಥಿಗಳು ವಿಜ್ಞಾನ ಮತ್ತು ತಂತ್ರಜ್ಞಾನ ಎಲೆಕ್ಟ್ರಾನಿಕ್, ಜ್ಯುವೆಲ್ಲರಿ ಸಂಬಂಧಿತ ಮಾದರಿಗಳನ್ನು ಪ್ರದರ್ಶಿಸಿ ನೋಡುಗರ ಮೆಚ್ಚುಗೆ ಪಡೆದರು. ಕಾರ್ಯಕ್ರಮದಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠದ ಪ್ರಧಾನ ಕಾರ್ಯದರ್ಶಿ ಸಿ.ಜಿ.ಬೆಟಸೂರಮಠ, ತಂತ್ರಜ್ಞಾನ ಶಿಕ್ಷಣ ವಿಭಾಗದ ನಿರ್ದೇಶಕ ಸಿ.ರಂಗನಾಥಯ್ಯ ಮತ್ತಿತರರು ಹಾಜರಿದ್ದರು.